ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೆ.ಪಿ.ಎಸ್.ಸಿ. ಸಂತ್ರಸ್ತರೆಲ್ಲರಿಗೂ ನ್ಯಾಯ ದೊರಕಿಸಿ

Mainashree
Updated On : 3 Oct 2013, 10:33 am

ಕಳೆದ ಕೆಲವಾರು ತಿಂಗಳುಗಳಿಂದ ಕೆಪಿಎಸ್‌ಸಿಯಲ್ಲಿ ಮೌಲ್ಯಮಾಪನ ಹಾಗೂ ಸಂದರ್ಶನದಲ್ಲಿ ನಡೆದಿರಬಹುದು ಎನ್ನಲಾದ ಅವ್ಯವಹಾರದ ಕುರಿತಾಗಿ ಸಿಐಡಿ ತನಿಖೆ ನಡೆಸಿ ಅಧಿಕಾರಿಗಳು ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷರು ಹಾಗೂ ಇತರೇ ಕೆಲ ಸದಸ್ಯರು ಮತ್ತು ಅಧಿಕಾರಿಗಳು ತಪ್ಪಿತಸ್ಥರು ಎಂದು ಆರೋಪ ಪಟ್ಟಿ ತಯಾರಿಸಿರುವುದು ಸಿಐಡಿ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರವೂ ಕೂಡಾ ಇದಕ್ಕೆ ಸ್ಪಂದಿಸಿ ಮರುಮೌಲ್ಯಮಾಪನ ಹಾಗೂ ಸಂದರ್ಶನಕ್ಕೆ ನಿರ್ಧರಿಸಿರುವುದೂ ಕೂಡ ಸ್ವಾಗತಾರ್ಹವಾದುದಾಗಿದೆ. ಸಿದ್ದರಾಮಯ್ಯನವರು ಅಭಿನಂದನಾರ್ಹರು. 1998ರಿಂದ 2011ವರೆಗಿನ ಕೇವಲ ಕೆಎಎಸ್ ನೇಮಕಾತಿಯಲ್ಲಿನ ಅವ್ಯವಹಾರಗಳನ್ನಷ್ಟೇ ಕೇಂದ್ರೀಕೃತವಾಗಿಟ್ಟುಕೊಂಡು ಸಂದರ್ಶನದಲ್ಲಿ ಬೇಕಾಬಿಟ್ಟಿ ಅಂಕಗಳನ್ನು ನೀಡಿ ಅವ್ಯವಹಾರ ಎಸಗಿರುವುದಾಗಿ ಬಿಂಬಿಸಲಾಗುತ್ತಿದೆಯೇ ಹೊರತು ಈಗ ಸಲ್ಲಿಸಲಿರುವ ಆರೋಪ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಅಧ್ಯಕ್ಷರಾದ ಗೋನಾಳ ಭೀಮಪ್ಪನವರೇ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2009 ಮತ್ತು 2010ರಲ್ಲಿ ಸಂದರ್ಶನ ನಡೆಸಲಾದ ಪ್ರೌಢಶಾಲಾ ಮುಖ್ಯ ಶಿಕ್ಷಕರ ನೇರ ನೇಮಕಾತಿಯ ಸಂದರ್ಶನ ಹಾಗೂ ಪದವಿ ಕಾಲೇಜುಗಳ  ಉಪನ್ಯಾಸಕರ ನೇಮಕಾತಿ ಮತ್ತು ಇನ್ನಿತರ ಇಲಾಖೆಗಳ ಕೆಲ ನೇಮಕಾತಿ ಸಂದರ್ಶನಗಳಲ್ಲಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವವರಾರು? ಬಹು ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಜಾತಿ ಮತ್ತು ದುಡ್ಡು ಭಾರೀ ಪ್ರಮಾಣದಲ್ಲಿ ಕೆಲಸ ಮಾಡಿದೆ. ಇದು ಸಂಪ್ರದಾಯವಾಗಿ ಬೆಳೆದು ಬಂದಿದೆ ಎಂದು ತನಿಖಾಧಿಕಾರಿಗಳೇ ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಹಿಂದಿನ ಎಲ್ಲ ನೇಮಕಾತಿಗಳಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿವೆ ಎನ್ನಲಾಗುತ್ತಿದೆ.  ಆದ್ದರಿಂದ ನ್ಯಾಯಪರರಾದ, ಪ್ರಾಮಾಣಿಕ ರಾಜಕಾರಣಿ ಎಂದು ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ನೇಮಕಾತಿಗಳ ಸಂದರ್ಶನವನ್ನು ರದ್ದುಗೊಳಿಸಿ ಪುನರ್ ಸಂದರ್ಶನದ ವ್ಯವಸ್ಥೆ ಮಾಡಿ ನ್ಯಾಯ ದೊರಕಿಸಬೇಕೆಂದು ವಿನಂತಿ.
-ಎಸ್.ಎಲ್. ತಲ್ಲೂರ, ಬೆಳಗಾವಿ ಜಿಲ್ಲೆ
ದೆಹಲಿಯಲ್ಲಿ ವಿಶೇಷ ಪ್ರತಿನಿಧಿ ಬೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯಲ್ಲಿ ಕರ್ನಾಟಕ ವಿಶೇಷ ಪ್ರತಿನಿಧಿಯನ್ನು ನೇಮಿಸುವುದರಲ್ಲಿ ಉತ್ಸುಕರಾಗಿದ್ದು ತಮ್ಮ ಆಪ್ತ ಬಂಟರನ್ನು ನಿಯಮಿಸಿ ಅವರಿಗೊಂದು ಹುಲ್ಲುಗಾವಲನ್ನು ನಿರ್ಮಿಸಿಕೊಡುವುದರಲ್ಲಿ ಆಸಕ್ತರಾಗಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ವಾಸ್ತವವಾಗಿ ದೆಹಲಿಯಲ್ಲಿ ವಿಶೇಷ ಪ್ರತಿನಿಧಿ ಬೇಕೆ? ಈ ಹಿಂದೆ ನೇಮಕಗೊಂಡ ವಿಶೇಷ ಪ್ರತಿನಿಧಿಗಳ ಸಾಧನೆಯ ಪರಾಮರ್ಶೆ ಸರ್ಕಾರವು ಮಾಡಿರುವುದೇ ಹೇಗೆ? ಇದಕ್ಕೆ ಉತ್ತರ ಇಲ್ಲವೆಂದಾದರೆ ಯಾವ ಪುರುಷಾರ್ಥಕ್ಕಾಗಿ ದೆಹಲಿಯಲ್ಲಿ ವಿಶೇಷ ಪ್ರತಿನಿಧಿಯನ್ನು ನೇಮಿಸಬೇಕು? ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ಅವರಿಗೆ ನೀಡುವ ಸಕಲ ಸೌಲಭ್ಯಗಳೂ ವ್ಯರ್ಥವೇ ಸರಿ. ಹೀಗಿರುವಾಗ ಹಾಲಿ ಲೋಕಸಭಾ ಸದಸ್ಯರಲ್ಲಿ ಯಾರಾದರೂ ಅರ್ಹರಿದ್ದರೆ, ಅವರಿಗೆ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದರೆ, ಅವರು ಕನಿಷ್ಠ ಅಧಿಕಾರ ಬಲದಿಂದಾದರೂ ಕರ್ನಾಟಕದ ಕೆಲಸ ಮಾಡಿಸಬಹುದು. ಅಲ್ಲದೆ ಕರ್ನಾಟಕಕ್ಕೆ ಆರ್ಥಿಕವಾಗಿ ಹೊರೆಯಾಗಲಾರದು. ಇದೆಲ್ಲಕ್ಕಿಂತ ಹೆಚ್ಚಾಗಿ ಸಂಸದರಿಗೆ ಪ್ರತಿ ವರ್ಷ ನೀಡುವ ಅನುದಾನವನ್ನೇ ಸರಿಯಾಗಿ ಬಳಸದ ಅನೇಕ ಸಂಸದರಿದ್ದಾರೆ. ಇದು ತೀರಾ ನಾಚಿಕೆಗೇಡಿನ ಸಂಗತಿ. ಇಡೀ ಭಾರತದಲ್ಲಿ ಕರ್ನಾಟಕವು ಅತ್ಯಂತ ಕಡಿಮೆ ರೇಲ್ವೆ ಜಾಲವನ್ನು ಹೊಂದಿದ್ದು ಹಾಲಿ ರೇಲ್ವೆ ಸಚಿವರು ಈ ವರ್ಷ ಮಂಜೂರಾದ ಯೋಜನೆಗಳು ಹಾಗೂ ಹೊಸದಾಗಿ ಘೋಷಿಸಿದ ರೇಲ್ವೆಗಳನ್ನಾದರೂ ಶೀಘ್ರವಾಗಿ ಪ್ರಾರಂಭಿಸಿ ತಮ್ಮ ಸಾಮರ್ಥ್ಯವನ್ನು ಮೆರೆಯಲಿ.
-ಎಂ.ಪಿ. ಹರಗನಹಳ್ಳಿ, ಧಾರವಾಡ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement