ಮಾನವೀಯತೆಯಿಲ್ಲದ ಅಧಿಕಾರ ನನಗೆ ಬೇಡ
ಅಕ್ಟೋಬರ್ 2, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ. ಅವರು ಕೇವಲ ಹದಿನೆಂಟು ತಿಂಗಳು ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದರೂ ...
ಅಕ್ಟೋಬರ್ 2, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ. ಅವರು ಕೇವಲ ಹದಿನೆಂಟು ತಿಂಗಳು ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದರೂ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾರೆ. ಅಧಿಕಾರವೆಂಬುದು ಸೇವೆಯ ಸಾಧನವೇ ಹೊರತು ನಮ್ಮ ಹಿರಿಮೆಯನ್ನು ಮೆರೆಯುವುದಕ್ಕಲ್ಲ ಎಂದವರು ನಂಬಿದ್ದರು. ತಮ್ಮ ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ಬದುಕಿದವರು. ಹೀಗಾಗಿ ಅವರ ಜೀವನವೇ ನಮಗೊಂದು ಸಂದೇಶವಾಗಿದೆ. 1952 ರಿಂದ 1955 ರವರೆಗೆ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ನಡೆದ ಒಂದು ಚಿಕ್ಕ ಘಟನೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅವರು ಒಂದು ಸಲ ಸರದಾರ್ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭವೊಂದಕ್ಕೆ ಮುಖ್ಯ ಅತಿಥಿಗಳು. ಅವರ ಜೊತೆ ಉತ್ತರಪ್ರದೇಶದ ಒಬ್ಬ ಸಚಿವರೂ ಅವರೊಡನೆ ಕಾರಿನಲ್ಲಿ ಪಯಣಿಸುತ್ತಿದ್ದರು. ದಾರಿಯಲ್ಲಿ ಅಲ್ಲಲ್ಲಿ ಹಳ್ಳಿಗಳಲ್ಲಿ ಲಾಲ್ ಬಹಾದ್ದೂರರನ್ನು ನಿಲ್ಲಿಸಿ, ಮಾತನಾಡಿಸಿ ಧನ್ಯರಾದವರೆಷ್ಟೋ ಮಂದಿ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಹೋಗುತ್ತಿದ್ದುದರಿಂದ ಸಹಜವಾಗಿಯೇ ಸಮಾರಂಭಕ್ಕೆ ತೆರಳಲು ತಡವಾಗುತ್ತಾ ಹೋಯಿತು.
ಹಳ್ಳಿಯೊಂದರ ಮೂಲಕ ಹಾದು ಹೋಗುವಾಗ ಅಲ್ಲಿ ಸೇರಿದ್ದ ಜನ ಅವರ ಕಾರನ್ನು ತಡೆದು ನಿಲ್ಲಿಸಿದರು. ತಮ್ಮ ಹಳ್ಳಿಯ ಮಹಿಳೆಯೊಬ್ಬಳು ಹೆರಿಗೆ ನೋವಿನಿಂದ ನರಳುತ್ತಿರುವುದಾಗಿಯೂ, ಯಾವ ವಾಹನದ ವ್ಯವಸ್ಥೆ ಇಲ್ಲದ್ದರಿಂದ ಸಹಾಯಮಾಡಬೇಕೆಂದೂ ಕೋರಿದರು. ಮೊದಲೇ ಸಮಾರಂಭಕ್ಕೆ ತಡವಾದ್ದರಿಂದ ಅವರ ಜೊತೆ ಬಂದಿದ್ದ ಮಂತ್ರಿ ಸಿಡಿಮಿಡಿಗೊಂಡು ಗ್ರಾಮಸ್ಥರನ್ನು ದೂರಹೋಗಲು ಕೂಗುತ್ತಿದ್ದ. ಅದನ್ನು ಗಮನಿಸಿದ ಶಾಸ್ತ್ರಿಗಳು ಕಾರಿನಿಂದಿಳಿದು "ಆ ಸಹೋದರಿಯನ್ನು ಕರೆತನ್ನಿ, ನನ್ನ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತೇನೆ" ಎಂದರು. ಇದನ್ನು ಕೇಳಿದ ಜೊತೆಯಲ್ಲಿದ್ದ ಮಂತ್ರಿಗಳು "ಸಮಾರಂಭಕ್ಕೆ ಈಗಲೇ ತಡವಾಗಿದೆ. ಇಲ್ಲದ ಉಸಾಬರಿ ನಿಮಗೇಕೆ ನಡೆಯಿರಿ ಹೋಗೋಣ ಎಂದು ಒತ್ತಾಯ" ಮಾಡಿದರು. ಅವರ ಮಾತನ್ನು ಲೆಕ್ಕಿಸದ ಶಾಸ್ತ್ರಿಯವರು,"ಸಮಯಕ್ಕಿಂತ ಮಾನವೀಯತೆಗೆ ಬೆಲೆಕೊಡಬೇಕು. ಒಂದು ಜೀವ ಉಳಿಸುವುದಕ್ಕಿಂತ ಸಮ್ಮೇಳನ ಮುಖ್ಯವಲ್ಲ, ಸ್ವಲ್ಪ ತಡವಾಗಿ ಹೋದರೆ ಏನೂ ಆಗುವುದಿಲ್ಲ" ಎಂದು ಆ ಮಹಿಳೆಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಸಮೀಪದ ಆಸ್ಪತ್ರೆಗೆ ತಲುಪಿಸಿದ ನಂತರವೇ ಸಮಾರಂಭಕ್ಕೆ ಹೋದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.