ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾಲಕ್ಕೆ ತಕ್ಕಂತೆ ಕಾಯಿದೆ

Mainashree
Updated On : 29 Nov 2013, 9:59 am

ಜನ ಜೀವನ ಎನ್ನುವುದು ನಿಂತ ನೀರಲ್ಲ. ನಿರಂತರವಾಗಿ ಹರಿಯುತ್ತಲೇ ಇರುವ ವಾಹಿನಿ. ನಮ್ಮ ಸಾಮಾಜಿಕ ಜೀವನ ಶೈಲಿಯಲ್ಲಿ ಈಗಲೂ ಹಳೆಯ ಸಂಪ್ರದಾಯಗಳು, ಪದ್ಧತಿಗಳೇ ಮೆರೆದಿದ್ದರೂ, ಸಮಾನಾಂತರವಾಗಿ ವಿಭಿನ್ನ, ನೂತನ ಪದ್ಧತಿಗಳೂ ನಿಧಾನವಾಗಿ, ಆದರೆ ಸ್ಪಷ್ಟವಾಗಿ ಬೇರೂರುತ್ತಿವೆ.
ಸಮಾಜಕ್ಕೆ ಸಮಾಜವೇ ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಂಪೂರ್ಣವಾಗಿ ಬದಲಾಗುವುದು ಎನ್ನುವ ವಿಪರೀತಾರ್ಥಕ್ಕೆ ಎಡೆಕೊಡುವಂತಹ ವಿಚಾರ ಅಲ್ಲ ಇದು. ಆದರೆ ಜೀವನದ ಬಹುಮುಖ್ಯ ಅಂಗವಾದ ದಾಂಪತ್ಯ ಜೀವನದಲ್ಲಿನ ಈಗಿನ ಕೆಲವು ಬೆಳವಣಿಗೆಗಳನ್ನು ಸಮಾಜ, ಸರ್ಕಾರ ಗಮನಿಸಲೇಬೇಕು.
 ಈಗಾಗಲೇ ಸಾಮಾಜಿಕ ಚಿಂತಕರ ವಲಯಗಳಲ್ಲಿ ಸಾಕಷ್ಟು ಚರ್ಚೆಯಾಗಿರುವ ಇಂತಹ ಒಂದು ವಿಚಾರ ಎಂದರೆ ಯಾವುದೇ ರೀತಿಯ ವಿವಾಹ ಬಂಧನವೂ ಇಲ್ಲದೆ, ಪುರುಷರು - ಮಹಿಳೆಯರು ಸಹಬಾಳ್ವೆ ನಡೆಸುವ ಪದ್ಧತಿ. ನಿಜ. ಸಮಾಜದ ಕೆಲವು ವರ್ಗಗಳಲ್ಲಿ ಇಂತಹ ಜೀವನ ಹಿಂದಿನಿಂದಲೂ ರೂಢಿಯಲ್ಲಿದೆ. ಆದರೆ ಆಧುನಿಕ ಜೀವನ ಶೈಲಿಯ ಒಂದು ಭಾಗವೇ ಆಗಬಹುದಾದ ರೀತಿಯಲ್ಲಿ ಈ ಪದ್ಧತಿ ಬೆಳೆಯುತ್ತಿರುವುದೂ ನಿಜ.
 ಸುಪ್ರೀಮ್ ಕೋರ್ಟ್ ಗುರುವಾರ ನೀಡಿರುವ ಒಂದು ತೀರ್ಪಿನಲ್ಲಿ ಇಂತಹ ಸಹಬಾಳ್ವೆ ಕಾನೂನಿಗೆ ವಿರೋಧವಾದದ್ದೇನೂ ಅಲ್ಲ. ಅದು ಅಪರಾಧವೂ ಅಲ್ಲ, ಪಾಪವೂ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವುದು ವಾಸ್ತವ ಸ್ಥಿತಿಗೆ ಮಾನ್ಯತೆ ನೀಡಿದಂತೆಯೇ ಆಗಿದೆ. ಆದರೆ ಈ ಮಾದರಿಯ ಸಂಬಂಧವನ್ನೇ ನಂಬಿಕೊಂಡ ಜೋಡಿಗಳಲ್ಲಿ ಮಹಿಳೆಗೆ ಹಾಗೂ ಆಕೆಯ ಮಕ್ಕಳಿಗೆ ಕಾಯಿದೆಯ ರಕ್ಷಣೆ ಅಗತ್ಯವಾಗಿ ಬೇಕಾಗಿದೆ. ಸದ್ಯದಲ್ಲಿ ಇಂತಹ ಸಂಬಂಧಗಳನ್ನು ಕುರಿತಂತೆ ಯಾವುದೇ ನಿರ್ದಿಷ್ಟವಾದ ಕಾಯಿದೆ ಇಲ್ಲ. ಈ ಅಂಶವನ್ನು ಸುಪ್ರೀಮ್ ಕೋರ್ಟ್ ಗಮನಿಸಿದೆ. ಇಂತಹ ಸಂಬಂಧಗಳಲ್ಲಿ ಮಕ್ಕಳ ಹಿತರಕ್ಷಣೆ ಹಾಗೂ ಅವರ ಭವಿಷ್ಯಕ್ಕೆ ರಕ್ಷಾ ಕವಚದಂತಿರುವ ಕಾಯಿದೆಬದ್ಧ ನಿಯಮಗಳ ರಚನೆ ಬಹುಮುಖ್ಯವಾದದ್ದು. ಒಂದು ರೀತಿಯಲ್ಲಿ ತುರ್ತು ಅಗತ್ಯ.
 ಆ ವಿಚಾರದಲ್ಲಿ, ಕಾಲಚಕ್ರದ ಉರುಳಲ್ಲಿ ಸಿಕ್ಕಿಬಿದ್ದ ಮಕ್ಕಳು ವಿಪರೀತವಾದ ಕಷ್ಟವನ್ನು ಅನುಭವಿಸಬೇಕಾಗಬಹುದು. ಅದನ್ನು ತಪ್ಪಿಸಲು ಪಾಲಕ-ಪೋಷಕರಿಂದ (ಅವರೇ ಮಕ್ಕಳ ತಂದೆ-ತಾಯಿ) ಮಕ್ಕಳಿಗೆ ಸಿಗಲೇಬೇಕಾದ ರಕ್ಷಣೆಯನ್ನು ಒದಗಿಸಲು ಭಾರತದಲ್ಲಿ ವಿಶೇಷವಾದ ಕಾಯಿದೆಯೇ ಅಗತ್ಯ.
 ಮದುವೆ ಸಂಬಂಧದಲ್ಲಿನ ಬೇಕಾದಷ್ಟು ನಿಯಮಗಳು ಹಾಗೂ ಹಲವು ಹತ್ತು ಸಮಸ್ಯೆಗಳನ್ನು ಕುರಿತ ಕಾಯಿದೆಗಳಿದ್ದರೂ, ವಿವಾಹ ಸಂಬಂಧದ ಹೊರಗಿನ ಸಹಬಾಳ್ವೆಯಲ್ಲಿ ಪಾಲಿಸಲೇ ಬೇಕಾದ ನಿಯಮಗಳನ್ನು ಕಾಯಿದೆಯಲ್ಲಿ ಈಗಷ್ಟೇ ಅಳವಡಿಸಬೇಕು. ಆದಷ್ಟು ಬೇಗ ಈ ಕೆಲಸ ಆಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement