ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿತ್ತ ವರ್ಷದ ಅರ್ಧದಾರಿ

Mainashree
Updated On : 6 Oct 2013, 9:31 am

ಅಕ್ಟೋಬರ್ ಬಂತೆಂದರೆ, ಆರ್ಥಿಕ ವಲಯದ ಪಂಡಿತರ ಗಮನವೆಲ್ಲ ಕೇಂದ್ರೀಕೃತವಾಗುವುದು, ವರ್ಷದ ಮೊದಲ ಅರ್ಧ ಭಾಗದ ಅನಂತರ ವಿತ್ತೀಯ ಪರಿಸ್ಥಿತಿಯ ಆಗು-ಹೋಗುಗಳತ್ತ. ನಿಜ. ಸೆಪ್ಟೆಂಬರ್‌ನ ಅಂಕಿ -ಅಂಶಗಳು ಇನ್ನೂ ಪೂರ್ತಿಯಾಗಿ ಲಭ್ಯವಿಲ್ಲದೇ ಹೋದರೂ ಆರ್ಥಿಕ ವಲಯದ ದಿಕ್ಕು ದೆಸೆಗಳತ್ತ ಗಮನಹರಿಸಿದರೆ ಸ್ಥೂಲವಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ಒಂದು ದೇಶದ ಬಜೆಟ್ ಪ್ರಕ್ರಿಯೆಯಲ್ಲಿ ಸರ್ಕಾರದ ಆದಾಯ-ವೆಚ್ಚ ಮೂಲ ಸೌಲಭ್ಯದ ನಿರ್ಮಾಣದ ಕೆಲಸವನ್ನು ಗಮನಿಸಿದರೆ ವರ್ಷದ ಹನ್ನೆರಡು ತಿಂಗಳಲ್ಲಿ ಪ್ರತಿ ತಿಂಗಳೂ ಒಂದೇ ರೀತಿಯ ಅಂಕಿ-ಅಂಶಗಳು ದೊರೆಯುವುದಿಲ್ಲ. ಅದು ಅರ್ಥವಾಗುವ ವಿಚಾರ. ಆದರೂ ಇದುವರೆಗೆ ಲಭ್ಯವಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ದೇಶದ ಪ್ರಗತಿಯ ವಿಚಾರದಲ್ಲಿ ವಿಪರೀತ ಆಶಾವಾದಕ್ಕೆ ಅವಕಾಶವಿಲ್ಲ. ಪರಿಸ್ಥಿತಿಯನ್ನು ಹಾಗೂ-ಹೀಗೂ ನಿಭಾಯಿಸಬಹುದಷ್ಟೇ.
ಆದರೆ ವಿತ್ತ ಮಂತ್ರಿ ಚಿದಂಬರಮ್ ಅವರು ಪ್ರತಿವರ್ಷವೂ ಪಂಡಿತರ ಲೆಕ್ಕಾಚಾರದಲ್ಲಿ ಏರು ಪೇರಾಗುತ್ತಿರುವಂತೆ, ಚಾಲ್ತಿ ವರ್ಷದಲ್ಲೂ ಸರ್ಕಾರ ತನ್ನ ಸ್ಥೂಲ ವಿತ್ತೀಯ ಗುರಿಗಳನ್ನು ಮುಟ್ಟುವ ಭರವಸೆ ತಮಗಿದೆ ಎಂದಿದ್ದಾರೆ. ಅದನ್ನು ಅಲ್ಲಗಳೆಯಲಿಕ್ಕೆ ಸದ್ಯಕ್ಕೆ ಯಾವ ಆಧಾರವೂ ಇಲ್ಲ.
ಈಗಿನ ಪ್ರಕಟಿತ ಅಂದಾಜುಗಳಂತೆ, ಆಹಾರ ಹಾಗೂ ಇಂಧನ ಸಬ್ಸಿಡಿಗಳ ಮೊತ್ತ ಅಂದಾಜಿಗಿಂತ ಸುಮಾರು 30,000 ಕೋಟಿ ರುಪಾಯಿಗಳಷ್ಟು ಹೆಚ್ಚಾಗಲಿದೆ. ಆ ಅಂಕಿ-ಅಂಶಗಳನ್ನು ತಿಳಿದಿರುವ ಚಿದಂಬರಮ್ ವರ್ಷಾಂತ್ಯದ ವೇಳೆಗೆ ಸುಮಾರು 20,000 ಕೋಟಿ ರುಪಾಯಿಗಳನ್ನು ಉಳಿಸುವುದು ಸಾಧ್ಯ ಎಂದು ನಂಬಿದ್ದಾರೆ.
ವರ್ಷದ ಮೊದಲ ಐದು ತಿಂಗಳ ಆದಾಯ - ವೆಚ್ಚದ ನಡುವಣ ಕೊರತೆ ಸುಮಾರು 404657 ಕೋಟಿ ರುಪಾಯಿಗಳು. ಕೇಂದ್ರ ಸರ್ಕಾರ ಆರಂಭಿಸಿರುವ ಮಿತವ್ಯಯದ ಆಂದೋಲನ ಈ ಪರಿಸ್ಥಿತಿಯನ್ನೇನೂ ಬದಲಾಯಿಸಿಲ್ಲ. ಆದರೆ ಯೋಜನೇತರ ಬಾಬಿನ ವೆಚ್ಚ 479,845 ಕೋಟಿ ರುಪಾಯಿಗಳ ಹಂತದಲ್ಲೇ ನಿಂತಿದೆ. ಅಂದರೆ ಸರ್ಕಾರ ಖರ್ಚು ಮಾಡಿರುವುದು ಒಟ್ಟು ಖರ್ಚಿನ ಅಂದಾಜಿನ ಶೇಕಡಾ 43 ರಷ್ಟೇ. ಹಾಗೆಂದರೆ ಈ ವರ್ಷ ಯೋಜನೇತರ ಬಾಬಿನ ಖರ್ಚು ಅಂದಾಜಿಗಿಂತ ಹೆಚ್ಚಾಗಲಾರದು. ಈ ವ್ಯವಹಾರಗಳನ್ನು ಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ, ಅನೇಕ ಬಗೆಯ ಸೇವೆ - ಸೌಲಭ್ಯಗಳಿಗೆ - ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ - ಹೆಚ್ಚು ಹಣ ಖರ್ಚಾಗಲಿಕ್ಕಿಲ್ಲ. ಆ ಕಾರ್ಯಕ್ರಮಗಳೆಲ್ಲವೂ ಕುಂಟಬಹುದು.
ಒಟ್ಟು ರಾಷ್ಟ್ರೀಯ ಉತ್ಪಾದನೆ ಹಾಗೂ ಸೇವಾ ಸೌಲಭ್ಯಗಳ ವಾರ್ಷಿಕ ಏರಿಕೆಯ ದರವನ್ನು ಹಿಂದಿನ ಮಟ್ಟದಲ್ಲೇ ಉಳಿಸಿಕೊಳ್ಳಲು ಭಗೀರಥ ಪ್ರಯತ್ನವೇ ಬೇಕು. ಆದರೆ ಅಂತಹ ರಾಜಕೀಯ ಸಂಕಲ್ಪ ಶಕ್ತಿ ಸರ್ಕಾರದಲ್ಲಿ ಕಂಡು ಬರುತ್ತಿಲ್ಲ.
ಚಿದಂಬರಮ್ ಅವರೂ ವಿತ್ತಮಂತ್ರಾಲಯಕ್ಕೆ ಗೊತ್ತಿರುವ ಎಲ್ಲ ತಂತ್ರಗಳನ್ನು ಬಳಸಲು ಸಿದ್ಧರಾಗಿಯೇ ನಿಂತಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಅವರು ಸರ್ಕಾರಿ ಬ್ಯಾಂಕ್‌ಗಳಿಗೆ ಅಧಿಕ ಪ್ರಮಾಣದ ಷೇರು ಬಂಡವಾಳವನ್ನು ಒದಗಿಸಿ, ಅದರಿಂದ ವಾಹನಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷೀನ್‌ಗಳನ್ನು ಕೊಳ್ಳಲು ಕಡಿಮೆ ಬಡ್ಡಿ ದರದ ಸಾಲ ನೀಡಲು ವ್ಯವಸ್ಥೆಯಾಗುತ್ತಿದೆ ಎಂದಿದ್ದಾರೆ. ಈ ಕ್ರಮದಿಂದ ಔದ್ಯಮಿಕ ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಬಂದರೆ, ಆರ್ಥಿಕ ಪ್ರಗತಿಯ ವೇಗ ತಾನೇ ತಾನಾಗಿ ಹೆಚ್ಚುತ್ತದೆ ಎನ್ನುವ ಮಾತದು.
ಆದರೆ ಬ್ಯಾಂಕ್‌ಗಳಿಗೆ ಅಧಿಕ ಬಂಡವಾಳವನ್ನು ಒದಗಿಸುವುದಕ್ಕೂ (ಅದು ಅಗತ್ಯ ಎನ್ನುವುದು ಸರಿ) ಸಾಲದ ಬಡ್ಡಿ ದರದ ಇಳಿಕೆಗೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ತಜ್ಞರಿಗೆ ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಿದರೆ ಮಾತ್ರ ಗ್ರಾಹಕರಿಗೆ ಅಗ್ಗದ ಸಾಲ ಸಿಗಬಹುದು. ಅದರ ವಿತರಣೆಯಲ್ಲಿ ಏರುಪೇರಾದರೆ, ಮತ್ತೆ ಬ್ಯಾಂಕ್‌ಗಳ ಕೆಟ್ಟ ಸಾಲದ ಹೊರೆ ಹೆಚ್ಚುವುದು ಅನಿವಾರ್ಯ. ಬೆಂಗಳೂರಿನ ಒಂದು ವಾರಾಂತ್ಯದ ಸಮಾರಂಭದಲ್ಲಿ ಚಿದಂಬರಮ್ ಅವರು ಬ್ಯಾಂಕ್‌ಗಳು ಕಾರ್ಪೊರೇಟ್ ವಲಯದತ್ತ ದೃಷ್ಟಿ ಹರಿಸದೇ, ಸಾಮಾನ್ಯ ಜನರ ಕಡೆಗೆ ಹೆಚ್ಚು ಗಮನ ಕೊಡುವ ಅಗತ್ಯವಿದೆ ಎಂದಿರುವುದು ನಿಜಕ್ಕೂ ಅರ್ಥಪೂರ್ಣ. ಬೃಹತ್ ಕಾರ್ಪೊರೇಟ್‌ಗಳು ಬ್ಯಾಂಕ್ ಸಾಲಗಳ ಕಂತುಗಳನ್ನು ದೊಡ್ಡ ಪ್ರಮಾಣದಲ್ಲೇ ಬಾಕಿ ಉಳಿಸಿಕೊಂಡಿರುವುದೇ ಈಗ ನಿರ್ಮಾಣವಾಗಿರುವ ಕೆಟ್ಟ ಪರಿಸ್ಥಿತಿಗೆ ಕಾರಣ.
ಕಾರ್ಪೊರೇಟ್ ವಲಯದ ಬಂಡವಾಳದ ಪೂರೈಕೆಗೆ ಬೃಹತ್ ಸಂಸ್ಥೆಗಳು ಬ್ಯಾಂಕ್‌ಗಳತ್ತ ನೋಡದೇ ಬಂಡವಾಳ ಪೇಟೆಯನ್ನೇ ಅವಲಂಬಿಸುವುದು ಒಳಿತು. ಜಗತ್ತಿನ ಬಹುತೇಕ ದೇಶಗಳಲ್ಲಿ ಇರುವ ಪರಿಸ್ಥಿತಿ ಅದೇ. ಕಳೆದ ವರ್ಷದ ಬಜೆಟ್‌ನಲ್ಲಿ, ವೆಚ್ಚದ ಬಾಬಿನಲ್ಲಿ ಚಿದಂಬರಮ್ ಅವರು ಜಾದೂ ಮಾಡಿದಂತೆ, ಸುಮಾರು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮಿಗಿಸಿದ್ದರು. ಆದ್ದರಿಂದ ಹೊಸ ಬಜೆಟ್ ಮಂಡನೆಯ ವೇಳೆಗೆ ಅವರು ವಿತ್ತೀಯ ಕೊರತೆಯನ್ನು ತುಂಬುವುದು ಕಷ್ಟವಾಗುತ್ತದೆ ಎನ್ನುವ ಭವಿಷ್ಯವಾಣಿಯನ್ನು ಸುಳ್ಳಾಗಿಸಿದ್ದರು. ಆದರೆ ಆ ಕಾಲದಲ್ಲಿ ಕೈಗೊಳ್ಳಬೇಕಾಗಿದ್ದ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿರುವುದು. ಜನರ ಗಮನಕ್ಕೆ ಬರುವುದು ಇನ್ನು ಮೂರು ವರ್ಷದ ಅನಂತರ ಆಡಿಟ್ ವರದಿ ಪ್ರಕಟವಾದಾಗಲೇ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹತಾಶರಾಗಿ ಕೈ ಎತ್ತಿ ಸುಮ್ಮನೆ ಕೂಡುವ ವ್ಯಕ್ತಿಯಲ್ಲ ಚಿದಂಬರಮ್. ಪರಿಸ್ಥಿತಿಯ ಸುಧಾರಣೆಗೆ ಹರಸಾಹಸಕ್ಕೆ ಅವರು ಸಜ್ಜಾಗಿದ್ದಾರೆ. ಅದನ್ನು ಮೆಚ್ಚಬೇಕಾದ್ದೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement