ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪರಮೇಶ್ವರ ಹೇಳಿಕೆ ಬಹುರೂಪ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರು ಮುಸ್ಲಿಮರಿಗೆ ಸಾಲ ಕೊಡುವುದರ ಅವಶ್ಯಕತೆ ...

Rashmi Kasaragodu
Updated On : 7 Oct 2013, 10:39 am

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರು ಮುಸ್ಲಿಮರಿಗೆ ಸಾಲ ಕೊಡುವುದರ ಅವಶ್ಯಕತೆ ಹಾಗೂ ಕೊಟ್ಟ ಸಾಲವನ್ನು ಹಿಂದಕ್ಕೆ ಕೊಡುವ, ಕೊಡದಿದ್ದರೂ ಪರವಾಗಿಲ್ಲ ಎನ್ನುವ ಹೇಳಿಕೆ ಕಳೆದ ಮೂರು ದಿನಗಳಿಂದಲೂ ಸಾಕಷ್ಟು ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿರುವುದು ನಿಜ.
ಇಡೀ ವಿವಾದವನ್ನು ಒಂದೇ ವಾಕ್ಯದಲ್ಲಿ ಸಮಾಪ್ತಿಗೊಳಿಸುವ ಉದ್ದೇಶದಿಂದ ಅವರು ಸೋಮವಾರ ನೀಡಿದ ಹೇಳಿಕೆಯಲ್ಲಿ ಆ ಜನವರ್ಗಕ್ಕೆ ನೆರವನ್ನು ಒದಗಿಸುವುದೇ ತಮ್ಮ ಉದ್ದೇಶ ಎಂದೂ, ಮುಸ್ಲಿಮರಿಗೆ ಸಾಲದ ನೆರವು ಸಿಕ್ಕರೆ ಅವರ ಅಭಿವೃದ್ಧಿಯ ಜತೆಯಲ್ಲೇ ಸಮಗ್ರ ಆರ್ಥಿಕ ಪರಿಸ್ಥಿತಿಯ ಪ್ರಗತಿಗೂ ನೆರವಾಗಲಿದೆ ಎನ್ನುವ ವಿವರಣೆಯನ್ನು ಹಾಗೇ ಒಪ್ಪಿದರೆ, (ಹಿಂದಿನ ಹೇಳಿಕೆಗಳನ್ನು ಮರೆತು) ಎಲ್ಲವೂ ಸುಗಮವಾದೀತು ಎನ್ನುವುದು ಅವರ ಭಾವನೆ.
ಆದರೆ ಅವರು ತಮ್ಮ ಮೊದಲ ಹೇಳಿಕೆಯಲ್ಲಿ ಮುಸ್ಲಿಮರು ಸಾಲವನ್ನು ಹಿಂದಕ್ಕೆ ಕೊಡದೇ ಹೋದರೂ ಏನೂ ಆಗಲ್ಲ ಎಂದು ಹೇಳಿದ್ದನ್ನು ಈಗ ಪ್ರಸ್ತಾಪಿಸಿಲ್ಲ. ಹೌದು. ಅದು ಎರಡನೇ ಬಾರಿ ಪ್ರಸ್ತಾಪಿಸಬೇಕಾದಂತಹ ವಿಚಾರ ಅಲ್ಲ. ಅದಕ್ಕೆ ಕಾರಣವಿದೆ. ಮೂಲತಃ ಅದು ಅಸಮರ್ಥನೀಯವಾದ ಹೇಳಿಕೆ. ಭಾರತೀಯ ಸಂಸ್ಕೃತಿಯಲ್ಲಿ (ಅದರಲ್ಲಿ ಮುಸಲ್ಮಾನ ಸಂಸ್ಕೃತಿಯ ಅಂಶಗಳೂ ಹೇರಳವಾಗಿ ಸೇರಿಕೊಂಡಿವೆ) ಜನ್ಮ-ಜನ್ಮಾಂತರ ಋಣವನ್ನು ತೀರಿಸುವ ಮಾತಿದೆ. ಜನ್ಮಾಂತರದಲ್ಲಿ ವಿಶ್ವಾಸವಿಲ್ಲದ ಬೌದ್ಧಿಕ- ನಾಸ್ತಿಕವರೇಣ್ಯರೂ, ಋಣದ ಪ್ರಸ್ತಾಪವನ್ನು ಮರೆಯುವಂತಿಲ್ಲ.
ಆದರೆ ಈಗ ಡಾ. ಪರಮೇಶ್ವರ ಅವರು ಸಾಲ- ಋಣ ಇಂತಹ ಪದಗಳನ್ನೇ ಅಳಿಸಿಹಾಕಲು ಹೊರಟಂತಿದೆ. ಹೌದು. ಮುಸ್ಲಿಮರು ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಿಂದ ಪಡೆದ ಸಾಲವನ್ನು ತೀರಿಸಲೇ ಬೇಕೆಂದೇನೂ ಇಲ್ಲ ಎನ್ನುವ ಅರ್ಥ ಬರುವ ಮಾತನ್ನು ಪರಮೇಶ್ವರ ಅವರು ಮೊದಲು ಆಡಿದ್ದು ಉಂಟು. ನಿಜ. ಯಾರ್ಯಾರೋ ಬ್ಯಾಂಕಿನ ಸಾಲವನ್ನು ತಿನ್ನುತ್ತಿರುವ ಉದಾಹರಣೆಗಳಿರುವಾಗ ಮುಸ್ಲಿಮರೂ ಆ ಸುಖವನ್ನು ಅನುಭವಿಸಿದರೇನಂತೆ ಎನ್ನುವ ಧೋರಣೆ ಅನೇಕರದ್ದು. ಆದರೆ ಅದು ಕಾಯಿದೆಯ ದೃಷ್ಟಿಯಿಂದ, ಸಂವಿಧಾನದ ವಿಧಿ- ನಿಯಮಗಳ ಪಾಲನೆಯ ದೃಷ್ಟಿಯಿಂದ, ಅರಿವಿದ್ದೋ- ಇಲ್ಲದೆಯೋ ಸ್ಪಷ್ಟವಾಗಿ ಒಂದು ಜನವರ್ಗಕ್ಕೆ ಕಾಯಿದೆಯ ಭಂಗಕ್ಕೆ ಉತ್ತೇಜನಕಾರಿಯಾಗುವಂತಹ ಮಾತನ್ನು ಆಡಿದಂತೆ ಆಗಿದೆ. ಇದು ಕಾಯಿದೆಯ ಶುದ್ಧ ಅರ್ಥದಲ್ಲಿ ಬಂಡಾಯಕ್ಕೆ ಆಹ್ವಾನವೇ.
ಹೌದು. ನಮ್ಮಲ್ಲಿ ಈಗ ಕೃಷಿ ಹಾಗೂ ಇತರ ಕೆಲವು ವಲಯಗಳಲ್ಲಿ ಸಾಲ ಮನ್ನಾ ಮಾಡಿದ ಉದಾಹರಣೆಗಳಿವೆ. ಅದೂ ಕೂಡಾ ಸಾಕಷ್ಟು ವಾದ-ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇತ್ತೀಚೆಗೆ ವಿತ್ತಮಂತ್ರಿಯಾಗಿ ಚಿದಂಬರಮ್ ಕೃಷಿಕರ ಸುಮಾರು 70,000 ಕೋಟಿ ರುಪಾಯಿಗಳಿಗೂ ಮೀರಿದ ಸಾಲವನ್ನು ಮನ್ನ ಮಾಡಿದ್ದು ನಿಜ. ಅದು ಸಂವಿಧಾನದಂತೆ, ವಿಧಿ ಬದ್ಧವಾಗಿ ಸ್ಥಾಪಿತವಾದ ಸಾರ್ವಭೌಮಾಧಿಕಾರದ ಸರ್ಕಾರ ಕೈಗೊಂಡ ಪ್ರಜ್ಞಾಪೂರ್ವಕವಾದ ನಿರ್ಧಾರ. ಅಂತಹ ಚಿಂತನೆಯನ್ನು (ಸಾಲ ಮನ್ನದ ಮಾತಲ್ಲ, ಆದರೆ ಕೊಡದಿದ್ದರೂ ಚಿಂತೆ ಇಲ್ಲ ಎನ್ನುವ ಅನಿಸಿಕೆ) ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪಡೆದ ಸಾಲಕ್ಕೆ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವಂತಹ ರೀತಿಯಲ್ಲಿ ಪರಮೇಶ್ವರ ಅವರಿಗೆ ಮಾತಾಡುವ ಹಕ್ಕಿಲ್ಲ, ಅಧಿಕಾರವೂ ಇಲ್ಲ.
ಪರಮೇಶ್ವರ ಅವರ ಹಿತವಚನಕ್ಕೆ ನಾನಾ ಜನವರ್ಗಗಳಿಂದ ಪ್ರಕಟವಾದ ವಿರೋಧದ ಹಿನ್ನೆಲೆಯಲ್ಲಿ ಬೇರೆ ರೀತಿಯಲ್ಲಿ ಮಾತನಾಡಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಳ್ಳಲಾಗಿದೆ ಆ ಅರ್ಥದಲ್ಲಿ ಅಲ್ಲ, ತಾವು ಸಾಲ ಬಾಕಿ ಉಳಿಸಿಕೊಳ್ಳುವ ವಿಚಾರ ಪ್ರಸ್ತಾಪಿಸಿದ್ದು ಎಂದಿದ್ದು ಈಗಾಗಲೇ ಜನರಿಗೆ ಚಿರಪರಿಚಿತವಾದ ರೀತಿಯಲ್ಲಿ ವಿವರಣೆ ನೀಡಿದಂತೆ ಆಗಿದೆ ಅಷ್ಟೇ. ಜನರಿಗೆ ಈಗ ಸುಮ್ಮನಿರದೇ ಬೇರೆ ಮಾರ್ಗವೇ ಇಲ್ಲ. ಮುಂದೆ ಈಗ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಟ್ಟಿರುವ ಸಾಲಗಳ ಬಳಕೆ ಯಾವ ರೀತಿಯಲ್ಲಿ ಆಗಿದೆ, ಅದು ಎಷ್ಟರ ಮಟ್ಟಿಗೆ ಹಿಂದಕ್ಕೆ ಬಂದಿದೆ ಎನ್ನುವುದನ್ನು ತಿಳಿಯಲು ಭವಿಷ್ಯದ ಆಡಿಟ್ ವರದಿಯನ್ನೇ ಕಾಯಬೇಕು. ಸದ್ಯದಲ್ಲಿ ಪರಮೇಶ್ವರ ಅವರು ಒಂದಲ್ಲ ಒಂದು ರೀತಿಯಲ್ಲಿ ಉದ್ವಿಗ್ನತೆಗೆ ಒಳಗಾದಂತೆ ಇದೆ. ಅವರ ಪ್ರವಾಸ ಕಾಲದಲ್ಲಿ ಎಲ್ಲ ಕಡೆ, ಜನ, ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೂ ದಿಢೀರ್ ಉತ್ತರ ಹೇಳಲೇಬೇಕೆನ್ನುವ ನಿಯಮವೇನೂ ಇಲ್ಲ. ಜನರನ್ನು ಭೇಟಿ ಮಾಡುವುದು ತಪ್ಪಲ್ಲ. ಆದರೆ ಆಡುವ ಮಾತಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement