ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅವಕಾಶವಾದಿ ರಾಜಕಾರಣ ಸಾಕು

Mainashree
Updated On : 9 Oct 2013, 10:57 am

ಗೃಹ ಸಚಿವ ಶಿಂದೆ ಹಾಗೂ ಎಸ್.ಪಿ. ಮುಖಂಡ ಮುಲಾಯಂಸಿಂಗ್‌ರ ಹೇಳಿಕೆಗಳು ತುಷ್ಟೀಕರಣದ ಪರಾಕಾಷ್ಠೆಗೆ ಒಂದು ಉದಾಹರಣೆ. ಪ್ರತಿ ಠಾಣೆಗೂ ಭಾರತೀಯರನ್ನು ನೇಮಿಸಬೇಕೇ ಹೊರತು ಆತ ಹಿಂದೂ ಅಥವಾ ಮುಸ್ಲಿಂ ಎಂಬುದನ್ನು ನೋಡಿ ಅಲ್ಲ. ತುಷ್ಟೀಕರಣ ಹಾಗೂ ಭ್ರಷ್ಟಾಚಾರ ನಮ್ಮ ದೇಶದ ಅತಿ ಮುಖ್ಯ ಪೀಡೆಗಳು. ಇವರೆಲ್ಲಾ ಬೊಬ್ಬೆ ಹೊಡೆಯುವ ಕೋಮುವಾದ ನಿಜವಾಗಿಯೂ ಇದ್ದದ್ದೇ ಆದರೆ ಅದಕ್ಕೆ ಬಹುಮುಖ್ಯ ಕಾರಣ ಮುಸ್ಲಿಮರನ್ನೂ ಎಲ್ಲಾ ಭಾರತೀಯರಂತೆ ಸಮಾನವಾಗಿ ನೋಡುವುದಕ್ಕೆ ಬದಲಾಗಿ ಕೇವಲ ಮತ ಬ್ಯಾಂಕ್‌ನಂತೆ ನೋಡುವ ಈ ಅವಕಾಶವಾದಿ ರಾಜಕಾರಣಿಗಳೇ ಇಂದಿನ ಕೋಮುವಾದಕ್ಕೆ ನೇರ ಕಾರಣಕರ್ತರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮುಸ್ಲಿಮರನ್ನು ದೇಶದ ಮುಖ್ಯವಾಹಿನಿಗೆ ತರುವಲ್ಲಿ ಸಂಪೂರ್ಣ ವಿಫಲರಾಗಿರುವ ನಮ್ಮ ರಾಜಕಾರಣಿಗಳಿಗೆ ಮುಸ್ಲಿಮರ ಏಳಿಗೆಗಿಂತಲೂ ತಮ್ಮ ಮತ ಬ್ಯಾಂಕ್ ರಾಜಕೀಯವೇ ದೊಡ್ಡದು. ಇದೊಂದು ಸಂವಿಧಾನ ವಿರೋಧಿ ನಡೆ. ಅವರನ್ನು ಇನ್ನೂ ಪ್ರತ್ಯೇಕವಾಗಿಯೇ ಗುರುತಿಸಿ ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳುತ್ತಿರುವ ದೇಶ ದ್ರೋಹಿ ಚಿಂತನೆ. ತಮ್ಮ ರಾಜಕೀಯ ಲಾಲಸೆಯನ್ನು ಬದಿಗೊತ್ತಿ, ಎಲ್ಲರನ್ನೂ ಭಾರತೀಯರೆಂಬ ಒಂದೇ ದೃಷ್ಟಿಯಿಂದ ನೋಡುವವರೆಗೂ ಇಂತಹ ಪ್ರಹಸನಗಳು ನಡೆಯುತ್ತಲೇ ಇರುತ್ತವೆ. ಇಂತಹ ನಾಟಕಗಳಿಗೆ ನಮ್ಮ ಮುಸಲ್ಮಾನರು ಮರುಳಾಗಬಾರದು. ನಮ್ಮ ಜಾತಿ, ಧರ್ಮಗಳು ನಮ್ಮ ಮನೆಯಲ್ಲಿರಲಿ. ದೇಶದ ವಿಷಯ ಬಂದಾಗ ನಾವೆಲ್ಲರೂ ಮೊದಲು ಭಾರತೀಯರು. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವಗಳನ್ನು ಅರ್ಪಿಸಿದ ಚೇತನಗಳ ಆಶಯವೂ ಇದೇ ಆಗಿತ್ತು.
- ಎಸ್.ಎನ್. ವಾಸುದೇವ, ಶ್ರೀರಂಗಪಟ್ಟಣ
ಗೊಂದಲ ಪರಿಹರಿಸಿ
ಕೇಂದ್ರ ಸರ್ಕಾರ ಜಾರಿಗೊಳಿಸಿದ ಆಧಾರ್ ಕಾರ್ಡ್ ಯೋಜನೆ ಜನರಲ್ಲಿ ಗೊಂದಲ ಮೂಡಿಸಿದೆ. ಕಾರ್ಡ್ ಮಾಡಿಸುವ ತವಕ ಹಲವರಲ್ಲಿದೆ. ಹಾಗಾಗಿ ಗ್ರಾಮ ಪಂಚಾಯತ್ ಎದುರು ಸಾಲುಗಟ್ಟಿ ನಿಂತು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದರೆ, ಮತ್ತೆ ಕೆಲವರು ಆಧಾರ್ ಕಾರ್ಡ್ ಕಡ್ಡಾಯವಲ್ಲವೆಂದು ದೂರ ಉಳಿಯುತ್ತಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯ ವಿರುದ್ಧ ಧ್ವನಿ ಎತ್ತಿದೆ. ಅಗತ್ಯಕರ ಕಾರ್ಯಕ್ಕೆ ಈ ಕಾರ್ಡ್ ಉಪಯೋಗವಿಲ್ಲ ಎಂದಿರುವುದು ಜನರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ಮಾಹಿತಿಯನ್ನು ನೀಡದೇ ಹೋದಲ್ಲಿ ಜನರಲ್ಲಿ ಸರ್ಕಾರದ ಯೋಜನೆಯ ಬಗ್ಗೆ ಅಸಮಾಧಾನ ಹೆಚ್ಚುತ್ತದೆ.
- ಲವ್ಯಶ್ರೀ ಕೆ., ವಿವೇಕಾನಂದ ಕಾಲೇಜು, ಪುತ್ತೂರು.
ಮರುನಾಮಕರಣಕ್ಕೆ ಪ್ರತಿಕ್ರಿಯೆ ನೀಡಲಿ
ವಿಜಾಪುರದ ಪ್ರಾಚೀನ ಹೆಸರು ವಿಜಯಪುರವೆಂಬುದು 11ನೇ ಶತಮಾನದ 14 ಶಾಸನಗಳು ಮತ್ತು ಸಮಕಾಲೀನ ಸಾಹಿತಿ ನಾಗಚಂದ್ರನ ಮಲ್ಲಿನಾಥ ಪುರಾಣದಿಂದ ಸಾಬೀತಾಗಿದೆ. ಅದಲ್ಲದೇ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ. ಅನೇಕರು ಇಂದು 'ವಿಜಯಪುರ' ಹೆಸರು ಬಳಸುತ್ತಿದ್ದಾರೆ. ಇದರ ಮಧ್ಯೆ ಕೆಲ ಪ್ರಗತಿಪರ ಸಂಘಟನೆ ಮಿತ್ರರು ವಿಜಯಪುರ ಮರುನಾಮಕರಣವನ್ನು ವಿರೋಧಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ನೀಡಬೇಕಾದ ಜಿಲ್ಲೆಯ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ಬರಹಗಾರರು ತಮ್ಮ ಪ್ರತಿಕ್ರಿಯೆ ನೀಡಬೇಕು.
- ಡಾ. ಆನಂದ ಕುಲಕರ್ಣಿ, ವಿಜಯಪುರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement