ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸುಗ್ರೀವಾಜ್ಞೆ ಕುರಿತ ಪೌರುಷ

Mainashree
Updated On : 2 Oct 2013, 10:56 am

ಸುಗ್ರೀವಾಜ್ಞೆಯಲ್ಲಿ ಅಸಂಬದ್ಧ ಎಂದು ಹೀಗಳೆದ ರಾಹುಲ್ ಗಾಂಧಿಯವರನ್ನು ಅವರ ಪಕ್ಷದ ಯುವಪೀಳಿಗೆಯ ಕೆಲವರು ಬೆಂಬಲಿಸುತ್ತಿರುವಂತಿದೆ. ರಾಹುಲ್ ಅವರ ಹೇಳಿಕೆ ದುಡುಕಿನದಾಯಿತು. ಕೇಂದ್ರ ಸರ್ಕಾರ ಯಾಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಬಗ್ಗೆ ಆತುರದಿಂದಿದೆಯೆನ್ನುವುದು ರಾಹುಲ್‌ಗೆ ಗೊತ್ತಿರದ ಸಂಗತಿಯಾಗಿರಲಿಲ್ಲ. ರಾಜಕೀಯ ಕಾರಣಕ್ಕಾಗಿ ಇದನ್ನು ರೂಪಿಸಲಾಗಿದೆ ಎಂದು ದೂರುವ ರಾಹುಲ್, ಈ ಕುರಿತು ತಮ್ಮ ಅಸಮಾಧಾನ ಅಸಮ್ಮತಿಗಳನ್ನು ಕಾಂಗ್ರೆಸ್ ವರಿಷ್ಠರಿಗೆ ಏಕೆ ವ್ಯಕ್ತಪಡಿಸಲಿಲ್ಲ? ಇವರು ಕಾಂಗ್ರೆಸ್‌ನ ಉಪಾಧ್ಯಕ್ಷ; ಇವರ ತಾಯಿ ಸೋನಿಯಾ ಪಕ್ಷದ ಅಧ್ಯಕ್ಷೆ. ಮೇಲಾಗಿ ಇವರೀರ್ವರೂ ಸಂಸದರು. ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಇವರ ಮಾತನ್ನು ಅಲ್ಲಗಳೆಯುವವರಿಗೆ ಬೆಲೆಯಿಲ್ಲವೆನ್ನುವುದು ತಿಳಿದ ವಿಷಯವೇ; ಅಥವಾ, ಹೀಗೂ ಹೇಳಬಹುದು: ಇವರ ಮಾತೇ ಕೊನೆಯ ಮಾತು; ಪ್ರಶ್ನಾತೀತ. ಇಂತಹ ಪ್ರಭಾವವಿರುವ ರಾಹುಲ್ ಸುಗ್ರೀವಾಜ್ಞೆ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಹಿಂದೆ ಏನೂ ಕುತಂತ್ರ ಇಲ್ಲವೆಂದು ಹೇಗೆ ಹೇಳುವುದು. ಗಮನಿಸಬೇಕಾದ್ದೆಂದರೆ ಸುಪ್ರಿಂಕೋರ್ಟ್‌ನ ತೀರ್ಪು ಬಂದಿದ್ದು, ಅದು ಜಾರಿಯಾಗುವುದನ್ನು ತಡೆಯಲು ರಾಹುಲ್ ಪಕ್ಷದ ಧೀಮಂತರು ಸುಗ್ರೀವಾಜ್ಞೆಯ ಯೋಚನೆ ಮಾಡಿದ್ದು ಸೋನಿಯಾ ಅವರಿದ್ದ ಸಭೆಯಲ್ಲಿ. ಸುಗ್ರೀವಾಜ್ಞೆ ಬಗ್ಗೆ ದೇಶದಲ್ಲಿ ತೀವ್ರ ವಿರೋಧವೆದ್ದಿತು.
ಅದರ ಸಮರ್ಥನೆಗೆ ಹೊರಟವರದು ಕ್ಷೀಣದನಿಯಾಯಿತು. ರಾಷ್ಟ್ರಪತಿಯನ್ನು ಮುಖ್ಯ ವಿಪಕ್ಷವಾದ ಮತ್ತು ಸುಗ್ರೀವಾಜ್ಞೆಯನ್ನು ವಿರೋಧಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಭಾಜಪ ಭೇಟಿಯಾಗಿ ಅದಕ್ಕೆ ಸಹಿ ಹಾಕಬಾರದೆಂದು ಮನವಿ ಮಾಡಿತು. ಏತನ್ಮಧ್ಯೆ ಸುಗ್ರೀವಾಜ್ಞೆಯ ಪ್ರಸ್ತುತತೆಯ ಬಗಗೇ ರಾಷ್ಟ್ರಪತಿಗಳಿಗೆ ಸಂದೇಹವಿದ್ದು ಅವರು ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇತ್ತು. ಕೇಂದ್ರದ ಮೂವರು ಸಚಿವರು ರಾಷ್ಟ್ರಪತಿಯನ್ನು ನೋಡಿದ್ದರು ಭಾಜಪದ ನಂತರ. ಇಷ್ಟರವರೆಗೂ ಮೌನವಾಗಿದ್ದ ಮತ್ತು ಸುಗ್ರೀವಾಜ್ಞೆಗೆ ಪಕ್ಷದಲ್ಲೇ ತಮ್ಮ ನಿಲುವುನ್ನು ತಿಳಿಸದಿದ್ದ ರಾಹುಲ್ ದಿಢೀರನೆ ಪತ್ರಿಕಾಗೋಷ್ಠಿಯಲ್ಲಿ ಸುಗ್ರೀವಾಜ್ಞೆ ಅಸಂಬದ್ಧ, ಅದು ಹರಿದು ಬಿಸಾಕುವಂಥದ್ದು, ಸರ್ಕಾರದ ನಿಲುವಿಗೆ ತಮ್ಮ ಸಮ್ಮತಿ ಇಲ್ಲ, ಭ್ರಷ್ಟಾಚಾರದ ವಿಷಯದಲ್ಲಿ ಹೊಂದಾಣಿಕೆ ಸಲ್ಲದು ಎಂದೆಲ್ಲ ಹೇಳಿ ಮಿಂಚಿನಂತೆ ಹೊರಟು ಬಿಟ್ಟರು.
ದೇಶದ ಮುಂದಿನ ಪ್ರಧಾನಿ ಎಂದು ಪ್ರಚಾರದಲ್ಲಿರುವ ಹಾಗೂ ಹೊಣೆಗಾರಿಕೆಯ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ ಸರ್ಕಾರದ ವಿರುದ್ಧ, ಅದೂ ತಮ್ಮದೇ ಸರ್ಕಾರ ಮಾತನಾಡುವಾಗ ಬಳಸುವ ಭಾಷೆ ತೂಕ ತಪ್ಪದಂತಿರಬೇಕು. ಕೇಡಿಗತನವೇ, ಇನ್ನು ನಿನ್ನ ಪಾರುಪತ್ಯ ಎಂಬಂತಾಗಿದೆ ಈಗ. ಸೊರಗುತ್ತಿರುವ ಕಾಂಗ್ರೆಸ್‌ಗೆ ಚೈತನ್ಯ ತುಂಬುವ ಪರಿ ಇದಲ್ಲ. ಸುಗ್ರೀವಾಜ್ಞೆ ದುರುದ್ದೇಶದಿಂದ ಕೂಡಿರಬಹುದಾದರೂ ಅದರ ವಿರುದ್ಧ ಹೇಳುವಲ್ಲಿ ಸಂಯಮ, ಘನತೆ ಇರಬೇಕಲ್ಲವೇ?.
-ಸಾಮಗ ದತ್ತಾತ್ರಿ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement