ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಯಾದವರಾವ್ ಜೋಷಿಯವರ ಧೀರೋದಾತ್ತ ನಡವಳಿಕೆ

Vishwanath S
Updated On : 12 Nov 2013, 11:18 am

ಯಾದವರಾವ್ ಜೋಷಿ ಮೂಲತಃ ಮರಾಠಿಗರಾದರೂ ಕರ್ನಾಟಕವನ್ನೇ ತಮ್ಮ ತವರನ್ನಾಗಿ ಮಾಡಿಕೊಂಡಿದ್ದ ನಿಷ್ಠಾವಂತ ಸಮಾಜಸೇವಕ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬೆಳೆಸಿದವರು ಅವರು. ದ.ರಾ.ಬೇಂದ್ರೆ, ಅಡಿಗರು, ಗರೂಡ ಸದಾಶಿವರಾಯರು, ಮಾಸ್ತಿಯವರು ಮುಂತಾದ ಗಣ್ಯರ ಪ್ರೀತಿಯನ್ನು ಸಂಪಾದಿಸಿದ್ದರು. ಅರ್ಧ ಶತಮಾನಕ್ಕೂ ಹೆಚ್ಚು ಕರ್ನಾಟಕದಲ್ಲಿದ್ದುದರಿಂದ ಕರ್ನಾಟಕದ ಯಾದವರಾಯರು ಎಂದೇ ಕರೆಯಲ್ಪಡುತ್ತಿದ್ದರು. ಸ್ಥಿತಪ್ರಜ್ಞೆಗೆ ಇನ್ನೊಂದು ಹೆಸರೇ ಅವರಾಗಿದ್ದರು. ಏಕೆಂದರೆ 1948ರಲ್ಲಿ, 1975-77ರ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದರೂ ಸಹ ಅವರೆಂದೂ ವಿಚಲಿತರಾಗಿರಲಿಲ್ಲ. ಇತರ ಸತ್ಯಾಗ್ರಹಿಗಳಿಗೆ ಅವರು ಉತ್ಸಾಹ ತುಂಬುತ್ತಿದ್ದರು. ಹೊ.ವೆ.ಶೇಷಾದ್ರಿ, ಕೃ.ಸೂರ್ಯನಾರಾಯಣರಾವ್, ನ.ಕೃಷ್ಣಪ್ಪ, ಅಜಿತ್ ಕುಮಾರ್ ಮುಂತಾದ ಅನೇಕ ಅಗ್ರಶ್ರೇಣಿಯ ಕಾರ್ಯಕರ್ತರ ಪಡೆಯನ್ನು ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಾದವರಾಯರು ತುರ್ತುಪರಿಸ್ಥಿತಿಯ ಸಮಯದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದರು. ಇದೇ ಸಮಯದಲ್ಲಿ ಅವರ ತಂಗಿಯಿಂದ ಒಂದು ತಂತಿ ಸಂದೇಶ ಬಂತು. ಅದರಲ್ಲಿ ಅವರ ತಂದೆ ಕೃಷ್ಣ ಜೋಷಿಯವರು ತೀವ್ರ ಅನಾರೋಗ್ಯದಿಂದ ನರಳುತ್ತಿದ್ದಾರೆಂದೂ, ಬದುಕುಳಿಯುವ ಯಾವ ಭರವಸೆಯೂ ಇಲ್ಲದುದರಿಂದ ಪೆರೋಲ್ ಮೇಲೆ ಬಂದು ಅಂತಿಮ ದರ್ಶನ ಪಡೆಯಬೇಕೆಂದು ತಿಳಿಸಲಾಗಿತ್ತು. ಯಾದವರಾಯರು ತಮ್ಮ ತಂದೆಗೆ ಒಬ್ಬನೇ ಮಗನಾದುದರಿಂದ ತನ್ನ ತಂದೆಯ ದರ್ಶನ ಮಾಡುವ ತವಕ ಒಂದೆಡೆಯಾದರೆ, ತನ್ನ ವೈಯಕ್ತಿಕ ಅನಿವಾರ್ಯತೆಗಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕೆಂದು ಬೇಡಿಕೊಳ್ಳುವ ದೈನ್ಯ ಪರಿಸ್ಥಿತಿ ಇನ್ನೊಂದೆಡೆ.
ಇಂತಹ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ದೀರ್ಘಾಲೋಚನೆ ಮಾಡಿ ಕೊನೆಗೊಂದು ಧೀರೋದಾತ್ತ ನಿಲುವನ್ನು ಪಡೆದರು. ಅದೆಂದರೆ ಯಾವುದೇ ಕಾರಣಕ್ಕೂ ಸರ್ಕಾರದ ಕೃಪಾಭಿಕ್ಷೆ ಪಡೆಯಬಾರದೆಂದು. ಈ ಸಂದರ್ಭದಲ್ಲಿ ತಮ್ಮ ತಂದೆಗೆ ಒಂದು ಪತ್ರವನ್ನು ಬರೆದು, ತಾವು ಅನ್ಯರ ದಾಸನಂತೆ ಒಬ್ಬ ಕೈದಿಯಾಗಿ ಪೊಲೀಸರ ಕಾವಲಿನಲ್ಲಿ ಬಂದು ತಂದೆಯವರ ಗೌರವ ಪ್ರತಿಷ್ಠೆಗಳಿಗೆ ಕುಂದು ತರಲು ಇಷ್ಟವಿಲ್ಲದ್ದರಿಂದ ಬರಲಾಗದುದಕ್ಕೆ ಕ್ಷಮಿಸಬೇಕೆಂದು ಕೇಳಿಕೊಂಡಿದ್ದರು. ಅವರ ಕಾಗದವನ್ನೋದಿದ ಕೃಷ್ಣ ಜೋಷಿಯವರು ಮಗ ಬರಲಿಲ್ಲವೆಂದು ಚಿಂತಿಸದೆ ತಮ್ಮ ಮಗನ ನಿಲುವಿನ ಬಗ್ಗೆ ಹೆಮ್ಮೆಪಟ್ಟರು. ಇದು ಸಮಾಜದಲ್ಲಿ ದೊಡ್ಡವರು ಎನಿಸಿಕೊಂಡವರ ದೊಡ್ಡತನವನ್ನು ಮತ್ತು ಆತ್ಮೋನ್ನತಿಯನ್ನು ಸೂಚಿಸುತ್ತದೆ.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments