ತಪ್ಪಾಯ್ತು ತಿದ್ಕೋತೀವಿ
ಉಡುಪಿ ಸಾಸ್ತಾನದಿಂದ ಪಾಮರ ಚಡಗ ಅವರು ಬರೆಯುತ್ತಾರೆ- 'ನ.6ರ ಪತ್ರಿಕೆಯ ಪುಟ 5ರಲ್ಲಿ 'ಕನ್ನಡ ಶಾಲೆಗಳ ಹಣೆಬರಹ' ಎಂಬ ಶೀರ್ಷಿಕೆಯಲ್ಲಿನ 'ಬರಹ' ಪದದ 'ರ' ಅಕ್ಷರ 'ರೆ' ಹಾಗೆ ಕಾಣಿಸಿ ಸ್ವಲ್ಪ ಗೊಂದಲ ಸೃಷ್ಟಿಸಿದರೆ, ಅದರ ಅಡಿಯಲ್ಲಿದ್ದ ಮುಖ್ಯಾಂಶದ 2ನೇ ಉಪಶೀರ್ಷಿಕೆ 'ಸರ್ಕಾರ ಶಾಲೆಗಳನ್ನು ಕಾಡುತ್ತಿದೆ ಮೂಲ ಸೌಕರ್ಯದ ಕೊರತೆ' ಎಂದಿದೆ.'
'ಇಲ್ಲಿ ಸರ್ಕಾರ ಶಾಲೆಗಳನ್ನು ಯಾವ ರೀತಿಯಲ್ಲಿ ಕಾಡುತ್ತಿದೆ?! ಮೂಲ ಸೌಕರ್ಯದ ಕೊರತೆಯನ್ನುಂಟು ಮಾಡಿ ಶಾಲೆಗಳನ್ನು ಮುಚ್ಚಿಸುವ ಪರಿಸ್ಥಿತಿ ನಿರ್ಮಾಣ ಮಾಡಿ ಕಾಡುತ್ತಿದೆಯೇ! ಸರ್ಕಾರದಿಂದಾಗಲಿ, ಸರ್ಕಾರದ ಕಾಡುವಿಕೆಗೆ ಒಳಗಾದ ಶಾಲೆಗಳಿಂದಾಗಲಿ, ಪತ್ರಿಕೆಯವರಿಂದಾಗಲಿ ಇದಕ್ಕೆ ಉತ್ತರ ಸಿಗಬಹುದೇನೋ!' ಎಂದಿದ್ದಾರೆ.
ಸಾಮಾನ್ಯವಾಗಿ ಪತ್ರಿಕೆಯ ಓದುಗರಿಗೆ ಇದು ಅರ್ಥವಾಗುವಂತಿದೆ. ಶಾಲೆಯಲ್ಲಿ ಮೂಲಸೌಕರ್ಯದ ಕೊರತೆಯಿದೆ ಎಂಬುದಷ್ಟೇ ಅದರ ಅರ್ಥ. ಮೂಲಸೌಕರ್ಯ ಇಲ್ಲದಿದ್ದರೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದನ್ನು ಓದುಗರೇ ಅರ್ಥಮಾಡಿ ಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಕೇವಲ ತಪ್ಪನ್ನು ತೋರಿಸಬೇಕು ಎಂಬ ಉದ್ದೇಶದಿಂದ ಪತ್ರಬರೆಯುವುದು ಬೇಡ. ನಿಜವಾದ ಕಾಳಜಿ ಸ್ವಾಗತಾರ್ಹ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ- 'ನ.9ರ ಸಂಚಿಕೆಯ ಪುಟ 8ರ ಮೇಲ್ಗಡೆ ಬಲ ಮೂಲೆಯಲ್ಲಿ ಪ್ರಕಟವಾದ 'ಎಪಿಎಲ್‌ಗೆ ರು. 3ಕ್ಕೆ 10 ಕೆ.ಜಿ. ಅಕ್ಕಿ: ಸೊರಕೆ' ಎಂಬ ಸುದ್ದಿ ಓದಿದಾಗ ಅದು 30 ಪೈಸೆಗೆ 1 ಕೆ.ಜಿ. ಅಕ್ಕಿ ಎಂಬಂತಾಗುತ್ತದೆ. (ಇದು ಬಿಪಿಎಲ್‌ಗಿಂತಲೂ ದರ ಕಡಿಮೆ!) ಅದು 30ಕ್ಕೆ 10 ಕೆ.ಜಿ. ಅಕ್ಕಿ ಎಂದಾಗಬೇಕಿತ್ತಲ್ಲವೇ?'
ಶ್ರೀಕಾಂತ ಮುದಗಲ್ಲ ಅವರು ಹೇಳಿದ್ದು ಸರಿಯಾಗಿದೆ. ಯೋಜನೆ ಘೋಷಣೆಯಾದ ಆರಂಭದಲ್ಲಿ '1ಕ್ಕೆ 10 ಕೆ.ಜಿ. ಅಕ್ಕಿ' ಎಂದು ಪ್ರಕಟವಾಗಿ ಗೊಂದಲವಾಗಿತ್ತು. ಶೀರ್ಷಿಕೆಯಲ್ಲಿ 'ಎಪಿಎಲ್‌ಗೆ 3ರಂತೆ 10ಕೆಜಿ ಅಕ್ಕಿ' ಅಥವಾ 'ಎಪಿಎಲ್‌ಗೆ 30ಕ್ಕೆ 10ಕೆಜಿ ಅಕ್ಕಿ' ಎಂದಿದ್ದರೆ ಸೂಕ್ತವಾಗುತ್ತಿತ್ತು.
ಬೆಂಗಳೂರಿನಿಂದ ರಾಜಾ ಪವನ್ ಮಾಧ್ವ ಅವರು ಬರೆಯುತ್ತಾರೆ- 'ಕ.ಪ್ರ.ದ ನ.8ರಂದು ಪುಟ 9ರಲ್ಲಿ ವಿನಾಯಕ ಭಟ್ ಮೂರೂರು ಅವರ ವಿಚಾರಧಾರೆಯ ಎರಡನೇ ಕಾಲಂನ ಮೂರನೇ ಪ್ಯಾರಾದ ಮೂರನೇ ಸಾಲಿನಲ್ಲಿ 'ಬುದ್ಧಿಜೀವಿಗಳ ಕ್ಯಾಬಿನೆಟ್‌ನಲ್ಲಿರುವವರು' ಬದಲಿಗೆ ಕಾಬಿನೆಟ್‌ನಲ್ಲಿರುವ ಬುದ್ಧಿಜೀವಿಗಳು ಎಂಬಂತಿದ್ದರೆ ಸರಿ ಹೊಂದುತ್ತದೆ. ಇದೇ ಅಂಕಣದ ಮೂರನೇ ಕಾಲಂನಲ್ಲಿ 'ಶಿಕ್ಷಿಸಲು ಹೊಡುವುದು' ಎಂಬುದರ ಬದಲಾಗಿ ಶಿಕ್ಷಿಸಲು ಹೊರಟಿರುವುದು ಎಂದಿರಬೇಕಾಗಿತ್ತು' ಎಂದಿದ್ದಾರೆ.
ರಾಜಾ ಪವನ್ ಮಾಧ್ವ ಅವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಅನಿಸುತ್ತದೆ. ಕ್ಯಾಬಿನೆಟ್‌ನಿಂದ ಹೊರತಾದ ಬುದ್ಧಿಜೀವಿಗಳ ಕ್ಯಾಬಿನೆಟ್ ರಚಿಸಿಕೊಂಡಿದ್ದು, ಅವರಲ್ಲಿರುವವರ ಬಗ್ಗೆ ಆ ರೀತಿಯಲ್ಲಿ ಹೇಳಲಾಗಿದೆ.
-ವಿಶ್ವೇಶ್ವರ ಭಟ್