ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತೆಲಂಗಾಣ: ಮತ್ತೊಂದು ಹೆಜ್ಜೆ

Mainashree
Updated On : 29 Nov 2013, 9:59 am

ಈಗಿನ ಆಂಧ್ರಪ್ರದೇಶವನ್ನು ವಿಭಜಿಸಿ, ಪ್ರತ್ಯೇಕ ತೆಲಂಗಾಣ ರಾಜ್ಯದ ರಚನೆಯನ್ನು ಕಾಂಗ್ರೆಸ್ ಒಪ್ಪಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ರಾಜಕೀಯ ಭೂಪಟವನ್ನು ಬದಲಾಯಿಸುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ಊಹಿಸಿ, ನೂತನ ರಾಜ್ಯದ ರಚನೆಯ ಹಾದಿಯನ್ನು ಸುಗಮಗೊಳಿಸಲು ಸೂಕ್ತ ವಿಧೇಯಕದ ರಚನೆಯ ವಿಚಾರವನ್ನು ಕೇಂದ್ರ ಸಚಿವ ಸಂಪುಟದ ಆರಿಸಿದ ಮಂತ್ರಿಗಳ ಒಂದು ಸಣ್ಣ ಕೂಟವನ್ನು ರಚಿಸಲಾಗಿತ್ತು.
ನೂತನ ತೆಲಂಗಾಣ ರಾಜ್ಯದ ರಚನೆಯಲ್ಲಿ ಇಂತಹ ವಿಧೇಯಕದ ಕರಡು ಸಿದ್ಧವಾಗುವುದು ಒಂದು ಪ್ರಮುಖ ಘಟ್ಟ. ಈಗಿನ ವರದಿಗಳಂತೆ ಮಂತ್ರಿಗಳ ಕೂಟ ಹೆಚ್ಚು ಕಡಿಮೆ ತನ್ನ ಕೆಲಸವನ್ನು ಮುಗಿಸಿದೆ ಎಂದು ವರದಿ. ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರ ಪ್ರಕಾರ ಹೆಚ್ಚು ಕಡಿಮೆ ಆ ಕೂಟದ ಕೆಲಸ ಮುಗಿದಿದೆ. ಕೆಲವು ಸೂಕ್ಷ್ಮ ಅಂಶಗಳತ್ತ ಮತ್ತೊಮ್ಮೆ ಚಿಂತನೆಯನ್ನು ಹರಿಸುವುದು ಅಗತ್ಯ. ಅದನ್ನು ಬೇಗ ಮುಗಿಸಿ, ಸಾಧ್ಯವಾದಷ್ಟು ಬೇಗ ಮಂತ್ರಿಗಳ ಕೂಟ ತನ್ನ ಶಿಫಾರ್ಸುಗಳನ್ನು ಮಂತ್ರಿಮಂಡಲಕ್ಕೆ ಸಲ್ಲಿಸಲಿದೆ. ಕೇಂದ್ರ ಸಚಿವ ಸಂಪುಟದ ವಲಯಗಳಲ್ಲಿ ಹಬ್ಬಿರುವ ಮಾತುಗಳಂತೆ, ಮಂತ್ರಿಗಳ ಕೂಟದ ಶಿಫಾರ್ಸುಗಳು ಮುಂದಿನ ವಾರಾಂತ್ಯದಲ್ಲಿ ಸಚಿವ ಸಂಪುಟವನ್ನು ತಲುಪಬಹುದು. ಈ ವಿಚಾರದಲ್ಲಿ ಸಹಜವಾಗಿಯೇ ಹೆಚ್ಚು ಆಸಕ್ತಿಯನ್ನು ವಹಿಸಬೇಕಾಗಿರುವ ವಿತ್ತ ಸಚಿವ ಪಿ. ಚಿದಂಬರಮ್, ಗೃಹಮಂತ್ರಿ ಸುಶೀಲಕುಮಾರ ಶಿಂಧೆ ಮತ್ತು ತೆಲಂಗಾಣ ಸೀಮೆಯ ಹಿರಿಯ ಮುತ್ಸದ್ಧಿ ಜೈಪಾಲ ರೆಡ್ಡಿ ಅವರು ಗುರುವಾರ ದೀರ್ಘಕಾಲ, ವಿಚಾರ ವಿನಿಮಯ ನಡೆಸಿದ್ದೂ ಆಗಿದೆ.
ಲೋಕಸಭೆ ಚುನಾವಣೆ ಪ್ರಕಟವಾಗುವುದಕ್ಕೆ ಮುಂಚೆಯೇ, ನೂತನ ರಾಜ್ಯರಚನೆಯ ಸಂಬಂಧದ ಕಾಯಿದೆಯ ಅಂಗೀಕಾರಕ್ಕೆ ಕಾಂಗ್ರೆಸ್ ಆತುರದಲ್ಲಿರುವಂತಿದೆ. ಅದರಲ್ಲಿ ರಾಜಕೀಯ ಅಡಗಿರುವುದು  ತೀರ ಸಹಜ. ಏನಾದರೂ ಮಾಡಿ ತೆಲಂಗಾಣವನ್ನು ಕಾಂಗ್ರೆಸ್ಸಿನ ಭದ್ರಕೋಟೆಯನ್ನಾಗಿ ಮಾಡುವ ಆಸೆಯಲ್ಲಿ ರಾಜಕೀಯವಲ್ಲದೇ ಬೇರೆ ಏನು ಇರಲಿಕ್ಕೆ ಸಾಧ್ಯ? ಹೈದರಾಬಾದ್ ನಗರದ ಸ್ಥಾನ-ಮಾನ  ಹಾಗೂ ನದಿ ನೀರಿನ ಹಂಚಿಕೆಯನ್ನು ಕುರಿತ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭವಲ್ಲ. ಆದರೆ ಆ ಕೆಲಸ ಈಗ ಆಗಲೇಬೇಕಾಗಿದೆ ಕಗ್ಗಂಟನ್ನು ಬಿಡಿಸುವ ಮಾರ್ಗ ಇನ್ನೂ ಗೋಚರವಾದಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement