ಶಿಕ್ಷಕರ ಮೇಲಿನ ಹೊರೆ ಕಡಿಮೆಯಾಗುವುದೇ?
ಶಿಕ್ಷಕರ ವರ್ಗಾವಣೆಯನ್ನು ಪ್ರತಿ ವರ್ಷವೂ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಸ್ವಾಗತಾರ್ಹ ನಿಲುವು. ಆದರೆ ಇದು ಭರವಸೆಯಾಗಿಯೇ ಉಳಿಯದೆ ಕಾರ್ಯ ರೂಪಕ್ಕೆ ಬರಬೇಕು. ಈ ವರ್ಗಾವಣೆ ನೀತಿ ಉಪಾಧ್ಯಾಯರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಉದ್ಯಮದ ನೌಕರರಿಗೂ ಅನ್ವಯವಾಗಬೇಕು. ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ರವರ ಆಡಳಿತವನ್ನು ಅನುಕರಣೆ ಮಾಡಿದರೆ ನೌಕರರಿಗೆ ಬಹಳಷ್ಟು ಸುಧಾರಣೆ ಹಾಗೂ ಸಮಾಧಾನ ಆಗುತ್ತದೆ. ವರ್ಗಾವಣೆಯನ್ನು ಈಗಿನಂತೆ ಕಾಲವಲ್ಲದ ಕಾಲದಲ್ಲಿ ಮಾಡಿಕೊಂಡೇ ಹೋದರೆ ಅದು ನೌಕರರಿಗೆ ಶಿಕ್ಷೆಯಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಲು ತುಂಬಾ ಅನಾನುಕೂಲವಾಗುತ್ತದೆ. ಬಿಸಿಯೂಟದ ಜವಾಬ್ದಾರಿಯನ್ನು ಸ್ತ್ರೀಶಕ್ತಿ ಸಂಘಗಳಿಗೆ ನೀಡುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರು ಹೇಳಿದ್ದಾರೆ. ಶಿಕ್ಷಕರಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಜವಾಬ್ದಾರಿ ಮಾತ್ರ ಇರಬೇಕು. ಇತರೆ ಕೆಲಸಗಳನ್ನು ಹೊರೆಸುವುದು ಸರಿಯಲ್ಲ. ಶಿಕ್ಷಣೇತರ ಕೆಲಸಗಳನ್ನು ಅವರ ಹೆಗಲ ಮೇಲೆ ಹೊರಿಸಿದಾಗ ಅವರ ಹುದ್ದೆಯ ಮೂಲೋದ್ದೇಶವಾದ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸವನ್ನು ದಕ್ಷತೆಯಿಂದ ಮಾಡಲಾಗುವುದಿಲ್ಲ. ಶಿಕ್ಷಣೇತರ ಕೆಲಸವನ್ನೂ ಸಮರ್ಪಕವಾಗಿ ಮಾಡಲು ಸಾಧ್ಯವಾಗದೆ ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸಿರುವ ಉದಾಹರಣೆಗಳು ಅನೇಕ. ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರ ಶೇಖರ್ರವರು ವಾರ್ಷಿಕ ಪರೀಕ್ಷಾ ಪದ್ಧತಿಯನ್ನು ವಿದ್ಯಾರ್ಥಿಗಳ ಮೇಲೆ ಭಯೋತ್ಪಾದಕರು ನಡೆಸುವ ದಾಳಿಯಿದ್ದಂತೆ ಎಂದು ಹೇಳಿದ್ದಾರೆ. ಒಂದುವೇಳೆ ವರ್ಷಕ್ಕೊಮ್ಮೆ ನಡೆಸುವ ಪರೀಕ್ಷೆ ಅವರ ದೃಷ್ಟಿಯಲ್ಲಿ ಸರಿಯಲ್ಲವೆಂದು ಹೇಳುವುದಾದರೆ ಯಾವ ವ್ಯವಸ್ಥೆ ಸರಿ ಎಂದು ಹೇಳಿ ಪರಿಹಾರವನ್ನು ಸೂಚಿಸಬೇಕಿತ್ತು. ಈಗಾಗಲೇ ಪರೀಕ್ಷೆಯ ವಿಧಾನವನ್ನು ಉನ್ನತ ಮಟ್ಟಗಳಲ್ಲಿ ಸೆಮಿಸ್ಟರ್ ಮತ್ತು ಟ್ರೈಮಿಸ್ಟರ್ಗಳಲ್ಲಿ ಮಾಡಲಾಗುತ್ತಿದೆ. ಇದು ಒಳ್ಳೆಯದೇ. ಏಕೆಂದರೆ ವಿದ್ಯಾರ್ಥಿಗಳು ವರ್ಷವಿಡೀ ಅಧ್ಯಯನದಲ್ಲಿ ತೊಡಗಿರುತ್ತಾರೆ. ವರ್ಷಕ್ಕೊಮ್ಮೆ ಪರೀಕ್ಷೆ ಮಾಡುವುದರಿಂದ ವರ್ಷವೆಲ್ಲಾ ಸುಮ್ಮನೆ ಕಾಲ ಕಳೆದು ಪರೀಕ್ಷೆ ಹತ್ತಿರ ಬಂದಾಗ ಕಾಟಾಚಾರಕ್ಕೆ ಓದಿ ಹೇಗೋ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸಾಕು ಎನ್ನುವಂತೆ ವರ್ತಿಸುತ್ತಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಿಗೆ ಯಾವ ರೀತಿ ಪರೀಕ್ಷೆ ನಡೆಸಿದರೆ ಸೂಕ್ತ ಎನ್ನುವುದನ್ನು ಚಂದ್ರಶೇಖರ್ರವರು ತಿಳಿಸಬಹುದಾಗಿತ್ತು. ಪರೀಕ್ಷೆಯ ಭಯವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಮನಸ್ಸಿಗೆ ಬಂದಂತೆ ಒಂದಕ್ಕೊಂದನ್ನು ಹೋಲಿಕೆ ಮಾಡುವುದು ಸರಿಯಲ್ಲ.
- ಕೆ.ವಿ. ಸೀತಾರಾಮಯ್ಯ, ಹಾಸನ
ಅಯ್ಯೋ 'ಆಧಾರ'ವೇ!
ಅಂತೂ ಆಧಾರ ನಿರಾಧಾರವಾಯಿತು. ನನ್ನಂತಹ ನೂರಾರು ಮಂದಿ ಅನ್ನ-ನೀರು ಬಿಟ್ಟು ಆಧಾರ ಕೇಂದ್ರಗಳಿಗೆ ಅಲೆದು ಸಮಯವನ್ನು ಹಾಳು ಮಾಡಿ ಜೆರಾಕ್ಸ್ ಕೇಂದ್ರಗಳನ್ನೂ, ವಾಹನಗಳನ್ನೂ, ಉದ್ಧಾರ ಮಾಡಿ ಆಧಾರ್ ಕಾರ್ಡ್ಗಳನ್ನು ಪಡೆದುಕೊಂಡುದುದು ವ್ಯರ್ಥವಾಯಿತು! ಪೋಸ್ಟ್ಕಾರ್ಡ್ನಂತಹ ಸಾಮಾನ್ಯ ಕಾರ್ಡ್ನಲ್ಲಿ ಅಮೂಲ್ಯವಾದ (!) ಆಧಾರ್ಕಾರ್ಡ್ನ್ನು ಮುದ್ರಿಸಿ ವಿತರಿಸಿದ ಆಧಾರ್ ಉದ್ಯಮದ ಮೌಲ್ಯ ಅಂದೇ ಕಳೆದು ಹೋಗಿದೆ. ಆಧಾರ್ ಫಾರ್ಮ್ನಲ್ಲಿ ಎಲ್ಲ ವಿಷಯಗಳನ್ನು, ಸಮರ್ಪಕವಾಗಿ ತುಂಬಿದ್ದರೂ ಜನ್ಮದಿನಾಂಕವನ್ನು ಮುದ್ರಿಸದೇ ಕೇವಲ ಜನ್ಮವರ್ಷವನ್ನು ಮಾತ್ರ ಮುದ್ರಿಸಿ ಅದನ್ನು ಅನುಪಯುಕ್ತಗೊಳಿಸಿದ್ದಾರೆ. ಮಹತ್ವದ ಆಧಾರ್ಕಾರ್ಡ್ ಅನ್ನು ಉತ್ತಮವಾದ ಮತ್ತು ಬಲವಾದ ಕಾಗದದಲ್ಲಿ ಮುದ್ರಿಸದಿರುವುದು ಖಂಡನೀಯ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಐವತ್ತು ಸಾವಿರ ಕೋಟಿ ರೂಪಾಯಿ ಹೊಳೆಯಲ್ಲಿ ಹುಣಿಸೆ ಹಣ್ಣು ಕಿವುಚಿದಂತಾಯಿತು! ಆಧಾರ ಕಣ್ಮಣಿ ನೀಲೇಕಣಿ ಚುನಾವಣೆಗೆ ನಿಲ್ಲಲಿದ್ದಾರಂತೆ. ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಆಧಾರವನ್ನು ಬಲವಂತದಿಂದ ಜಾರಿಗೆ ತರಲೂ ಬಹುದು. ನ್ಯಾಯಾಲಯದ ವಿರುದ್ಧ ಕಾನೂನು ಸಮರಕ್ಕೂ ಮುಂದಾಗಬಹುದು! ಮೇರಾ ಭಾರತ್ ಮಹಾನ್!
- ಎಂ. ಸುಬ್ರಹ್ಮಣ್ಯಭಟ್, ಮುಡಿಪು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com