ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾರ್ಮಿಕರ ಕಷ್ಟ ಸರ್ಕಾರಕ್ಕೇಕೆ ಕಾಣುತ್ತಿಲ್ಲ?

Vishwanath S
Updated On : 14 Nov 2013, 11:45 am

ಬಡ ಕಾರ್ಮಿಕರ ಬಾಳನ್ನು ಹಸನುಗೊಳಿಸುವ ಉದ್ದೇಶದಿಂದ 2005-06ರಲ್ಲಿ ಕಲ್ಯಾಣ ಮಂಡಳಿಯೊಂದನ್ನು ಸ್ಥಾಪಿಸಿ ಆ ಮೂಲಕ ಕಾರ್ಮಿಕರಿಗೆ ಹಲವು ಜನೋಪಯೋಗಿ ಯೋಜನೆಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಬೃಹತ್ ಕಟ್ಟಡಗಳ ಮಾಲೀಕರಿಂದ ಸೆಸ್ ಸಂಗ್ರಹಿಸಿ ಸುಮಾರು 2,000 ಕೋಟಿಗೂ ಅಧಿಕ ಹಣವನ್ನು ಕೂಡಿಡಲಾಗಿದೆ. ಸರ್ಕಾರವು ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಇದರ ಬಗ್ಗೆ ಪ್ರಚಾರ ನೀಡುತ್ತಿದ್ದು ಸಾವಿರಾರು ಬಡ ಕಾರ್ಮಿಕರಿಗೆ ನೆರವು ನೀಡಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಇಂಥ ಸದುದ್ದೇಶದ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲವೆಂಬುದು ಈಗಾಗಲೇ ಕಾರ್ಮಿಕ ಸಂಘಗಳ ಅರಿವಿಗೆ ಬಂದಿದೆ. ಕೂಡಿಟ್ಟಿರುವ ಆ ಬೃಹತ್ ಮೊತ್ತದಲ್ಲಿ ಶೇ. 5 ಭಾಗವೂ ಕಾರ್ಮಿಕರನ್ನು ತಲುಪದೆ ಕೋಟಿಗಟ್ಟಲೆ ಹಣ ಮಂಡಳಿಯಲ್ಲಿ ಕೊಳೆಯುತ್ತಿದೆ. ಸರ್ಕಾರಕ್ಕೆ ಹೆಚ್ಚು ಹೆಚ್ಚು ಕಾರ್ಮಿಕರನ್ನು ಮಂಡಳಿಗೆ ನೋಂದಾಯಿಸುವ ಇರಾದೆ ಇದೆಯೇ ಹೊರತು ನೋಂದಾಯಿತ ಕಾರ್ಮಿಕರಿಗೆ ಶೀಘ್ರವಾಗಿ ಸೌಲಭ್ಯ ಕಲ್ಪಿಸುವಲ್ಲಿ ಸೋಲುತ್ತಿದೆ. ಹೆಚ್ಚು ಹೆಚ್ಚು ಕಾರ್ಮಿಕರನ್ನು ನೋಂದಾಯಿಸುವ ಭರದಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರಲ್ಲದವರಿಗೂ ಗುರುತಿನ ಚೀಟಿ ನೀಡಲಾಗಿದೆ. ಆದರೆ ಈಗಾಗಲೇ ನೋಂದಾಯಿಸಿರುವ ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಇನ್ನೂ ಗಗನ ಕುಸುಮವಾಗಿದೆ. ಉದಾಹರಣೆಗೆ ಕಲ್ಯಾಣ ಮಂಡಳಿಗೆ ಮದುವೆ ಸಹಾಯಧನಕ್ಕಾಗಿ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ ಹಲವಾರು ಅರ್ಜಿಗಳನ್ನು ಕಳುಹಿಸಿ ಸಾಕಷ್ಟು ತಿಂಗಳುಗಳೇ ಆದರೂ ಇದುವರೆಗೂ ಒಬ್ಬರಿಗೂ ಸೌಲಭ್ಯಗಳು ಬಂದಿಲ್ಲ. ಕಳೆದ ವರ್ಷ ಕಳುಹಿಸಿದ ವಿದ್ಯಾರ್ಥಿ ವೇತನದ ಅರ್ಜಿಗಳಲ್ಲಿ ಹಲವು ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಗೃಹಸಾಲ ಹಾಗೂ ಪಿಂಚಣಿಯಂತೂ ರಾಜ್ಯದ ಯಾವ ಮೂಲೆಯಲ್ಲಿಯೂ ಪ್ರಾರಂಭವಾದ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ವಿಚಾರಿಸಿದಾಗ ಮಂಡಳಿಯಲ್ಲಿ ಸೂಕ್ತ ಅಧಿಕಾರಿಗಳಿಲ್ಲವೆಂದೂ, ಇಲ್ಲವೇ ಸಹಾಯಧನದ ಹೆಚ್ಚಳ ಮಾಡಿರುವುದರ ಬಗ್ಗೆ ತಕರಾರಿದೆಯೆಂದೋ... ಏನೋ ಒಂದು ಕಾರಣವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ಸಂಘಗಳು ಸಾಕಷ್ಟು ಬಾರಿ ಮಂಡಳಿಯ ಗಮನ ಸೆಳೆದರೂ ಇನ್ನೂ ಮಂಡಳಿ ಎಚ್ಚೆತ್ತುಕೊಂಡಿಲ್ಲ.
ಇದರ ಜೊತೆಗೆ ಇನ್ನೊಂದು ಬಹು ಮುಖ್ಯವಾದ ಸಮಸ್ಯೆಯೆಂದರೆ ಬಹುಪಾಲು  ಕಟ್ಟಡ ಕಾರ್ಮಿಕರು ಮುಗ್ಧರೂ ಹಾಗೂ ಅನಕ್ಷರಸ್ಥರಾಗಿದ್ದು ಅವರ ಮಕ್ಕಳನ್ನು ಶಾಲೆಗೆ ಸೇರಿಸುವಾಗ ತಮ್ಮ ಹಾಗೂ ಮಕ್ಕಳ ಹೆಸರನ್ನು ತಪ್ಪಾಗಿ ಬರೆಸಿರುವ ಸಂಭವಗಳಿದ್ದು, ಇತ್ತೀಚಿನ ಬ್ಯಾಂಕ್ ಅಥವಾ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಲ್ಲಿನ ಹೆಸರಿಗೂ ಮಕ್ಕಳ ಶಾಲಾ ದಾಖಲಾತಿಗೂ ಹೊಂದಿಕೆಯಾಗದೆ ಕಾರ್ಮಿಕರ ಮಕ್ಕಳು ವಿದ್ಯಾರ್ಥಿ ವೇತನದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
 ಈ ಹಿಂದೆ ಇವೆಲ್ಲಾ ಕೈ ತಪ್ಪಿನ ದೋಷಗಳೆಂದು ಪರಿಗಣಿಸಿ, ಪ್ರಮಾಣ ಪತ್ರದ ಆಧಾರದ ಮೇಲೆ ಸೌಲಭ್ಯಗಳನ್ನು ನೀಡುತ್ತಿದ್ದರು. ಆದರೆ ಇತ್ತೀಚಿಗೆ ಈ ರೀತಿಯ ತಿದ್ದುಪಡಿಗೆ ಅವಕಾಶವಿಲ್ಲದಿರುವುದರಿಂದ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಪ್ರತ್ಯೇಕ ಹಣಕಾಸಿನ ಸೌಲಭ್ಯ ಹೊಂದಿರುವ ಯೋಜನೆಯಲ್ಲಿಯೇ ಫಲಾನುಭವಿಗಳಿಗೆ ಸೌಲಭ್ಯಗಳಿನ್ನೂ ಮರೀಚಿಕೆಯಾಗಿದ್ದು, ರಾಜ್ಯ ಸರ್ಕಾರ ವೋಟಿನ ಆಸೆಯಿಂದ ಒಂದು ಸಮುದಾಯಕ್ಕೆ ಮಾತ್ರ ಸಹಾಯವಾಗುವ ಶಾದಿ ಭಾಗ್ಯದಂತಹ ಅಗ್ಗದ ಪ್ರಚಾರಕ್ಕೆ ಮೊರೆ ಹೋಗುತ್ತಿರುವುದು ಖಂಡನಾರ್ಹ. ಆದ್ದರಿಂದ ಕಾರ್ಮಿಕ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ ಈಗಾಗಲೇ ಇರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ನಂತರ ಯಾವ ಯೋಜನೆಯನ್ನು ಬೇಕಾದರೂ ಘೋಷಿಸಿಕೊಳ್ಳಲಿ.
- ಎಸ್.ಎನ್. ವಾಸುದೇವ, ಶ್ರೀರಂಗಪಟ್ಟಣ



-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement