ತಪ್ಪಾಯ್ತು ತಿದ್ಕೋತೀವಿ
ಪಾಂಡೇಶ್ವರದಿಂದ ಪಿ. ರಾಮಕೃಷ್ಣ ಚಡಗ ಅವರು ಬರೆಯುತ್ತಾರೆ- 'ದಿ. 24.9.2013 ಪುಟ 10ರ 'ಖರೆಮಾತು'ನಲ್ಲಿ ಮರಕುಟಿಕ ಹಕ್ಕಿಯು ಸೆಕೆಂಡಿಗೆ ...
ಪಾಂಡೇಶ್ವರದಿಂದ ಪಿ. ರಾಮಕೃಷ್ಣ ಚಡಗ ಅವರು ಬರೆಯುತ್ತಾರೆ- 'ದಿ. 24.9.2013 ಪುಟ 10ರ 'ಖರೆಮಾತು'ನಲ್ಲಿ ಮರಕುಟಿಕ ಹಕ್ಕಿಯು ಸೆಕೆಂಡಿಗೆ 20 ಬಾರಿ ಕುಟುಕಬಲ್ಲದು ಎಂಬುದಾಗಿ ದಪ್ಪ ಅಕ್ಷರಗಳಲ್ಲಿ ಮುದ್ರಿಸಿದ್ದೀರಿ. ಟಿಕ್, ಟಿಕ್- ಎಂದಾಗ 1 ಸೆಕೆಂಡ್ ಜಾರಿ ಹೋಗುತ್ತೆ. ಇಂತಹ 1 ಸೆಕೆಂಡ್ನಲ್ಲಿ 20 ಸರ್ತಿ ಕುಟುಕಲು ಮರಕುಟಿಕ ಪಕ್ಷಿಗೆ ಅಸಾಧ್ಯ. ಅದೇನು ಮಿಷನ್ ಅಲ್ಲವಲ್ಲ. 1 ಸೆಕೆಂಡ್ ಬದಲು 1 ನಿಮಿಷದಲ್ಲಿ 20 ಸಲ ಕುಟುಕಬಹುದು. ಹಾಗಾಗಿ ಸೆಕೆಂಡ್ ಬದಲು ನಿಮಿಷ ಆಗಬೇಕಿತ್ತು.'
ಹೆಸರುಗಳನ್ನು ಬರೆಯುವಾಗ ಆಗುವ ತಪ್ಪನ್ನು ಓದುಗರು ಆಗಾಗ ಗಮನಕ್ಕೆ ತರುತ್ತಾರೆ. ಬೇರೆ ದೇಶಗಳ, ಬೇರೆ ರಾಜ್ಯಗಳ ಪ್ರದೇಶಗಳಲ್ಲಿನ ಹೆಸರು ತಪ್ಪಾಗಿ ಬರೆದಾಗ ಅವಸರದಲ್ಲಿ ಅದರ ಸರಿಯಾದ ಉಚ್ಚಾರಣೆ ಬಗ್ಗೆ ಗಮನಹರಿಸದೆ ಎಡವಿದೆವು ಎಂದು ಸಮಾಧಾನಿಸಿಕೊಳ್ಳಬಹುದು. ಆದರೆ ನಮ್ಮದೇ ರಾಜ್ಯದ ಇಲ್ಲವೇ ಗಡಿನಾಡಿನ ಪ್ರದೇಶಗಳ ಹೆಸರುಗಳನ್ನು ತಪ್ಪಾಗಿ ಬರೆಯುವುದು ಮುಜುಗರ ತರಿಸುತ್ತದೆ.
ಅಕ್ಟೋಬರ್ 3ರ ಸಂಚಿಕೆಯ ಮುಖಪುಟ ವರದಿಯಲ್ಲೇ ಆಗಿರುವ ಇಂಥ ತಪ್ಪಿನ ಬಗ್ಗೆ ಕೆಲಪತ್ರಗಳು ಬಂದಿದ್ದು, ಪತ್ರಗಳ ವ್ಯಂಗ್ಯದ ಚಾಟಿ ಚುರುಗುಟ್ಟಿಸುವಂತೆಯೇ ಇದೆ.
ಮೈಸೂರಿನಿಂದ ಎನ್.ಡಿ. ಕಾರಂತ ಬರೆಯುತ್ತಾರೆ- 'ಕೇರಳದ ಕಿರಿಕ್ ಬಗ್ಗೆ ಬರೆಯುತ್ತಾ ಊರಿನ ಹೆಸರುಗಳಲ್ಲೂ ಕಿರಿಕ್ ಮಾಡಿದ್ದೀರಿ! ಗುಂಡಾಲಪೆಟ್ಟು (ಗುಂಡ್ಲುಪೇಟೆ), ನಂಚನ್ ಕೊಡೆ (ನಂಜನಗೂಡು) ಎಂಬೆಲ್ಲಾ ಹೊಸ ಊರುಗಳನ್ನು ಕರ್ನಾಟಕದಲ್ಲಿ ಸೃಷ್ಟಿ ಮಾಡಿದ್ದೀರಿ. ಕನ್ನಡಪ್ರಭವೂ ಕೇರಳದಲ್ಲೇ ಪ್ರಿಂಟ್ ಆಗಿಲ್ಲ ತಾನೆ?'
ಮೈಸೂರಿನವರೇ ಆದ ಕೊ. ಸು. ನರಸಿಂಹಮೂರ್ತಿ ಅವರೂ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ- 'ಬಂಡೀಪುರ ಸಂಚಾರ-ಕೇರಳ ಕಿರಿಕ್ ಸುದ್ದಿಯಲ್ಲಿ ಮೂರನೇ ಖಂಡಿಕೆಯ ರಾಷ್ಟ್ರೀಯ ಹೆದ್ದಾರಿಯ 212ರಲ್ಲಿ ಸುಲ್ತಾನ್ ಬತೇರಿ -ಗುಂಡಾಲಪೆಟ್ಟು ಮಧ್ಯೆ -ರಾತ್ರಿ ಸಂಚಾರ...' ಹೀಗೆ ಸಾಗುತ್ತದೆ. ಇದ್ಯಾವ ಹೊಸ ಊರು?
ಗುಂಡಾಲಪೆಟ್ಟು? ಇದ್ಯಾವ ಹೊಸ ಪಟ್ಟೂ ಅಲ್ಲ! ಇದು ಗುಂಡ್ಲುಪೇಟೆ! ಬಂದ ಸುದ್ದಿಯನ್ನು ಪರಿಷ್ಕರಿಸುವವರಿಗೆ ಇದು ತಿಳಿಯಲೇ ಇಲ್ಲವೇ? ಓದುಗರು ಏನೆಂದು ತಿಳಿದುಕೊಳ್ಳಬೇಕು.' ಎಂದು ಪ್ರಶ್ನಿಸಿದ್ದಾರೆ. ಅಕ್ಟೋಬರ್ 2ರ ಸಂಚಿಕೆಯ ಬಗ್ಗೆ ಬರೆಯುತ್ತ, 'ನಾವು ಈ ಅಂಕಣಕ್ಕೆ ಕಾಗದ ಬರೀಲಿ ಅಂತಾನೇ ನೀವು ತಪ್ಪು ಮಾಡ್ತೀರಿ ಅಂತ ಅನ್ಸುತ್ತೆ. 2.10.2013ರ ಪುಟ 03ರ ಉಮೇಶ್ ಕತ್ತಿ ಒಡೆತನದ ಕಾರ್ಖಾನೆ ಗೋದಾಮಿಗೆ ಬೀಗ ಶೀರ್ಷಿಕೆಯಲ್ಲೇ ಲೆವಿ ಎಂದು ಬರೆಯುವ ಬದಲು ಲೇವಿ ಎಂದು ಬರೆದಿರೋದನ್ನು ಓದಿ ನನ್ನ ಗೆಳೆಯರೊಬ್ಬರು ಲೇವಡಿ ಮಾಡಿದ್ರು. ಯಾಕೆ ಸ್ವಾಮಿ ಹಿಂಗಾಯ್ತು?' ಎಂದೂ ಕೇಳಿದ್ದಾರೆ.
ಚಾಮರಾಜನಗರದಿಂದ ಎಂ. ಬಿ. ಕೃಷ್ಣಮೂರ್ತಿ ಬರೆಯುತ್ತಾರೆ- ದಿನಾಂಕ 29.09.2013ರ ಭಾನುವಾರದ ಕನ್ನಡಪ್ರಭ ದಿನಪತ್ರಿಕೆಯ ಪುಟ 10ರಲ್ಲಿ ವಾಕ್ಢಿಛ್ಠ ನಲ್ಲಿ ಯು.ಆರ್. ಅನಂತಮೂರ್ತಿಯವರ ವಿವಾದಾತ್ಮಕ ಹೇಳಿಕೆಯೊಂದಕ್ಕೆ ವಿಶ್ವೇಶತೀರ್ಥ ಸ್ವಾಮೀಜಿಯವರು ತಿರುಗೇಟು ನೀಡಿರುವುದರಲ್ಲಿ ಹೀಗಿದೆ: ಅನಂತಮೂರ್ತಿಯವರ ಹೇಳಿಕೆ ನೋಡಿ ಅಚ್ಚರಿಯಾಗುತ್ತಿದೆ. ನಾನು ಮಹಾಭಾರತವನ್ನು ಅನೇಕ 'ಭಾಗಿ' ಅಮೂಲಾಗ್ರವಾಗಿ ಓದಿದ್ದೇನೆ ಎಂದಿದೆ. ಅದು ಅನೇಕ ಬಾರಿ ಆಗ ಬೇಕಿತ್ತಲ್ಲವೇ?'
- ವಿಶ್ವೇಶ್ವರ ಭಟ್