ವಿಕಾರ್ ಉಲ್ ಉಮ್ರಾನ ಪರೋಪಕಾರ
ವಿಕಾರ್ ಉಲ್ ಉಮ್ರಾ 1893 ರಿಂದ 1901 ರವರೆಗೆ ಹೈದರಾಬಾದಿನ ದಿವಾನ್ ಆಗಿ (ಪ್ರಧಾನಮಂತ್ರಿಯಾಗಿ) ಸೇವೆ ಸಲ್ಲಿಸಿದ ನಿಜಾಮನ ವಂಶಸ್ಥ. ಅವನು ನಿರ್ಮಿಸಿದ ಪೈಘಾ ಅರಮನೆ ಮತ್ತು ವಿಕಾರ್ ಮಂಜಿಲ್ ಅದ್ಭುತವಾದ ಕಟ್ಟಡಗಳು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದ ವಿಕಾರ್, ಪೋಲೋ ಆಟಕ್ಕೂ ಹೆಚ್ಚಿನ ಮಹತ್ವ ನೀಡಿದ್ದ. ಉದಾರಿಯೂ, ಪರೋಪಕಾರಿಯೂ ಆದ ಆತ ತನ್ನ ಅಪಾರ ಆಸ್ತಿಯನ್ನು ದಾನಧರ್ಮದಲ್ಲಿ ವಿನಿಯೋಗಿಸಿ ಜೀವನದ ಕೊನೆಯಲ್ಲಿ ಸಾಲದಲ್ಲಿ ಮುಳುಗಿದ. ಒಂದು ದಿನ ಮುನೀರ್ ಖಾನ್ ಎಂಬ ವಿಕಾರ್‌ನ ಹಳೆಯ ಸೇವಕನೊಬ್ಬ ತನ್ನ ಮಗಳ ವಿವಾಹಕ್ಕಾಗಿ ತನ್ನ ನಿವೃತ್ತಿವೇತನವನ್ನು ಒಂದು ತಿಂಗಳ ಮುಂಗಡ ನೀಡಲು ವಿನಂತಿಸಿದ. ಆಗ ವಿಕಾರ್ ತನ್ನ ಒಂದು ತಿಂಗಳ ವೇತನವಾದ ಒಂದು ಸಾವಿರ ಚಿನ್ನದ ನಾಣ್ಯಗಳನ್ನು ನೀಡಿದ! ತನ್ನ ಬೆಲೆಬಾಳುವ ಜಪಮಾಲೆಯನ್ನು ಸೇವಕನೊಬ್ಬ ಕದ್ದು ಸಿಕ್ಕಿಬಿದ್ದಾಗ ಆ ಜಪಮಣಿ ಸರವನ್ನು ತಾನೇ ಅವನಿಗೆ ನೀಡಿದ್ದಾಗಿ ತಿಳಿಸಿ ಸೇವಕನನ್ನು ಶಿಕ್ಷೆಯಿಂದ ಪಾರು ಮಾಡಿ, ಅವನನ್ನು ಕೂಡಲೇ ಕೆಲಸದಿಂದ ವಜಾಮಾಡಿದರೂ ಅವನ ಸಂಬಳದಷ್ಟೇ ನಿವೃತ್ತಿವೇತನವನ್ನು ಮಂಜೂರು ಮಾಡಿದ ಉದಾರಿ. ಇಂತಹ ಹಲವಾರು ಘಟನೆಗಳು ವಿಕಾರ್ ಉಲ್ ಉಮ್ರಾನ ಜೀವನ ಪುಟಗಳಲ್ಲಿ ಕಾಣಿಸುತ್ತವೆ. ಇಂತಹ ದಾನಗುಣಗಳಿಂದ, ಔದಾರ್ಯ ಬುದ್ಧಿಯಿಂದ ತನ್ನೆಲ್ಲ ಸಂಪತ್ತನ್ನೂ ಸಮಾಜಕ್ಕೆ ವಿನಿಯೋಗಿಸಿ ಕೊನೆಗಾಲದಲ್ಲಿ ಅಕ್ಷರಶಃ ನಿರ್ಗತಿಕನೇ ಆದನು. ದಿವಾನಗಿರಿ ಕಳೆದುಕೊಂಡ ಮೇಲೆಯೂ ಈತನ ಔದಾರ್ಯಗುಣ ಮಾತ್ರ ಕಡಿಮೆಯಾಗಲಿಲ್ಲ. ಒಮ್ಮೆ ಒಬ್ಬ ಮುದುಕಿ ವಿಕಾರ್ ಬಳಿ ಬಂದು ತಾನು ಮೆಕ್ಕಾ ಯಾತ್ರೆಗೆ ತೆರಳುತ್ತಿರುವುದಾಗಿಯೂ, ತಾನು ನಿರ್ಗತಿಕಳಾಗಿರುವುದರಿಂದ ತನಗೆ ಹೋಗಿಬರಲು ಅಗತ್ಯ ಹಣಕಾಸಿನ ನೆರವು ನೀಡಬೇಕೆಂದು ಪರಿಪರಿಯಾಗಿ ಬೇಡಿಕೊಂಡಳು. ಆಗ ವಿಕಾರ್ ತನ್ನ ಕಾರ್ಯದರ್ಶಿಯನ್ನು ಕರೆದು ಆಕೆಗೆ ಅಗತ್ಯ ನೆರವು ನೀಡಲು ಆದೇಶಿಸಿದ.
ಅದಕ್ಕೆ ಕಾರ್ಯದರ್ಶಿಯು, ಆಗಲೇ ವಿಪರೀತ ಸಾಲದಿಂದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದಾಗಿಯೂ, ಖಜಾನೆಯಲ್ಲಿ ಹಣ ಇಲ್ಲದೇ ಇರುವುದನ್ನು ಗಮನಕ್ಕೆ ತಂದ. ಆಗ ವಿಕಾರ್ ಮರುಮಾತನಾಡದೆ ಒಳಗೆ ಹೋಗಿ ತನ್ನ ವಜ್ರದ ಆಭರಣವನ್ನು ತಂದು ಕಾರ್ಯದರ್ಶಿಯ ಕೈಗಿಟ್ಟು, ಅದನ್ನು ಮಾರಿ ಬಂದ ಹಣದಲ್ಲಿ ಆ ಮುದುಕಿಗೆ ಮೆಕ್ಕಾ ಯಾತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಆದೇಶಿಸಿದ. ಅಲ್ಲದೆ ಆಳೊಬ್ಬನನ್ನು ಆ ಮುದುಕಿಯ ಜೊತೆಗೆ ಬೊಂಬಾಯಿಯವರೆಗೂ ಕರೆದೊಯ್ದು ಸೌದಿ ಅರೇಬಿಯಾದ ಹಡಗು ಹತ್ತಿಸಿಬರಲು ಕಳುಹಿಸಿಕೊಟ್ಟ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.