ಬೆಂಕಿ ಬಿತ್ತು ಇನ್ನೊಂದು ಬಸ್ಸಿಗೆ
ಸಾರಿಗೆ ವ್ಯವಸ್ಥೆಯಲ್ಲಿ ಪ್ರತಿಷ್ಠಿತ ವಾಹನ ಎನ್ನುವ ಖ್ಯಾತಿ ಪಡೆದ ವೋಲ್ವೋ ಬಸ್‌ಗಳು ಎರಡು ವಾರದ ಅಂತರದಲ್ಲಿ ಎರಡು ದುರಂತಗಳಲ್ಲಿ ಪಾಲುಗೊಂಡಿದ್ದು, ಈಚಿನ ದಿನಗಳಲ್ಲಿ ವರದಿಯಾದ ಭಾರಿ ಅಪಘಾತಗಳೇ.
ಎರಡು ವಾರದ ಹಿಂದೆ ಆಂಧ್ರದ ಮೆಹಬೂಬ್‌ನಗರ ಬಳಿ ಆದಂತೆಯೇ ಬುಧವಾರ ರಾತ್ರಿ ಕಳೆದು ಬೆಳಗಾಗುವುದಕ್ಕೆ ಮುನ್ನ ಹಾವೇರಿಯ ಬಳಿ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನ್ಯಾಷನಲ್ ಟ್ರಾವಲ್ಸ್‌ನ ವೋಲ್ವೋ ಬಸ್ ಸೇತುವೆಯ ಕಂಬಿಯನ್ನು ಅಪ್ಪಳಿಸಿದಾಗ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡ ಅಪಘಾತದಲ್ಲಿ ಏಳು ಮಂದಿಯ ಸಜೀವ ದಹನವಾಗಿದೆ. ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಮಾಡುವ ಮುನ್ನ ಹಿಂದೆ-ಮುಂದೆ ನೋಡಬೇಕೆನ್ನುವ ಭಾವನೆ ಇಂತಹ ಘಟನೆಗಳಿಂದ ಜನರಲ್ಲಿ ಮೂಡುವುದು ಸಹಜ. ಆ ಭಾವನೆ ಬಹುಕಾಲ ಉಳಿಯುವುದಿಲ್ಲ.
ಗುರುವಾರವೇ ಅಪಘಾತ ನಡೆದ ಸ್ಥಳಕ್ಕೆ ಸಚಿವ ರಾಮಲಿಂಗರೆಡ್ಡಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ತೆರಳಿ, ನೊಂದ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದೂ ಆಗಿದೆ. ಅಪಘಾತದಲ್ಲಿ ಸತ್ತವರ ಕುಟುಂಬಗಳಿಗೆ ಪರಿಹಾರ ಧನದ ವಾಗ್ದಾನವೂ ಹೊರಬಿದ್ದಿದೆ. ಇಂತಹ ಘಟನೆಗಳು ನಡೆದಾಗಲೆಲ್ಲ ಕೇಳಿಬರುವ ಒಂದು ಆರೋಪ: ರಾತ್ರಿ ವೇಳೆಯಲ್ಲಿ ಖಾಸಗಿ ಬಸ್‌ಗಳನ್ನು ಪರಿಶೀಲಿಸುವ ಕರ್ತವ್ಯದಲ್ಲಿ ಲೋಪವಾಗಿದೆ. ಅದಕ್ಕೆ ಸಿದ್ಧವಾದ ಉತ್ತರವೂ ಅಧಿಕಾರಿಗಳಲ್ಲಿದೆ. ಸಿಬ್ಬಂದಿಯ ಕೊರತೆಯಿಂದ ಖಾಸಗಿ ಬಸ್‌ಗಳ "ಪರಿಶೀಲನೆ" ಕಷ್ಟ. ರಾತ್ರಿ ವೇಳೆಯ ಬಸ್ ಸಂಚಾರವನ್ನು ಪ್ರಯಾಣಿಕರ ಪಾಲಿಗೆ ಸುರಕ್ಷವಾಗಿರುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಸಿಬ್ಬಂದಿಯ ಕೊರತೆಯ ನೆಪದಂತಹ ಉತ್ತರ ಇನ್ನು ಸಾಕು.