ಮುಖ್ಯಮಂತ್ರಿ- ಲಾಡ್
ಸಚಿವ ಸಂತೋಷ್ ಲಾಡ್ ಅವರು ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಡಾ ಖಂಡಿತವಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾಗಿದೆ. ಅಲ್ಲಿಗೆ ಅವರ ಮಟ್ಟಿಗೆ ಈಗ ಸಂತೋಷ ಲಾಡ್ ಅವರು ಮಂತ್ರಿಯಾಗಿ ಮುಂದುವರಿಯುವ ವಿಚಾರದಲ್ಲಿ ನಡೆಯುತ್ತಿರುವ ವಾದ-ವಿವಾದ ಮುಗಿದಂತೆಯೇ. ಸಿದ್ಧರಾಮಯ್ಯ ಅವರು ಈ ನಿರ್ಧಾರವನ್ನು ಪ್ರಕಟಿಸುವ ಮುನ್ನ ಸಚಿವರು ಪ್ರದರ್ಶಿಸಿದ ದಾಖಲೆಗಳನ್ನೆಲ್ಲ ಪರಿಶೀಲಿಸಿದ್ದಾರೆ. ಆ ಪರಿಶೀಲನೆಯಿಂದ ಸಚಿವ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಪಾಲುಗೊಂಡಿಲ್ಲ ಎನ್ನುವುದು ಅವರಿಗೆ ಖಾತ್ರಿಯಾಗಿದೆ.
ಈಗಾಗಲೇ ಈ ವಿವಾದದಲ್ಲಿ ಬೇಕಾದಷ್ಟು "ಸಾಹಿತ್ಯ" ಪ್ರಕಟವಾಗಿದೆ. ಅಕ್ರಮ ಗಣಿಗಾರಿಕೆ, ಅಕ್ರಮವಾಗಿ ಅದಿರನ್ನು ಅರಣ್ಯ ಪ್ರದೇಶದಲ್ಲಿ ಸುರಿದಿದ್ದು, ಕಂಪನಿಗಳ ಮಾಲಿಕತ್ವ ಕುರಿತಂತೆ ಸಾಕಷ್ಟು ಮಾಹಿತಿ ಬಹಿರಂಗವಾಗಿದೆ.
ಲೋಕಾಯುಕ್ತರ ವರದಿಯಲ್ಲಿ ಸಂತೋಷ್ ಲಾಡ್ ಅವರ ಹೆಸರು ಕಂಡು ಬಂದಿಲ್ಲ. ಆ ವರದಿಯಲ್ಲಿ ಉಲ್ಲೇಖವಾಗಿರುವ ಹೆಸರಿನ ಕಂಪನಿಗೂ ತಮಗೂ ಸಂಬಂಧ ಇಲ್ಲ ಎನ್ನುವುದು ಸಚಿವರ ಹೇಳಿಕೆ. ಸಮಾಜ ಪರಿವರ್ತನ ಸಮುದಾಯದ ಪ್ರಮುಖ ಎಸ್.ಆರ್. ಹಿರೇಮಠ ಅವರು ಪ್ರಕಟಿಸಿರುವ ಹೇಳಿಕೆಯಲ್ಲಿ ಸಚಿವರ ಹೆಸರು ಇದೆ.
ಈ ವಿಚಾರದಲ್ಲಿ ಮುಖ್ಯಮಂತ್ರಿಗೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಎಚ್.ಎಸ್. ದೊರೆಸ್ವಾಮಿ ಅವರೂ ಪತ್ರ ಬರೆದಿದ್ದರು. ಸಿದ್ಧರಾಮಯ್ಯ ಅವರು ತಮಗೆ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಅನಂತರ ಈ ವಿವಾದದಲ್ಲಿ ಹೊಸ, ವಿಶ್ವಾಸಾರ್ಹ ಮಾಹಿತಿ ದೊರಕುವವರೆಗೆ ಸರ್ಕಾರದಿಂದ ಜನ ಏನನ್ನೂ ನಿರೀಕ್ಷಿಸಬಾರದು.