ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಮಿಂಚಂಚೆ ಕಳುಹಿಸಿದ್ದಾರೆ. 'ನ.26ರ ಸಂಚಿಕೆಯ ಪುಟ 14ರಲ್ಲಿ 'ಪ್ರಕರಣದ ಹೆಜ್ಜೆ ಗುರುತು' ಮೇ 16, 2008ರಂದು ನೋಯ್ಡಾ ಮನೆಯಲ್ಲಿ ಆರುಷಿ ಹತ್ಯೆ ಎಂದಿದೆ. ಆದರೆ ಅದು ಮೇ 15, 2008 ಎಂದಾಗಬೇಕಿತ್ತು ಅನಿಸುತ್ತದೆ. ಹಾಗೆಯೇ ಮೇ 17, 2008ರಂದು ಟೆರೆಸ್ನಲ್ಲಿ ಮನೆಯ ನೌಕರ ಹೇಮರಾಜ್ ಶವ ಪತ್ತೆ ಎಂದಿದೆ. ಆದರೆ ಅದು ಮೇ 16, 2008ರಂದು ಎಂದಾಗಬೇಕಿತ್ತು, ಅಲ್ಲವೇ...?' ಎಂದು ಪ್ರಶ್ನಿಸಿದ್ದಾರೆ.
'ನ.27ರ 'ಕನ್ನಡಪ್ರಭ'ದ ಪುಟ 14ರಲ್ಲಿ ನೋಯ್ಡಾ ಆರುಷಿ ಕೊಲೆ ಪ್ರಕರಣದ ವಿವರ ನೀಡಿದ್ದೀರಿ. 'ಅಂದು ರಾತ್ರಿ ನಡೆದಿದ್ದೇನು....?' ಶೀರ್ಷಿಕೆಯ 'ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ(ಸಿಬಿಐ ವಾದ)' ವರದಿಯ 2ನೇ ಅಂಶದಲ್ಲಿ 'ರಾಜೇಶ ತಲ್ವಾರ್ ಹೇಮರಾಜ್ನ ತಲೆಗೆ ಹಾಕಿ ದಂಡದಿಂದ ಹೊಡೆಯುತ್ತಾನೆ' ಎಂದಿದೆ. ಆದರೆ ಅದು ಗಾಲ್ಫ್ ದಂಡದಿಂದ ಹೊಡೆಯುತ್ತಾನೆ ಎಂದಾಗಬೇಕಿತ್ತಲ್ಲವೇ?'
'ಇದೇ ಸಂಚಿಕೆಯ ಪುಟ 12ರಲ್ಲಿ 'ಅಲ್ಪಸಂಖ್ಯಾತ ವಿರೋಧಿಯೆಂದು ಬಿಂಬಿಸುವ ಯತ್ನ-ಬಿಎಸ್ವೈ ಬೆಂಬಲಿಗರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ' ಎಂದಿದೆ. ಇದು ವಿಧಾನಸಭೆ. ಇಲ್ಲಿ ಬೆಂಬಲಿಗರು, ಕಾರ್ಯಕರ್ತರು ಎಂಬುವ ಮಾತಿಲ್ಲ ಅಲ್ಲವೇ....? 'ಶಾಸಕರ ಜತೆ' ಎಂದಾಗಬೇಕಿತ್ತು ಅನಿಸುತ್ತದೆ. ಶಾಸಕರ ಪಕ್ಷದ ದೃಷ್ಟಿಯಿಂದ ನೋಡುವುದಾದರೆ ಬಿಎಸ್ವೈ ಸುತ್ತಲಿರುವವರು ಬೇರೆ ಬೇರೆ ಪಕ್ಷದ ಶಾಸಕರಿರುವಂತೆ ಕಾಣುತ್ತಾರೆ. ಆಗ ಅವರ ಬೆಂಬಲಿಗರು ಹೇಗೆ ಆಗುತ್ತಾರೆ?'
ರಾಜೀವ ಪಟವರ್ಧನ್ ಅವರು ಹೇಳಿದಂತೆ ಇದ್ಯಾವ ಸುದ್ದಿ ಅಥವಾ ವಿವರಣೆಯಲ್ಲಿ ತಪ್ಪಾಗಿಲ್ಲ. ಆರುಷಿ ಹತ್ಯೆಯಾಗಿರುವುದು ಮೇ 16 ಎಂದೇ ಎಲ್ಲೆಡೆ ಬಳಸಲಾಗುತ್ತಿದೆ. ಮೇ 15ರ ಮಧ್ಯರಾತ್ರಿ ಅಥವಾ ಮೇ 16ರ ಬೆಳಗಿನ ಜಾವ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಆಕೆಯ ಶವ ಪತ್ತೆಯಾಗಿರುವುದು ಮೇ.16 ಹಾಗೂ ನೌಕರ ಹೇಮರಾಜ್ ಶವ ಪತ್ತೆಯಾಗಿರುವುದು ಮೇ 17ರಂದು. ಈ ಮಾಹಿತಿಯಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಹಾಕಿ ದಂಡ ಹಾಗೂ ಗಾಲ್ಫ್ ದಂಡ ಎಂಬ ಎರಡೂ ಅಂಶಗಳಿರುವುದರಿಂದ ಇಂತಹ ಗೊಂದಲಕ್ಕೆ ಕಾರಣವಾಗಿದೆ. ಆದರೆ ರಾಜೇಶ ತಲ್ವಾರ್ ಅವರು ಗಾಲ್ಫ್ ಕ್ಲಬ್ನ ಸದಸ್ಯರಾಗಿರುವುದರಿಂದ ಹತ್ಯೆಗೆ ಗಾಲ್ಫ್ ದಂಡವನ್ನು ಬಳಸಿದ್ದರು ಎಂದು ಹೇಳಲಾಗುತ್ತಿದೆ. ಆ ಮನೆಯಲ್ಲಿ ದೊರೆತ 5 ಗಾಲ್ಫ್ ದಂಡದಲ್ಲಿ 2 ದಂಡಗಳು ಸ್ವಚ್ಛವಾಗಿತ್ತು, ಕೊಲೆಯ ಬಳಿಕ ಅವರೆಡನ್ನು ತೊಳೆಯಲಾಗಿತ್ತು ಎಂಬ ಆರೋಪವಿದೆ.
ಇನ್ನು ಬಿಎಸ್ವೈಗೆ ಸಂಬಂಧಿಸಿ ನೀವು ಎತ್ತಿರುವ ಪ್ರಶ್ನೆ ಕೂಡ ಸಮಂಜಸ ಎನಿಸುತ್ತಿಲ್ಲ. ಚಿತ್ರ ಶೀರ್ಷಿಕೆಯಲ್ಲಿ '......ಮಾತುಕತೆ ನಡೆಸುತ್ತಿರುವ ಶಾಸಕರು' ಎಂದಿದೆ, ಬದಲಾಗಿ ಬೆಂಬಲಿಗ ಶಾಸಕರು ಎಂದಿಲ್ಲ. ಇನ್ನು ವಿಧಾನಸೌಧದಲ್ಲಿ ಬಿಎಸ್ವೈಗೆ ಬೆಂಬಲ ನೀಡಿ ಮಾತನಾಡಿರುವುದು ನಾಲ್ವರು ಶಾಸಕರು. ವಿಧಾನಸೌಧದಲ್ಲಿ ಸಾರ್ವಜನಿಕರು ಅಥವಾ ಪಕ್ಷದ ಕಾರ್ಯಕರ್ತರು ಬಂದು ಮಾತನಾಡಲು ಸಾಧ್ಯವಿಲ್ಲ. ಶೀರ್ಷಿಕೆ ನೀಡುವಾಗ ಆದಷ್ಟು ಸಂಕ್ಷಿಪ್ತವಾಗಿಸುವುದು ಅನಿವಾರ್ಯ.
ವಿಶ್ವೇಶ್ವರ ಭಟ್