ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇನಾಮು ನಿರಾಕರಿಸಿದ ಕಲಾವಿದ

Mainashree
Updated On : 8 Oct 2013, 10:19 am

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಪ್ರಭುಗಳಾಗಿದ್ದಾಗ ಸುಖ, ಶಾಂತಿ ಮತ್ತು ನೆಮ್ಮದಿ ಮನೆಮಾಡಿತ್ತು. ಅವರು ಕಲಾಪೋಷಕರೂ, ವಿದ್ವಜ್ಜನರಿಗೆ ಪ್ರೋತ್ಸಾಹ ನೀಡುವ ಉದಾರಿಗಳೂ ಆಗಿದ್ದರು. ಹೀಗಾಗಿ ಅವರನ್ನು ಎಲ್ಲರೂ ಗೌರವಾದರಗಳಿಂದ ಕಾಣುತ್ತಿದ್ದರು. ಅವರ ಆಸ್ಥಾನದಲ್ಲಿ ದ್ಯಾವಣ್ಣನೆಂಬ ನಾಗಸ್ವರ ಕಲಾವಿದನಿದ್ದ. ಆತ ವಾಸುದೇವಾಚಾರ್ಯರನ್ನು ಗುರುಭಾವದಿಂದ ಕಾಣುತ್ತಾ ಅವರಲ್ಲಿ ಸಂಗೀತವನ್ನೂ ಕಲಿಯುತ್ತಿದ್ದ. ಅವನಿಗೆ ಆಗ ತಿಂಗಳಿಗೆ ಮೂರು ರುಪಾಯಿ ಸಂಬಳ ನೀಡಲಾಗುತ್ತಿತ್ತು. ಒಮ್ಮೆ ಮಹಾರಾಜರು ದ್ಯಾವಣ್ಣನ ನಾಗಸ್ವರ ವಾದನ ಕೇಳಿ ಮಂತ್ರಮುಗ್ಧರಾದರು. ಅವನ ಕಲಾ ಸೇವೆ ಮುಗಿದ ಮೇಲೆ ಅವನನ್ನು ತಮ್ಮ ಆಸ್ಥಾನಕ್ಕೆ ಕರೆಸಿ ಅವನ ಕ್ಷೇಮಸಮಾಚಾರಗಳನ್ನು ವಿಚಾರಿಸಿದರು. ಆತನಿಗೆ ಬರುತ್ತಿದ್ದ ಸಂಬಳ ಅವನ ಜೀವನ ನಿರ್ವಹಣೆಗೆ ಸಾಕಾಗಲಾರದು ಎಂದು ಕಂಡುಬಂತು. ಅಲ್ಲದೆ ವಾಸುದೇವಾಚಾರ್ಯರ ಶಿಷ್ಯತ್ವಪಡೆದು ಸಂಗೀತಾಭ್ಯಾಸ ಮಾಡುತ್ತಿರುವುದನ್ನೂ, ಅವನ ಮನೆಯಲ್ಲಿ ಅವನ ತಾಯಿ, ಹೆಂಡತಿ ಸಹ ಕೆಲಸ ಮಾಡಿ ಸಂಪಾದಿಸುತ್ತಿರುವುದನ್ನು ಕೇಳಿ ತಿಳಿದುಕೊಂಡರು. ಮಹಾರಾಜರಿಗೆ ಅವನ ಸರಳತೆ, ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು. ಅವನಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿ, ಭಕ್ಷಿಯವರನ್ನು ಕರೆಸಿ ದ್ಯಾವಣ್ಣನಿಗೆ ಐದು ನೂರು ರುಪಾಯಿ ಬಹುಮಾನ ನೀಡಬೇಕೆಂದು ಆದೇಶಿಸಿದರು. ಆಗಿನ ಕಾಲಕ್ಕೆ ಐದುನೂರು ರುಪಾಯಿಗಳಿಗೆ ತುಂಬಾ ಬೆಲೆಯಿತ್ತು. ಮೂರು ರುಪಾಯಿ ಸಂಬಳ ಪಡೆಯುವ ವ್ಯಕ್ತಿಗೆ ಒಮ್ಮೆಲೇ ಅಷ್ಟೊಂದು ಹಣ ಕಂಡು ಅಚ್ಚರಿಯೂ, ಹಿಡಿಸಲಾಗದ ಸಂತೋಷವೂ ಉಂಟಾಯಿತು. ಆದರೆ ಅವನೆಷ್ಟು ಸೌಜನ್ಯಪೂರಿತ ವ್ಯಕ್ತಿಯಾಗಿದ್ದನೆಂದರೆ, ಮಹಾರಾಜರು ನೀಡಿದ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ. ಅಷ್ಟೊಂದು ಹಣವನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲದುದರಿಂದ ಅದನ್ನು ತನ್ನ ಮನೆಗೆ ತೆಗೆದುಕೊಂಡುಹೋಗಲು ಸಾಧ್ಯವಾಗುವುದಿಲ್ಲವೆಂದೂ ಅದನ್ನು ಅರಮನೆಯಲ್ಲಿಯೇ ಇಟ್ಟುಕೊಳ್ಳಬೇಕೆಂದೂ  ಮನವಿ ಮಾಡಿದ. ಆದರೆ ಮಹಾರಾಜರು ಬಿಟ್ಟರೆ ತಾನೆ! ತಾವು ಅವನ ಮನೆಯನ್ನು ದುರಸ್ಥಿಗೊಳಿಸಿಕೊಡುವುದಾಗಿಯೂ, ಆ ಹಣದಿಂದ ಚೆನ್ನಾಗಿ ಸಂಗೀತಾಭ್ಯಾಸ ಮಾಡಬೇಕೆಂದೂ ಆದೇಶಿಸಿದರು. ಅಲ್ಲದೆ ಅವನಿಗೆ ಒಂದು ಬೆಳ್ಳಿಯ ನಾಗಸ್ವರ ಮಾಡಿಸಿಕೊಟ್ಟು ಗೌರವಿಸಿದರು. ಅಂದಿನಿಂದ ಅವನ ವೇತನವನ್ನು ಹತ್ತು ರು.ಗಳಿಗೆ ಏರಿಸಿದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments