ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವೈಕುಂಠ ಮೆಹತಾರ ಹೃದಯ ವೈಶಾಲ್ಯ

Vishwanath S
Updated On : 15 Nov 2013, 11:08 am

ವೈಕುಂಠ ಮೆಹತಾ ಭಾರತದ ಸಹಕಾರ ಚಳವಳಿಯ ನೇತಾರರಾಗಿದ್ದರು. ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕಿನ ಮುಖ್ಯಸ್ಥರಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಗ್ರಾಮೀಣ ಕೈಗಾರಿಕಾ ಆಯೋಗದ ಮೊದಲ ಅಧ್ಯಕ್ಷರಾಗಿ, ಹಿಂದಿನ ಮುಂಬೈ ರಾಜ್ಯದ ಆರ್ಥಿಕ ಮತ್ತು ಸಹಕಾರ ಮಂತ್ರಿಗಳಾಗಿ ಸಹ ಸೇವೆ ಸಲ್ಲಿಸಿದರು. ಸಹಕಾರ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಪೂನಾದ ರಾಷ್ಟ್ರೀಯ ಸಹಕಾರ ತರಬೇತಿ ಕೇಂದ್ರಕ್ಕೆ ಅವರ ಹೆಸರನ್ನಿಡಲಾಗಿದೆ. ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದರು. ಮುಂಬೈನ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಓದುತ್ತಿದ್ದಾಗ ತುಂಬಾ ಪ್ರತಿಭಾಶಾಲಿಗಳಾಗಿದ್ದರು. 1900ರ ಸಮಯ. ಆ ಕಾಲೇಜಿನಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಕೊಡಲಾಗುತ್ತಿತ್ತು. ಆ ವಿದ್ಯಾರ್ಥಿವೇತನ ಗಿಟ್ಟಿಸಲು ಮೆಹತಾ ಮತ್ತು ಮತ್ತೊಬ್ಬ ಪ್ರತಿಭಾಶಾಲಿ ವಿದ್ಯಾರ್ಥಿ ಮಹಾದೇವ ದೇಸಾಯಿಯವರ ನಡುವೆ ತೀವ್ರವಾದ ಪೈಪೋಟಿ ಇತ್ತು. ಮೆಹತಾ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದರೆ, ದೇಸಾಯಿ ಬಡ ಕುಟುಂಬದಿಂದ ಬಂದಿದ್ದರು. ಆದ್ದರಿಂದ ಸಹಜವಾಗಿಯೇ ದೇಸಾಯಿಯವರಿಗೆ ಆ ವಿದ್ಯಾರ್ಥಿವೇತನದ ಅವಶ್ಯಕತೆ ತುಂಬಾ ಇತ್ತು. ಆದರೆ ದೇಸಾಯಿಯವರಿಗಿಂತ ಉತ್ತಮ ಅಂಕ ಗಳಿಸಿದ ಮೆಹತಾ ವಿದ್ಯಾರ್ಥಿವೇತನ ಪಡೆಯಲು ಸಫಲರಾಗಿದ್ದರು.
ಇದರಿಂದ ಮಹಾದೇವ ದೇಸಾಯಿ ಕಾಲೇಜು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೇ ಕಾಲೇಜು ತೊರೆಯುವ ಸಾಧ್ಯತೆ ಹೆಚ್ಚಾಗಿತ್ತು. ಇದನ್ನರಿತ ವೈಕುಂಠ ಮೆಹತಾ, ಸಹಪಾಠಿಗೆ ಹೇಗಾದರೂ ಸಹಾಯ ಮಾಡಬೇಕೆಂಬ ತವಕ. ಅವರಿಗೆ ಆ ವಿದ್ಯಾರ್ಥಿವೇತನ ಒಂದು ಗೌರವ ಅಷ್ಟೆ. ಅದರಿಂದೇನೂ ಅವರು ಓದಬೇಕಾಗಿರಲಿಲ್ಲ. ಅದಕ್ಕಾಗಿ ಅವರು ತಮಗೆ ಬಂದ ವಿದ್ಯಾರ್ಥಿವೇತನವನ್ನು ತಿರಸ್ಕರಿಸಿದರು. ಪ್ರಾಚಾರ್ಯರ ಕೊಠಡಿಗೆ ಹೋಗಿ, ತಮಗೆ ಮಂಜೂರಾದ  ವಿದ್ಯಾರ್ಥಿವೇತನವನ್ನು ಶಿಕ್ಷಣ ಮುಂದುವರೆಸಲು ಪರದಾಡುತ್ತಿರುವ ತನ್ನ ಸಹಪಾಠಿ ಮಹಾದೇವ ದೇಸಾಯಿಯವರಿಗೇ ನೀಡಬೇಕೆಂದು ಬರೆದುಕೊಟ್ಟರು. ಪ್ರಾಚಾರ್ಯರು ಮೆಹತಾ ಅವರ ಉದಾರತೆಯನ್ನು ಬಹುವಾಗಿ ಕೊಂಡಾಡಿ ಆ ವಿದ್ಯಾರ್ಥಿವೇತನವನ್ನು ಮಹಾದೇವ ದೇಸಾಯಿಯವರಿಗೆ ನೀಡಿದರು. ಮುಂದೆ ಇವರಿಬ್ಬರೂ ಜೀವನದಲ್ಲಿ ಯಶಸ್ವಿಯಾಗಿ ಕೀರ್ತಿ ಗಳಿಸಿದರು. ವೈಕುಂಠ ಮೆಹತಾ ಮುಂಬೈ ರಾಜ್ಯದ ಮೊದಲ ಅರ್ಥಸಚಿವರಾದರೆ, ಮಹಾದೇವ ದೇಸಾಯಿ ಮಹಾತ್ಮ ಗಾಂಧಿಯವರ ಕಾರ್ಯದರ್ಶಿಯಾಗಿ ಕೊನೆಯವರೆಗೂ ಅವರೊಟ್ಟಿಗೆ ಇದ್ದು ಪ್ರಸಿದ್ಧರಾದರು.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments