ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ
ದೇಶದ ಆರು ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟಗಳ ಪರಿಸರ, ಭಾರತಕ್ಕೆ ನಿಸರ್ಗದತ್ತವಾಗಿ ವರದಾನದಂತೆ ಬಂದಿರುವ ಅಮೂಲ್ಯ ಕೊಡುಗೆ. ಒಂದು ರೀತಿಯಲ್ಲಿ ಅದು ವಿಶ್ವದ ಆಸ್ತಿ. ಅಲ್ಲಿ ಪರಿಸರವನ್ನು ಹಾಳಾಗದಂತೆ ರಕ್ಷಿಸಲು ಭಗೀರಥ ಪ್ರಯತ್ನವೇ ಬೇಕು.
ಈಗಾಗಲೇ ಸಾಕಷ್ಟು ಹಾನಿಯಾಗಿರುವುದು ನಿಜ. ಈ ಪ್ರವೃತ್ತಿ ಮುಂದುವರಿಯದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಆಸಕ್ತಿಯನ್ನು ಪ್ರಕಟಿಸಿದ್ದು, ಕಾರ್ಯೋನ್ಮುಖವಾಗಿರುವುದೂ ನಿಜ. ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಕುರಿತಂತೆ ಸರ್ಕಾರದ ಮುಂದೆ ಈಗ ಎರಡು ತಜ್ಞ ವರದಿಗಳಿವೆ.
ಮೊದಲನೆಯದು, ಕೆಲವು ವರ್ಷಗಳ ಹಿಂದೆ ಸಲ್ಲಿಸಲಾದ ಪರಿಸರ ತಜ್ಞ ಗಾಡ್ಗೀಳ್ ಅವರ ವರದಿ. ಆ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ, ಸೂಕ್ತ ಆದೇಶಗಳನ್ನು ಪ್ರಕಟಿಸಬೇಕು ಎನ್ನುವ ಮನವಿಯೊಂದು ಕೇಂದ್ರ ಹಸಿರು ಪಂಚಾಯಿತಿಯ ಮುಂದೆ ಇದೆ. ಇನ್ನೂ ಅದರ ಪರಿಶೀಲನೆಯೇ ನಡೆದಿಲ್ಲ.
ಎರಡನೆಯದು ಈಗ ಸರ್ಕಾರವೇ ಪ್ರಕಟಿಸಿರುವ ನಿಯಮಗಳಿಗೆ ಆಧಾರವಾಗಿರುವ, ಕಸ್ತೂರಿ ರಂಗನ್ ಅವರ ವರದಿ. ಸರ್ಕಾರದ ಪ್ರಕಟಣೆಯನ್ನು ಹಲವಾರು ಪರಿಸರವಾದಿಗಳ ಸಂಘಟನೆಗಳು ಪ್ರತಿಭಟಿಸಿವೆ. ಕಸ್ತೂರಿ ರಂಗನ್ ವರದಿ ಆಧರಿತ ನಿಯಮಗಳ ಪ್ರಕಟಣೆಯ ಜತೆಯಲ್ಲೇ ಹಿಂದಿನ ಗಾಡ್ಗೀಳ್ ವರದಿಯಲ್ಲಿ ಅಡಕವಾಗಿರುವ ಅಂಶಗಳನ್ನು ಒಳಗೊಂಡ ನಿಯಮಗಳೂ ಪ್ರಕಟವಾಗಬೇಕು ಎನ್ನುವುದು ಹಲವರ ವಾದ.
ಈಗಾಗಲೇ ದೇಶದ ವೈನಾಡಿನ ಸೀಮೆಯಲ್ಲಿ ಸರ್ಕಾರ ಪ್ರಕಟಿಸಿರುವ ನಿಯಮಗಳ ವಿರುದ್ಧ ಆಂದೋಲನವೇ ಆರಂಭವಾಗಿದೆ. ಹಾಗಿದ್ರೆ ಗಾಡ್ಗೀಳ್ ವರದಿಯನ್ನು ಮೂಲೆಗುಂಪು ಮಾಡಲಾಯಿತೇ ಎನ್ನುವುದು ಸಹಜ ಪ್ರಶ್ನೆ.
ಈಗಿನ ವಿವಾದದ ತಿರುಳು, ಘಟ್ಟದ ಸೀಮೆಯಲ್ಲಿ ಬಾಳಿ ಬದುಕಬೇಕಾದ ಸಣ್ಣ ಸಮುದಾಯಗಳಿಗೆ ನೀಡಬೇಕಾದ ರಕ್ಷಣೆ ಹಾಗೂ ಪರಿಸರ ರಕ್ಷಣೆಯ ವಿಚಾರದಲ್ಲಿ ಸಮತೋಲದ ಸಾಧನೆ. ಈ ವಿವಾದ ದೊಡ್ಡ ಸ್ವರೂಪವನ್ನು ತಾಳುವುದಕ್ಕೆ ಮುನ್ನ ಸರ್ಕಾರ ಎಚ್ಚೆತ್ತುಕೊಂಡಿರುವುದು ಸಮಾಧಾನದ ವಿಚಾರ.
ಸಚಿವೆ ಜಯಂತಿ ನಟರಾಜನ್ ಅವರು, ಈಗ ಅರಣ್ಯ ಮಂತ್ರಾಲಯ ಪ್ರಕಟಿಸಿರುವ ನಿಯಮಗಳು ಅಂತಿಮವಲ್ಲ. ಅದು ಕರಡು ಮಾತ್ರ. ಅದಕ್ಕೆ ಆಕ್ಷೇಪ ಸಲ್ಲಿಸುವವರಿಗೆ, ಆ ವಿಚಾರದಲ್ಲಿ ಸಲಹೆ ನೀಡ ಬಯಸುವವರಿಗೆ ಅರವತ್ತು ದಿನಗಳ ಕಾಲಾವಕಾಶವಿದೆ ಎಂದು ವಿವರಣೆ ನೀಡಿರುವುದು ಸ್ವಾಗತಾರ್ಹ.
ಈ ವಿಚಾರದಲ್ಲಿ ಆಸಕ್ತಿ ಇರುವವರೆಲ್ಲ ತಮ್ಮ ತಮ್ಮ ನಿಲವುಗಳನ್ನು ಸಾಧ್ಯವಿರುವಷ್ಟೂ ವಿವರವಾಗಿ ಅರಣ್ಯ ಮಂತ್ರಾಲಯಕ್ಕೆ ಕಳುಹಿಸಿಕೊಡುವುದು ಸೂಕ್ತ. ಅದನ್ನು ಸರ್ಕಾರ ಉನ್ನತ ಮಟ್ಟದಲ್ಲಿ ಪರಿಶೀಲಿಸುವ ಭರವಸೆಯನ್ನು ನೀಡಿದೆ. ಈಗ ಆಂದೋಲನದ ಅಗತ್ಯವಿಲ್ಲ.