ಭ್ರಷ್ಟಾಚಾರ ಅಪರಾಧಿ ಸಂಸದ ರಷೀದ್ ಮಸೂದ್ ದಾಖಲೆ
1990-91 ರಲ್ಲಿ ವಿಶ್ವನಾಥ ಪ್ರತಾಪ ಸಿಂಗ್ ನೇತೃತ್ವದ ಸಚಿವ ಸಂಪುಟದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಸಚಿವರಾಗಿದ್ದು, ಈಗ ಕಾಂಗ್ರೆಸ್ ರಾಜ್ಯಸಭೆ ಸದಸ್ಯರಾಗಿರುವ ...
1990-91 ರಲ್ಲಿ ವಿಶ್ವನಾಥ ಪ್ರತಾಪ ಸಿಂಗ್ ನೇತೃತ್ವದ ಸಚಿವ ಸಂಪುಟದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಸಚಿವರಾಗಿದ್ದು, ಈಗ ಕಾಂಗ್ರೆಸ್ ರಾಜ್ಯಸಭೆ ಸದಸ್ಯರಾಗಿರುವ ರಷೀದ್ ಮಸೂದ್ ಕ್ರಿಮಿನಲ್ ಅಪರಾಧಿಯಾಗಿ, ಸಂಸತ್ತಿನ ಸದಸ್ಯತ್ವವನ್ನೇ ಕಳೆದುಕೊಂಡು ಈ ಬಾಬಿನಲ್ಲಿ ದೇಶದಲ್ಲೇ ಮೊದಲ ದಾಖಲೆಯನ್ನು ಆರಂಭಿಸಿದ್ದಾರೆ.
ತ್ರಿಪುರಾ ಮೆಡಿಕಲ್ ಕಾಲೇಜಿಗೆ ಅನರ್ಹ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಶಿಫಾರ್ಸು ಮಾಡಿದ ಪ್ರಕರಣ ಇದು. ದೆಹಲಿಯ ಸಿಬಿಐ ನ್ಯಾಯಾಲಯ ಮಂಗಳವಾರ ನೀಡಿದ ತೀರ್ಪಿನಲ್ಲಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಸುಪ್ರೀಮ್ ಕೋರ್ಟಿನ ಜುಲೈ 10ರ ಆದೇಶದಂತೆ ಅವರು ತಮ್ಮ ಸ್ಥಾನಕ್ಕೇ ಅನರ್ಹರಾಗಿದ್ದಾರೆ. ಸೋಮವಾರವೇ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ ಯಾದವ್ ಅವರಿಗೂ ಇದೇ ಗತಿ ಒದಗಿತ್ತು. ಆದರೆ ಅವರ ಜೈಲು ಶಿಕ್ಷೆಯ ಅವಧಿ ಪ್ರಕಟವಾಗಿಲ್ಲ, ಆದ್ದರಿಂದ ಸ್ಥಾನ ಚ್ಯುತಿಯ ಅಧಿಕೃತ ಪ್ರಕಟಣೆ ಹೊರಬೀಳಬೇಕಾಗಿದೆ.
ಈ ಎರಡು ಪ್ರಕರಣಗಳಿಂದ, ದೇಶದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರ ವಿರುದ್ಧದ ಕಾಯಿದೆ ಬದ್ಧ ಹೋರಾಟಕ್ಕೆ ಹೊಸ ಸ್ವರೂಪವೇ ಬಂದಂತೆ ಆಗಿರುವುದು ನಿಜ. ಈ ಎರಡು ಪ್ರಕರಣಗಳನ್ನು ಸದ್ಯಕ್ಕೆ "ನಿಭಾಯಿಸಲು" ಕೇಂದ್ರ ಸಚಿವ ಸಂಪುಟ ತುರ್ತು ಶಾಸನದ ಪ್ರಕಟಣೆಯ ಮಾರ್ಗ ಹಿಡಿದಾಗ, ಮೊದಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅದಕ್ಕೆ ಅನುಮತಿ ನೀಡುವುದಕ್ಕೆ ಕಾಲಾವಕಾಶ ಪಡೆದಿದ್ದು, ಅನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿ ತುರ್ತು ಶಾಸನದ ಜಾರಿಯ ನೀತಿಯನ್ನೇ ಪ್ರಶ್ನಿಸಿದ್ದು, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸ್ಪಷ್ಟವಾಗಿ ನೆರವು ನೀಡಿದ್ದು ನಿಜ.
ರಾಜಕೀಯದಲ್ಲಿ ಯಶಸ್ಸು ಗಳಿಸಿ, ಸಂಸದ, ಶಾಸಕರ ಸ್ಥಾನ ಪಡೆದ ಅನಂತರ ಏನು ಮಾಡಿದರೂ ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು, ಒಂದು ವೇಳೆ ಶಿಕ್ಷೆಯಾದರೂ ನ್ಯಾಯಾಲಯಗಳಲ್ಲಿನ ಅಪೀಲು ಪದ್ಧತಿಯಿಂದ ಅಂತಿಮ ತೀರ್ಪಿನವರೆಗೂ ಎಲ್ಲಾ ಸೌಲಭ್ಯಗಳನ್ನು ಅನುಭವಿಸಬಹುದೆನ್ನುವ ನಂಬಿಕೆಗೆ ಈಗ ದೊಡ್ಡ ಪೆಟ್ಟೇ ಬಿದ್ದಿದೆ.
ಒಂದು ದೃಷ್ಟಿಯಿಂದ ಈ ಬೆಳವಣಿಗೆ ನಿಜವಾಗಲೂ ಕ್ರಾಂತಿಕಾರಿ ಬೆಳವಣಿಗೆಯೇ. ದೇಶದ ಅನೇಕ ಭಾಗಗಳಲ್ಲಿ ಹಾಗೂ ಕೇಂದ್ರದಲ್ಲಿ ವಿನಿಮಯವಾಗುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಗಮನಿಸಿದರೆ, ಅನೇಕ ಸಂಸದರು, ಶಾಸಕರು ಸುಪ್ರೀಮ್ ಕೋರ್ಟಿನ ತೀರ್ಪಿನ ತೀವ್ರ ಪರಿಣಾಮವನ್ನು ಎದುರಿಸಬೇಕಾಗಬಹುದು.
ನಿಜ, ಈಗ ಪ್ರಕಟವಾಗಿರುವ ಎರಡು ಪ್ರಕರಣಗಳಲ್ಲೂ ನ್ಯಾಯ ದಾನದಲ್ಲಿ, ತುಂಬಾ ವಿಳಂಬವಾಗಿದೆ. 1990-1997ರಲ್ಲಿ ನಡೆದ ಅಪರಾಧಗಳ ಪ್ರಕರಣದಲ್ಲಿ ಶಿಕ್ಷೆಯಾಗುತ್ತಿರುವುದು 2013 ರಲ್ಲಿ, ಅದೂ ರಾಜಕೀಯ ಸ್ಥಾನ-ಮಾನದ ಚ್ಯುತಿಯ ಶಿಕ್ಷೆ ಅಷ್ಟೇ. ತ್ರಿಪುರಾ ಮೆಡಿಕಲ್ ಕಾಲೇಜ್‌ನಲ್ಲಿನ ಅಕ್ರಮ ಪ್ರವೇಶದ ಪ್ರಕರಣದಲ್ಲಿ ಹಲವಾರು ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗಾದ ನಷ್ಟವನ್ನು ತುಂಬಿ ಕೊಡುವುದು ಅಸಾಧ್ಯ. ರಷೀದ್ ಮಸೂದ್, ಲಾಲೂ ಪ್ರಸಾದ ಯಾದವ್ ಅವರಿಬ್ಬರೂ ಪ್ರಕರಣ ನಡೆದ 23 ವರ್ಷ, 17 ವರ್ಷಗಳ ಕಾಲ ರಾಜಕೀಯ ಪ್ರಾತಿನಿಧ್ಯದ ಎಲ್ಲ ಸೌಲಭ್ಯಗಳನ್ನೂ, ಪ್ರಭಾವದಿಂದ ಸಿಗುವ ಎಲ್ಲ ಬಗೆಯ ಫಲವನ್ನೂ ಅನುಭವಿಸುವುದು ಸಾಧ್ಯವಾಯಿತು. ಇನ್ನು ಆ ಪ್ರಕರಣಗಳ ವಿಚಾರಣೆ ಅಂತಿಮ ಹಂತವನ್ನು ತಲುಪಲು ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಇಂತಹ ಸನ್ನಿವೇಶವನ್ನು ಎದುರಿಸಲು ಕ್ಷಿಪ್ರ ನ್ಯಾಯದಾನ ವ್ಯವಸ್ಥೆ ಕುರಿತ ಚಂತನೆಗೆ ಇದು ಸೂಕ್ತ ಕಾಲ.