ಕೋದಂಡರಾಯರ ಸಮಾಜ ಸೇವೆ
ವಿಶಾಖಪಟ್ಟಣದಲ್ಲಿ ಜನಿಸಿ, ಮದ್ರಾಸಿನಲ್ಲಿ ವಿದ್ಯಾಭ್ಯಾಸಮಾಡಿ, ಬೆಂಗಳೂರಿನಲ್ಲಿ ನೆಲೆಸಿದ ಕೋದಂಡರಾಯರು ಸಮಾಜ ಹಿತ ಕಾರ್ಯದಲ್ಲಿ ಆದರ್ಶವಾಗಿದ್ದರು...
ವಿಶಾಖಪಟ್ಟಣದಲ್ಲಿ ಜನಿಸಿ, ಮದ್ರಾಸಿನಲ್ಲಿ ವಿದ್ಯಾಭ್ಯಾಸಮಾಡಿ, ಬೆಂಗಳೂರಿನಲ್ಲಿ ನೆಲೆಸಿದ ಕೋದಂಡರಾಯರು ಸಮಾಜ ಹಿತ ಕಾರ್ಯದಲ್ಲಿ ಆದರ್ಶವಾಗಿದ್ದರು. ಸರ್ಕಾರಿ ನೌಕರಿಗೆ ಆಸೆ ಪಡದೆ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸಕ್ರಿಯ ಕಾರ್ಯಕರ್ತರಾದರು. ತಮ್ಮ ಬ್ರಾಹ್ಮಣ್ಯದ ದ್ಯೋತಕವಾದ ಜನಿವಾರವನ್ನು ಕಿತ್ತೆಸೆದು, ತಮ್ಮ ದತ್ತು ತಂದೆ ನೀಡಬಯಸಿದ ಆಸ್ತಿಯನ್ನೂ ಪಡೆಯದೆ ಸ್ವತಂತ್ರವಾಗಿ ಜೀವನ ನಡೆಸಿದರು. ಕೆಲಕಾಲ ಅಧ್ಯಾಪಕ ವೃತ್ತಿಯನ್ನು ಕೈಗೊಂಡು ಪ್ರಸಿದ್ಧರಾಗಿದ್ದರು. ಮಲಹೊರುವ ಪದ್ಧತಿಯನ್ನು ರದ್ದುಮಾಡಲು ಹೋರಾಡಿದರು. ಗಲಭೆಯಲ್ಲಿ ಮೃತರಾದ ಪೊಲೀಸರ ಕುಟುಂಬಕ್ಕೆ ನೆರವು, ರಾಷ್ಟ್ರೀಯ ರಕ್ಷಣಾ ನಿಧಿ ಮತ್ತು ಅಂಬೇಡ್ಕರ್ ಸ್ಮಾರಕ ನಿಧಿ ಮುಂತಾದವುಗಳಿಗೆ ಕಾಣಿಕೆ ಕಳುಹಿಸುತ್ತಿದ್ದರು. ಡಿವಿಜಿ, ರಾಜಾಜಿ, ಶ್ರೀನಿವಾಸ ಶಾಸ್ತ್ರಿ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರ ಸ್ನೇಹ ಸಂಪಾದಿಸಿದ್ದರು. 1932 ರಲ್ಲಿ ಮಹಾತ್ಮ ಗಾಂಧಿಯವರು ಅಸ್ಪೃಶ್ಯತಾ ನಿವಾರಣಾ ಚಳವಳಿ ಪ್ರಾರಂಭಿಸಿದಾಗ ಅವರಿಗೆ ಸಹಾಯಕರಾಗಿ ಸೇವೆ ಸಲ್ಲಿಸಿದರು. ಅವರಿಗೆ ಬರುತ್ತಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿವೃತ್ತಿ ವೇತನದ ಬಹುಭಾಗ ಸಮಾಜಸೇವೆಗೆ ಮೀಸಲಾಗಿತ್ತು. ಒಮ್ಮೆ 1936 ರಲ್ಲಿ ಹವಾಯಿಯ ಹೊನುಲುಲುವಿನಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಕೋದಂಡರಾವ್ ಭಾಗವಹಿಸಿದ್ದರು. ಆ ಸಮ್ಮೇಳನದಲ್ಲಿ ಒಬ್ಬ ಬ್ರಿಟಿಷ್ ಅಧಿಕಾರಿ ಭಾರತೀಯರ ಬಗ್ಗೆ ಅವಹೇಳನಕರವಾಗಿ ಮಾತನಾಡಿದ್ದನ್ನು ಎದ್ದು ನಿಂತು ಪ್ರತಿಭಟಿಸಿದರು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪ್ರತಿದಿನದ ಲೆಕ್ಕವನ್ನು ತಡರಾತ್ರಿಯವರೆಗೂ ಬರೆದು ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅವರು ತಮ್ಮಲ್ಲಿದ್ದ ಹಣವನ್ನು ಸಹಾಯ ಯಾಚಿಸಿ ಬಂದವರಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಖರ್ಚುಮಾಡುತ್ತಿದ್ದುದರಿಂದ ಅವರ ಕೆಲವು ಗೆಳೆಯರು ಅಕ್ಷೇಪಿಸುತ್ತಿದ್ದುದುಂಟು. ಆಗ ಅವರು ಹೇಳುತ್ತಿದ್ದರು, "ನಾನು ಯಾರಿಗಾಗಿ ಹಣ ಉಳಿಸಬೇಕಾಗಿದೆ? ಇನ್ನೆಷ್ಟು ದಿನ ಬದುಕಿರುತ್ತೇನೆ? ಎಷ್ಟು ಊಟ ಮಾಡಿಯೇವು? ನನಗೆ ಹಣ ಬರುವುದು ಜನರ ಔದಾರ್ಯದಿಂದ ತಾನೆ, ಅದನ್ನು ಜನಹಿತಕ್ಕಾಗಲ್ಲದೆ ಬೇರಾವುದಕ್ಕೆ ಖರ್ಚುಮಾಡಲಿ?" ಎಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. ಅವರ ಸಮಾಜ ಸೇವೆಯನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸಿ ಅರ್ಪಿಸಲಾದ ನಿಧಿಯನ್ನು ತಮ್ಮ ಪತ್ನಿ ಮೇರಿರಾವ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಮೀಸಲಾದ ದತ್ತಿಯೊಂದನ್ನು ಸ್ಥಾಪಿಸಲು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ನೀಡಿದರು. ಹೀಗೆ ಕೋದಂಡರಾಯರು ತಮ್ಮ ಕಾರ್ಯದಿಂದ ಎಲ್ಲರಿಗೂ ಆದರ್ಶರಾಗಿದ್ದಾರೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.