ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಲ್ಯಾಣ ಯೋಜನೆಗಳಿಗೆ ಕತ್ತರಿ?

Vishwanath S
Updated On : 14 Nov 2013, 11:40 am

ಚಾಲ್ತಿ ವರ್ಷದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು, ದೇಶದ ಒಟ್ಟು ಉತ್ಪಾದನೆ ಹಾಗೂ ಸೇವಾ ಸೌಲಭ್ಯಗಳ ಮೌಲ್ಯದ (ಜಿಡಿಪಿ) ಶೇಕಡಾ 4.8ರ ಮಿತಿಯಲ್ಲೇ ಇಡಲಾಗುವುದೆಂದು ವಿತ್ತಮಂತ್ರಿ ಪಿ. ಚಿದಂಬರಮ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಆ ಮಾತನ್ನು ಉಳಿಸಿಕೊಳ್ಳಲು ಭಗೀರಥ ಪ್ರಯತ್ನಕ್ಕೂ ಸರ್ಕಾರ ಸಿದ್ಧವಾಗಿರುವಂತಿದೆ. ಆದರೆ ಆರ್ಥಿಕ ಪರಿಸ್ಥಿತಿಯ ಅತೃಪ್ತಿಕರ ಅವಸ್ಥೆ, ಹಣದ ಅತಿಪ್ರಸರಣದ ಪರಿಣಾಮದ ಬೆಲೆ ಏರಿಕೆಯಿಂದಾಗಿ, ಕೇಂದ್ರ ಸರ್ಕಾರದ ವೆಚ್ಚ ವಿಪರೀತವಾಗಿ ಹೆಚ್ಚುತ್ತಿದೆ. ಇಡೀ ವರ್ಷದಲ್ಲಿ ಬಳಸಬಹುದಾದ ಬಜೆಟ್ ಕೊರತೆಯ ಮೊತ್ತದ ಶೇಕಡಾ 74ರಷ್ಟು ಆಗಸ್ಟ್ ಕೊನೆಯ ವೇಳೆಗೇ ಖರ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಕೊರತೆಯ ಮಿತಿಯ ಪಾಲನೆ ವಿಪರೀತ ಕಷ್ಟ ಸಾಧ್ಯ.
ಬಜೆಟ್ ಕೊರತೆ ಲಕ್ಷ್ಮಣರೇಖೆಯನ್ನು ದಾಟಿದರೆ ಏನಾಗಬಹುದು? ಅಂತಾರಾಷ್ಟ್ರೀಯ ಮೌಲ್ಯ ಮಾಪನ ಸಂಸ್ಥೆಗಳು ಸಾಲಕ್ಕೆ  ಸಂಬಂಧಿಸಿದಂತೆ ಭಾರತದ ದರ್ಜೆಯನ್ನು (ಅಂದರೆ ವಿಶ್ವಾಸಾರ್ಹತೆಯನ್ನು) ಇಳಿಸಬಹುದು. ಆಗ ಬಡ್ಡಿ ದುಬಾರಿಯಾಗಲಿದೆ. ಇಂತಹ ಪರಿಸ್ಥಿತಿಯನ್ನು ಗಮನಿಸಿ, ಕೇಂದ್ರ ಸರ್ಕಾರದ ನಾನಾ ಮಂತ್ರಾಲಯಗಳ ಹಿರಿಯ ಅಧಿಕಾರಿಗಳು ಈಗಾಗಲೇ ಹಲವಾರು ಸಭೆಗಳನ್ನು ನಡೆಸಿ ವಿಚಾರ-ವಿನಿಮಯ ಮಾಡಿಕೊಂಡಿದ್ದಾರೆ. ರಾಜಸ್ವ ಆದಾಯವನ್ನು ಹೆಚ್ಚಿಸುವುದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ಸಾಧ್ಯವಿರುವಷ್ಟೂ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವುದೊಂದೇ ಈಗ ಇರುವ ದಾರಿ. ಆದರೆ ಮಿತವ್ಯಯ ಎಂದ ಕೂಡಲೇ ಹಿಂದೆ ಅನೇಕ ಸಂದರ್ಭಗಳಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಅನುಸರಿಸಿದ ಸಾಂಕೇತಿಕ (ಕೆಲವು ಬಾರಿ ಹಾಸ್ಯಾಸ್ಪದ) ಕ್ರಮಗಳು ನೆನಪಿಗೆ ಬರುವುದು ಸಹಜ.
ಈಗಿನ ಪರಿಸ್ಥಿತಿಯಲ್ಲಿ ಅಂತಹ ಸಾಂಕೇತಿಕ ಕ್ರಮಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಸರ್ಕಾರದ ಹಿರಿಯ ಅಧಿಕಾರಿಗಳ ಪ್ರಕಾರ ಹಲವು ಅತ್ಯಗತ್ಯ ವಿಷಯಗಳನ್ನು ಬಿಟ್ಟು ಉಳಿದೆಲ್ಲ ಮಂತ್ರಾಲಯಗಳಿಗೂ ಬಜೆಟ್‌ನಲ್ಲಿ ಒದಗಿಸಿರುವ ಹಣದ ಪ್ರಮಾಣಕ್ಕೇ ಕತ್ತರಿ ಹಾಕುವುದೇ ಸೂಕ್ತ. ಸಬ್ಸಿಡಿಗಳಂತಹ ಕಾರ್ಯಕ್ರಮಕ್ಕೆ ಕತ್ತರಿ ಹಾಕುವಂತಿಲ್ಲ. ಕತ್ತರಿ ಪ್ರಯೋಗಕ್ಕೆ ಸುಲಭವಾಗಿ ಸಿಗುವ ಯೋಜನೆಗಳೆಂದರೆ, ಇಡೀ ದೇಶದಲ್ಲಿ ವ್ಯಾಪಕವಾಗಿರುವ ಬಡಜನ ಕಲ್ಯಾಣ ಕಾರ್ಯಕ್ರಮಗಳೇ. ಗ್ರಾಮೀಣ ಉದ್ಯೋಗ ಖಾತ್ರಿ, ಸರ್ವಶಿಕ್ಷಾ ಅಭಿಯಾನ, ಬಗೆಬಗೆಯ ವಸತಿ ನಿರ್ಮಾಣ ಯೋಜನೆಗಳಿಗೇ ಕತ್ತರಿ ಪ್ರಯೋಗವಾಗುವ ಅಪಾಯವಿದೆ. ಈಗಾಗಲೇ ಈ ವಿಚಾರದಲ್ಲಿ ಹಲವು ಸಚಿವರ ಪ್ರತಿಭಟನೆಯೂ ಪ್ರಕಟವಾಗಿದೆ. ನಿಜ, ಇನ್ನೂ ಸರ್ಕಾರದ ಮಟ್ಟದಲ್ಲಿ ಯಾವ ನಿರ್ಧಾರವೂ ಪ್ರಕಟವಾಗಿಲ್ಲ. ಸದ್ಯಕ್ಕೆ ಚಿಂತನೆ ಕಂಡು ಬಂದಿರುವುದು ಅಧಿಕಾರಿಗಳ ಮಟ್ಟದಲ್ಲೇ. ಸರ್ಕಾರ ಈ ಬಿಕ್ಕಟ್ಟಿನಿಂದ ಹೇಗೆ ಪಾರಾಗುತ್ತೋ ಗೊತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement