ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಮಗ್ರ ಅಭಿವೃದ್ಧಿ ಸೂಚ್ಯಂಕ ಹಣದ ಹಂಚಿಕೆಗೆ ಆಧಾರವಲ್ಲ

Mainashree
Updated On : 3 Oct 2013, 10:33 am

ರಾಜ್ಯಗಳಿಗೆ ಕೇಂದ್ರದ ಹಣವನ್ನು ನ್ಯಾಯವಾದ ರೀತಿಯಲ್ಲಿ ಹಂಚುವ ಪ್ರಕ್ರಿಯೆಗೆ, ಸಂವಿಧಾನದಲ್ಲೇ ಒಂದು ವ್ಯವಸ್ಥೆ ಹಾಗೂ ಸೂತ್ರವಿದೆ. ಐದು ವರ್ಷಗಳಿಗೊಮ್ಮೆ ಸರ್ಕಾರ ನೇಮಿಸುವ ವಿತ್ತ ಆಯೋಗದ ಶಿಫಾರ್ಸುಗಳ ಆಧಾರದ ಮೇಲೆ ಯೋಜನೆಗೆ ಅಗತ್ಯವಾದ ಹಣದ ವ್ಯವಸ್ಥೆ ಮಾಡಲು ಈ ಮಾರ್ಗವನ್ನು ಕಳೆದ ಅರವತ್ತು ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ.
ನಿಜ. ದೇಶದಲ್ಲಿ ಎಲ್ಲ ರಾಜ್ಯಗಳೂ ಅಭಿವೃದ್ಧಿಯ ದೃಷ್ಟಿಯಿಂದ ಸಮಾನವಾದ ಸ್ಥಾನದಲ್ಲಿಲ್ಲ. ಬೇರೆ ಬೇರೆ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಿಸಿ, ವಿತ್ತ ಆಯೋಗದ ಸದಸ್ಯರು, ಕೇಂದ್ರ ಸರ್ಕಾರ, ಯೋಜನಾ ಆಯೋಗ ಹಾಗೂ ರಾಜ್ಯಗಳ ಜತೆ ವಿಚಾರ ವಿನಿಮಯ ನಡೆಸಿದ ಅನಂತರ ಹಂಚಿಕೆಯ ಸ್ವರೂಪವನ್ನು ನಿಗದಿಪಡಿಸುವ ವ್ಯವಸ್ಥೆ ಜಾರಿಯಲ್ಲಿದೆ.
ಇದು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆ. ಕೇಂದ್ರ ಸರ್ಕಾರಕ್ಕೆ ಈಗಲೂ ಅಗತ್ಯ ಕಂಡು ಬಂದಾಗ ಕೆಲವು ರಾಜ್ಯಗಳಿಗೆ ವಿಶೇಷ ನೆರವನ್ನು ಕೊಡುವ ಅಧಿಕಾರ ಇದ್ದೇ ಇದೆ. ಈಗಾಗಲೇ ಹದಿನಾಲ್ಕನೇ ವಿತ್ತ ಆಯೋಗವನ್ನು ರಚಿಸುವ ಭರವಸೆ ಚಿದಂಬರಮ್ ಅವರ ಬಜೆಟ್ ಭಾಷಣದಲ್ಲೇ ಅಡಕವಾಗಿದೆ.
ಆದರೂ ಕೇಂದ್ರ ಸರ್ಕಾರ, ಈಗಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ಅವರ ನೇತೃತ್ವದ ಒಂದು ತಜ್ಞರ ಸಮಿತಿಯನ್ನು ರಚಿಸಿ (ಆಗ ಅವರು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿರಲಿಲ್ಲ) ರಾಜ್ಯಗಳ ಅಭಿವೃದ್ಧಿಯ ಮಟ್ಟವನ್ನು ಗುರ್ತಿಸಿ, ಅದರ ಆಧಾರದ ಮೇಲೆ ರಾಜ್ಯಗಳಿಗೆ ಹಣವನ್ನು ಹಂಚುವ ವ್ಯವಸ್ಥೆಯನ್ನು ರೂಪಿಸಿದ್ದು, ಅನೇಕ ರಾಜ್ಯಗಳಿಗೆ ಪಥ್ಯವಾಗಿಲ್ಲ.
ರಘುರಾಮನ್ ರಾಜನ್ ಸಮಿತಿ ಚುರುಕಾಗಿ ಕೆಲಸ ಮಾಡಿ, ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಿರುವ ಗುಂಪು, ಕಡಿಮೆ ಅಭಿವೃದ್ಧಿಯನ್ನು ಸಾಧಿಸಿರುವ ಗುಂಪು ಹಾಗೂ ತೀರ ಹಿಂದುಳಿದ ರಾಜ್ಯಗಳ ಗುಂಪುಗಳೆಂದು ವಿಂಗಡಿಸಿ, ಆಯಾ ಗುಂಪಿಗೆ ಅನ್ವಯವಾಗುವ ಸೂತ್ರವನ್ನು ರೂಪಿಸಲು ಮುಂದಾಗಿದೆ.
ಆ ಸೂತ್ರಕ್ಕೆ ಆಧಾರ, ಈ ಸಮಿತಿಯೇ ನಿರ್ಧರಿಸಿರುವ ಹಲವಾರು ವಲಯಗಳಲ್ಲಿ (ಕೃಷಿ ಉತ್ಪಾದನೆ, ಸರಾಸರಿ ಲೆಕ್ಕದಲ್ಲಿ ತಲಾವಾರು ಪದಾರ್ಥಗಳ ಬಳಕೆಯ ಪ್ರಮಾಣ, ಶಿಕ್ಷಣ, ಆರೋಗ್ಯ ಇತ್ಯಾದಿ) ಸಾಧನೆಯಾಗಿರುವ ಪ್ರಗತಿಯ ಮಾಪನಕ್ಕೆ ರೂಪಿಸಿಕೊಂಡ ಸಮಗ್ರ ಅಭಿವೃದ್ಧಿ ಸೂಚ್ಯಂಕ.
ಈ ಸೂಚ್ಯಂಕದಂತೆ ತಮಿಳುನಾಡು- ಕೇರಳ ಮೊದಲ ಗುಂಪಿನಲ್ಲಿವೆ. ಕರ್ನಾಟಕ- ಗುಜರಾತ್- ಆಂಧ್ರ ಪ್ರದೇಶ ಎರಡನೆಯ ಗುಂಪಿನಲ್ಲಿವೆ. ಮೂರನೆಯ ಗುಂಪಿನಲ್ಲಿ ಬಿಹಾರ ಮತ್ತಿತರ ರಾಜ್ಯಗಳಿವೆ. ಸಮಿತಿಯ ಸೂತ್ರವನ್ನೇ ಅವಲಂಬಿಸಿ ಕೇಂದ್ರದ ಹಣವನ್ನು (ಅದೂ ದೇಶದ ಹಣವೇ) ಹಂಚಿದರೆ, ಕಷ್ಟಪಟ್ಟು ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎನ್ನುವುದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ವಾದ. ಅದನ್ನು ಅವರು ಪ್ರಧಾನಿಗೆ ಬರೆದ ದೀರ್ಘ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ರಘುರಾಮನ್ ರಾಜನ್ ಸಮಿತಿಯ ವರದಿಯನ್ನು ಬಹಳ ಬುದ್ಧಿವಂತಿಕೆಯಿಂದ, ಈಗಿನ ಸರ್ಕಾರದಲ್ಲಿ ಆಳುವ ಕೂಟದ ಭವಿಷ್ಯದ ಅಂಗ ಪಕ್ಷಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಇದು ಬೌದ್ಧಿಕ ಅಪಚಾರ ಎನ್ನುವ ಅಭಿಪ್ರಾಯ ಜಯಲಲಿತಾ ಅವರದ್ದು. (ಬಿಹಾರದ ಹೆಸರು ಹೇಳಿಲ್ಲ)
ಇಂತಹ ರಾಜಕೀಯ ಪ್ರೇರಿತ ಕ್ರಮಗಳನ್ನು ಕೇಂದ್ರ ಅನುಸರಿಸಿದರೆ, ಒಕ್ಕೂಟ ವ್ಯವಸ್ಥೆಯೇ ಕುಸಿದು ಬೀಳಬಹುದೆನ್ನುವ ಎಚ್ಚರಿಕೆಯೂ ಪತ್ರದಲ್ಲಿದೆ. ಕೇಂದ್ರ ಸರ್ಕಾರ ಈ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ತೀರ ಹಿಂದುಳಿದ ರಾಜ್ಯಗಳಿಗೆ ವಿಶೇಷ ನೆರವನ್ನು ಕೊಡುವುದು ಬೇರೆ. ರಾಜ್ಯಗಳಿಗೆ ಸಲ್ಲಬೇಕಾದ ನ್ಯಾಯವಾದ ಪಾಲನ್ನು ಒದಗಿಸಿಕೊಡುವ ನೀತಿ ಬೇರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement