ಆರೋಪಿಗಳು ಚುನಾವಣೆ ಸ್ಪರ್ಧಿಗಳಾಗಬಾರದು- ಸಲಹೆ
ಶುದ್ಧ ಹಾಗೂ ಸ್ವಚ್ಛ ಚುನಾವಣೆಯಲ್ಲಿ ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಸ್ಪರ್ಧೆಗೆ ಅನರ್ಹರೆಂದು ಪರಿಗಣಿಸುವುದಕ್ಕೆ ಕೇಂದ್ರ ...
ಶುದ್ಧ ಹಾಗೂ ಸ್ವಚ್ಛ ಚುನಾವಣೆಯಲ್ಲಿ ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಸ್ಪರ್ಧೆಗೆ ಅನರ್ಹರೆಂದು ಪರಿಗಣಿಸುವುದಕ್ಕೆ ಕೇಂದ್ರ ಸರ್ಕಾರ ಕಾಯಿದೆಯಲ್ಲಿ ಸೂಕ್ತ ಬದಲಾವಣೆ ಮಾಡುವುದು ಒಳಿತೆಂದು ಸೋಮವಾರ ಸುಪ್ರೀಮ್ ಕೋರ್ಟಿನ ಒಂದು ಪೀಠ ಸಲಹೆ ಮಾಡಿರುವುದು ಮೇಲ್ನೋಟಕ್ಕೇ ಸರಿ ಎನಿಸಿದರೂ, ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಅನಗತ್ಯವಾಗಿ ಗಂಭೀರ ಆರೋಪಗಳನ್ನು ಪಟ್ಟಿಯಲ್ಲಿ ಸೇರಿಸುವ ಪ್ರವೃತ್ತಿಯ ಹಿನ್ನೆಲೆಯಲ್ಲಿ ಪ್ರಶ್ನೆಯನ್ನು ಪರಿಶೀಲಿಸುವುದು ಸೂಕ್ತ.
ಸಾಮಾನ್ಯವಾಗಿ ಪೊಲೀಸರ ಈ ಪ್ರವೃತ್ತಿ ಜಾಗೃತವಾಗುವುದು ಶ್ರಮಿಕರು, ಬಡವರ ಪರ ಹೋರಾಟಗಳು ನಡೆದಾಗ. ಸಭೆ, ಪ್ರದರ್ಶನ, ಮೆರವಣಿಗೆಗಳಲ್ಲಿ ಗೊಂದಲವಾದರೆ, ಪೊಲೀಸರು ಆಂದೋಲನದ ನಾಯಕರನ್ನು ಬಂಧಿಸಿ, ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸುವುದು, ವರ್ಷಗಳ ಗಟ್ಟಲೆ ನ್ಯಾಯಾಲಯಗಳ ತಿರುಗಾಟದ ಅನಂತರ ಆರೋಪಗಳಲ್ಲಿ ಹುರುಳಿಲ್ಲವೆನ್ನುವ ಅಂಶ ಸರ್ಕಾರಕ್ಕೇ ಗೊತ್ತಾದಾಗ, ಅದನ್ನು ಹಿಂದಕ್ಕೆ ಪಡೆದ ನಿದರ್ಶನಗಳು ಹೇರಳವಾಗಿವೆ.
ಕೆಲವು ತಿಂಗಳ ಹಿಂದೆ ಚುನಾವಣೆ ಆಯೋಗವೂ ಗಂಭೀರ ಸ್ವರೂಪದ ಆರೋಪಗಳನ್ನು ಹೊತ್ತವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾಯಿದೆ ರಚನೆಗೆ ಸಲಹೆ ಮಾಡಿತ್ತು. ಆದರೆ, ಸಂಸತ್ತಿನ ಸ್ಥಾಯಿ ಸಮಿತಿ (ಅಲ್ಲಿ ಸರ್ವಪಕ್ಷಗಳ ಪ್ರತಿನಿಧಿಗಳೂ ಇರುತ್ತಾರೆ) ಆ ಸಲಹೆಯನ್ನು ಒಪ್ಪದೇ ಲೋಕಸಭೆ ಸ್ಪೀಕರ್ಗೆ ಪ್ರಸ್ತಾಪವನ್ನು ಹಿಂದಕ್ಕೆ ಕಳಿಸಿತ್ತು. ಈ ವಿಚಾರದಲ್ಲಿ ಸರ್ಕಾರದಲ್ಲೂ ಭಿನ್ನಾಭಿಪ್ರಾಯವಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ, ಪ್ರಧಾನವಾಗಿ ವಾಮಪಂಥೀಯ ಪಕ್ಷಗಳಲ್ಲಿ ಈ ಸಲಹೆಗೆ ವಿರೋಧವೂ ಪ್ರಕಟವಾಗಿದೆ. ಅದಕ್ಕೆ ಮೂಲ ಕಾರಣ ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ಅಧಿಕಾರವನ್ನು ಸಂಪೂರ್ಣವಾಗಿ ಪೊಲೀಸರ ಕೈಯಲ್ಲೇ ಕೊಟ್ಟಂತೆ ಆಗುತ್ತದೆ ಎನ್ನುವ ಭೀತಿ. ನಿಜ. ಚುನಾವಣೆ ಆಯೋಗ ಹಾಗೂ ಸುಪ್ರೀಮ್ ಕೋರ್ಟ್ನ ಸಲಹೆಯನ್ನು ಯಾವುದೇ ರೀತಿಯ ಚರ್ಚೆ - ವಿಚಾರ ವಿನಿಮಯವೂ ಇಲ್ಲದೇ ತಿರಸ್ಕರಿಸುವುದು ಸರಿಯಲ್ಲ. ಲೋಕಸಭೆಗೆ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆಗೆ ಈಗ ಆರು ತಿಂಗಳೂ ಉಳಿದಿಲ್ಲ. ಚುನಾವಣೆ ಪ್ರಕ್ರಿಯೆ ಈಗಾಗಲೇ ಮತದಾರರ ಪಟ್ಟಿಗಳ ಪ್ರಕಟಣೆಯ ಮೂಲಕ ಆರಂಭವಾಗಿದೆ. ಇನ್ನು ಉಳಿದಿರುವ ಮೂರು ನಾಲ್ಕು ತಿಂಗಳಲ್ಲಿ ವಿಚಾರ ವಿನಿಮಯದ ಪ್ರಕ್ರಿಯೆ ಮುಗಿದು, ಸಂಸತ್ತಿನಲ್ಲಿ ಸೂಕ್ತ ರೀತಿಯಲ್ಲಿ ಕಾಯಿದೆಯ ಬದಲಾವಣೆಯನ್ನು ತರುವ ಪ್ರಕ್ರಿಯೆ ಅಷ್ಟು ಬೇಗ ಮುಗಿಯಲಿಕ್ಕಿಲ್ಲ. ಸೋಮವಾರ ಸುಪ್ರೀಮ್ ಕೋರ್ಟ್ ಸರ್ಕಾರಕ್ಕೆ ನೀಡಿರುವ ಸಲಹೆಯನ್ನು ಸರ್ಕಾರದ ಮುಂದಿಡಲು ಸರ್ಕಾರಿ ವಕೀಲರು ಒಪ್ಪಿದ್ದಾರೆ, ಅದಕ್ಕೆ ಮುನ್ನ ಸುಪ್ರೀಮ್ ಕೋರ್ಟಿನ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರು, ಈ ವಿಚಾರವನ್ನು ನ್ಯಾಯಾಲಯಕ್ಕೇ ಬಿಡುವುದಾದರೆ, ನ್ಯಾಯಾಲಯವೇ ಯಾವುದಾದರೊಂದು ರೀತಿಯ ಸೂತ್ರವನ್ನು ರೂಪಿಸುವುದು ಸಾಧ್ಯವಾದೀತು ಎಂದೂ ಹೇಳಿದ್ದಾರೆ. ಮುಕ್ತ ಚುನಾವಣೆಯ ಪದ್ಧತಿಯಲ್ಲಿ, ಯಾವುದೇ ರೀತಿಯ ನಿರ್ಬಂಧವೂ ಇರಬಾರದು ಎಂದೇನೂ ಅಲ್ಲ. ಆದರೆ ಯಾವುದೇ ನ್ಯಾಯಾಲಯದಲ್ಲೂ ಶಿಕ್ಷೆಗೆ ಗುರಿಯಾಗದೇ ಹೋದರೂ, ಒಬ್ಬ ವ್ಯಕ್ತಿಯ ಮೇಲಿರುವ ಆರೋಪಗಳ ಆಧಾರದ ಮೇಲೇ ಅವರನ್ನು ಸ್ಪರ್ಧೆಗೆ ಅನರ್ಹರೆಂದು ತೀರ್ಪು ನೀಡುವುದು ಎಷ್ಟರ ಮಟ್ಟಿಗೆ ನ್ಯಾಯಶಾಸ್ತ್ರಕ್ಕೆ ಸಮ್ಮತ ಎನ್ನುವುದು ಪರಿಶೀಲನೆಯಾಗಲೇಬೇಕು.