ರೋಗಿ ಗಂಡನ ಸೇವೆಗೆ ನಿಂತ ಕಿಯೊಕೊ
'ಕಿಯೊಕೊ', 1920ರ ದಶಕದಲ್ಲಿ ಜಪಾನಿನಲ್ಲಿ ಜೀವಿಸಿದ್ದ ಒಬ್ಬ ಮಹಿಳೆ. ಆಕೆಯ ಪತಿಗೆ ಕುಷ್ಟರೋಗ ತಗಲಿಕೊಂಡಿತು. ಯಾವ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ "ನರೂಕೊದಲ್ಲಿರುವ ಬಿಸಿನೀರಿನ ಚಿಲುಮೆಯಲ್ಲಿ ಸ್ನಾನ ಮಾಡಿಸಿದರೆ ವಾಸಿಯಾಗುತ್ತದೆ" ಎಂಬ ಸಲಹೆ ಯಾರಿಂದಲೋ ಬಂತು. ನರೂಕೊ ಆಕೆಯ ಹಳ್ಳಿ ಗೊಫುವಿನಿಂದ ಸುಮಾರು 700 ಕಿ.ಮೀ ದೂರದಲ್ಲಿತ್ತು. ಅಲ್ಲಿಗೆ ತನ್ನ ರೋಗಿಷ್ಠ ಗಂಡನನ್ನು ಕಷ್ಟಪಟ್ಟು ಕರೆದೊಯ್ದಳು. ಅಲ್ಲಿ ಒಂದು ಗುಡಿಸಲನ್ನು ಬಾಡಿಗೆಗೆ ಪಡೆದು ಕೆಲವು ದಿನಗಳು ಅಲ್ಲಿಯೇ ನೆಲೆಸಿ ಪ್ರತಿ ದಿನ ಬಿಸಿನೀರು ಚಿಲುಮೆಯಲ್ಲಿ ತನ್ನ ಪತಿಗೆ ಸ್ನಾನ ಮಾಡಿಸುತ್ತಿದ್ದಳು. ಗಂಡನ ಕಾಯಿಲೆ ಉಲ್ಬಣಗೊಂಡಿತೇ ಹೊರತು ವಾಸಿಯಂತೂ ಆಗಲಿಲ್ಲ. ಕುಷ್ಟರೋಗ ದೇಹದಲ್ಲೆಲ್ಲಾ ವ್ಯಾಪಿಸಿ ನೋಡಿದರೆ ಅಸಹ್ಯ ಹುಟ್ಟಿಸುವಂತೆ ಆತ ಬದಲಾಗಿದ್ದು. ಆದ್ದರಿಂದ ಬಾಡಿಗೆ ನೀಡಿದ ರೈತ ಅವರಿಬ್ಬರನ್ನು ಗುಡಿಸಲಿನಿಂದ ಹೊರದಬ್ಬಿದ. ಬೇರೆ ದಾರಿಕಾಣದೆ ಕಿಯೊಕೊ ಗಂಡನನ್ನು ವಾಪಸ್ ಹಳ್ಳಿಗೆ ಕರೆದೊಯ್ಯಲು ಸಿದ್ಧಳಾಗಿ ರೈಲ್ವೇ ಟಿಕೇಟು ಪಡೆದು ಪ್ರಯಾಣ ಬೆಳೆಸಿದಳು. ಆದರೆ ಬೋಗಿಯಲ್ಲಿದ್ದವರು ತಮ್ಮೊಡನೆ ಕುಷ್ಟರೋಗಿಯೊಬ್ಬನು ಪ್ರಯಾಣ ಬೆಳೆಸುವುದನ್ನು ವಿರೋಧಿಸಿ, ಅವರನ್ನು ಬೋಗಿಯಿಂದ ಬಲವಂತವಾಗಿ ಹೊರಹಾಕಿದರು. ಇದರಿಂದ ನೊಂದ ಕಿಯೊಕೊ ರೈಲ್ವೆ ಅಧಿಕಾರಿಗಳನ್ನು ಕಂಡು ಬೇಡಿಕೊಂಡರೂ ಕುಷ್ಟರೋಗಿಯೊಬ್ಬ ರೈಲಿನಲ್ಲಿ ಪಯಣಿಸುವಂತಿಲ್ಲ ಎಂದು ಅವಳ ಬೇಡಿಕೆಯನ್ನು ನಿರಾಕರಿಸಿದರು. ಆದರೂ ಎದೆಗುಂದದ ಕಿಯೊಕೊ ಒಂದು ಸೈಕಲ್ ರಿಕ್ಷಾ ಖರೀದಿಸಿ ಅದರಲ್ಲಿ ತನ್ನ ಪತಿಯನ್ನು ಕೂಡಿಸಿಕೊಂಡು ದೂರದ ತನ್ನೂರಿಗೆ ಹೊರಟಳು. ದಾರಿಯಲ್ಲಿ ಉಪಹಾರ ಗೃಹಗಳು, ಹೊಟೆಲ್ಗಳು ಮತ್ತು ಧರ್ಮ ಛತ್ರಗಳ್ಯಾವುವೂ ಅವರಿಗೆ ಉಳಿಯುವುದಕ್ಕೆ ಅವಕಾಶ ನೀಡದೇ ಇದ್ದುದರಿಂದ ಪಾಳು ಬಿದ್ದ ಕಟ್ಟಡಗಳಲ್ಲಿ ರಾತ್ರಿಹೊತ್ತು ಕಾಲಕಳೆದು ಮುಂದಿನ ಪ್ರಯಾಣ ಬೆಳೆಸುತ್ತಿದ್ದರು. ಶೀಘ್ರ ಊರು ತಲುಪದಿದ್ದರೆ, ತೀವ್ರ ಚಳಿ ಮತ್ತು ಹಿಮಪಾತಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದ್ದುದರಿಂದ ಪ್ರತಿದಿನವೂ ಶ್ರಮ ಪಟ್ಟು ಸೈಕಲ್ ತುಳಿಯಬೇಕಾಗಿತ್ತು. ಅಂತೂ ಕಷ್ಟ ಪಟ್ಟು ತನ್ನ ಪತಿಯನ್ನು ಊರಿಗೆ ಕರೆತಂದಾಗ ಆಕೆಯ ಅತ್ತೆ ಮಾವ ಸೊಸೆಯ ಸಾಹಸವನ್ನು ಮೆಚ್ಚಿಕೊಂಡರು. ಆದರೂ ಆಕೆಯ ಬಗ್ಗೆ ಅವರಿಗೆ ಬಹಳ ಮರುಕ ಹುಟ್ಟಿತು. ಬೇಕಿದ್ದರೆ ನೀನು ತವರು ಮನೆಗೆ ತೆರಳಬಹುದೆಂದು ಆಕೆಗೆ ತಿಳಿಸಿದರು. ಆದರೆ ಆ ಮಹಾಪತಿವ್ರತೆ ಅದಕ್ಕೊಪ್ಪದೆ, ಕೊಳೆತು ನಾರುತ್ತಿದ್ದ ತನ್ನ ಗಂಡನ ಗಾಯಗಳನ್ನು ತೊಳೆದು, ಒರೆಸಿ, ಶುಶ್ರೂಷೆ ಮಾಡಲಾರಂಭಿಸಿದಳು. ಆದರೂ ಅವಳ ಮುಖದಲ್ಲಿ ತಿರಸ್ಕಾರವಾಗಲೀ, ನೋವಾಗಲೀ ಕಾಣಿಸಿಕೊಳ್ಳದೆ ನಗುನಗುತ್ತಾ ಇರುವುದನ್ನು ನೋಡಿ ಪರಿಚಿತನೊಬ್ಬ ಪ್ರಶ್ನಿಸಿದ, "ನಿಮ್ಮ ಈ ಶೋಚನೀಯ ಜೀವನಕ್ಕೆ ನಿಮಗೆ ಬೇಸರವೆನಿಸುವುದಿಲ್ಲವೆ?" ಅದಕ್ಕೆ ಆ ಸಾಧ್ವಿ ತನ್ನ ಗಂಡನ ಸೇವೆ ಮಾಡುವುದೇ ಪರಮಭಾಗ್ಯ ಎಂದೂ, ತನ್ನ ಸೇವೆಯಿಂದ ಕಿಂಚಿತ್ತಾದರೂ ತನ್ನ ಪತಿಗೆ ನೋವು ಕಡಿಮೆಯಾದರೆ ಅಷ್ಟೇ ಸಾಕು ಎಂದೂ ಉತ್ತರಿಸಿದಳು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.