ಹೈದರಾಬಾದ್ ಕರ್ನಾಟಕ ಮಂಡಳಿ
ಸಂವಿಧಾನದ 371-ಜೆ ವಿಧಿಯಂತೆ, ರಾಜ್ಯದ ಹೈದರಾಬಾದ್ ಕರ್ನಾಟಕದ ಪ್ರದೇಶದ ಅಭಿವೃದ್ಧಿಗೆ ಹಾಗೂ ಅಲ್ಲಿನ ಜನರ ಪ್ರಗತಿಗೆ ನೆರವಾಗುವಂತೆ ಕೆಲವು ವಿಶೇಷ ಮೀಸಲು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿದ ಅನಂತರದ ಪ್ರಕ್ರಿಯೆ ಈಗ ಪೂರ್ತಿಯಾಗಿದೆ.
ಹಿಂದಿನ ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಈ ಪ್ರದೇಶ ಅಭಿವೃದ್ಧಿಯ ದೃಷ್ಟಿಯಿಂದ ತೀರ ಹಿಂದುಳಿದಿದ್ದು ನಿಜ. ಹಿಂದುಳಿದ ಪ್ರದೇಶಗಳಿಗೆ ವಿಶೇಷ ನೆರವು ನೀಡುವ ಕಾರ್ಯಕ್ರಮ ಯೋಜನಾ ಆಯೋಗ ರೂಪಿಸಿದ್ದ ಯೋಜನೆಗಳಲ್ಲಿ ಇದ್ದರೂ ಅದನ್ನು ಜಾರಿಗೆ ತರುವುದರಲ್ಲಿ ಆಡಳಿತಗಾರರು ಹೆಚ್ಚು ಆಸಕ್ತಿಯನ್ನು ವಹಿಸಲಿಲ್ಲ.
ಇದೇನೂ ಹೈದರಾಬಾದ್ ಕರ್ನಾಟಕದ ವಿಶೇಷ ಸಮಸ್ಯೆಯಲ್ಲ. 1956ರ ರಾಜ್ಯಗಳ ಪುನಾರಚನೆ ಆಯೋಗದ ಶಿಫಾರ್ಸಿನಂತೆ, ನಿಜಾಂ ಸಂಸ್ಥಾನವನ್ನು ಹೋಳು ಮಾಡಿ, ಒಂದು ದೊಡ್ಡ ಭಾಗವನ್ನು ತೆಲಂಗಾಣದ ಹೆಸರಿನಲ್ಲಿ ಆಂಧ್ರ ಪ್ರದೇಶಕ್ಕೂ, ಮರಾಠಾವಾಡದ ಹೆಸರಿನಲ್ಲಿ ಮಹಾರಾಷ್ಟ್ರಕ್ಕೂ ಕೊಡಲಾಯಿತು. ಕರ್ನಾಟಕಕ್ಕೆ ಉಳಿದ ಭಾಗವಾದ ಬೀದರ್, ಗುಲ್ಬರ್ಗಾ, ರಾಯಚೂರು, ಜಿಲ್ಲೆಗಳು ಬಂದವು.
ಆ ಕಾಲದಲ್ಲೇ ಕೇಂದ್ರ ಸರ್ಕಾರ ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಿಗೆ ಸೇರಿದ ಹೊಸ ಪ್ರದೇಶಗಳಿಗೆ ವಿಶೇಷ ನೆರವನ್ನು ಒದಗಿಸುವ ಭರವಸೆ ನೀಡಿದರೂ, ವಾಸ್ತವದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಗಮನ ಹರಿಸಲಿಲ್ಲ. ಯೋಜನೆಗಳೇ ಸಿದ್ಧವಾಗದೇ ಇದ್ದಿದ್ದರಿಂದ ನಿರ್ದಿಷ್ಟ ಯೋಜನೆಗಳಿಗೆ ನೇರ ನೆರವು ನೀಡುವುದೂ ಕಷ್ಟವಾಗಿತ್ತು. ರಾಜ್ಯಗಳ ಪುನಾರಚನೆಗೂ ಮುನ್ನ ತೆಲಂಗಾಣದಲ್ಲಿ ಕೃಷ್ಣಾ ನದಿಗೆ ನಂದಿಕೊಂಡ ಯೋಜನೆ ಮಂಜೂರಾಗಿತ್ತು. ಅದೇ ಈಗಿನ ನಾಗಾರ್ಜುನ ಸಾಗರ. ಹಿಂದಿನ ಹೈದರಾಬಾದ್ ಸಂಸ್ಥಾನದ ಮುನೀರಾಬಾದ್ ಮತ್ತು ಕರ್ನಾಟಕದ ಹೊಸಪೇಟೆ ನಡುವೆ ನಿರ್ಮಾಣವಾದ ತುಂಗಭದ್ರಾ ಜಲಾಶಯದ ನೀರು ಆಂಧ್ರಕ್ಕೂ ಲಭ್ಯವಾಯಿತು. ಆದರೆ ಅಭಿವೃದ್ಧಿ ಅದರ ಸಮಗ್ರ ಸ್ವರೂಪದಲ್ಲಿ ಈ ಭಾಗದ ಜನರನ್ನು ತಲುಪಲಿಲ್ಲ. ಶಿಕ್ಷಣ ವಲಯದಲ್ಲಂತೂ ಉರ್ದು ಭಾಷೆಗೇ ಪ್ರಾಮುಖ್ಯ ಇದ್ದಿದ್ದರಿಂದ ಮೆಡಿಕಲ್- ಎಂಜಿನಿಯರಿಂಗ್ ಶಿಕ್ಷಣದ ಸೌಲಭ್ಯ ಇರಲಿಲ್ಲ. ಅನೇಕ ಕಡೆಗಳಲ್ಲಿ ರಸ್ತೆಗಳನ್ನು ಹುಡುಕಬೇಕಾಗಿತ್ತು. ಕರ್ನಾಟಕದಲ್ಲಿ ಈ ಪ್ರದೇಶದ ಜತೆಯಲ್ಲೇ ಬಳ್ಳಾರಿ ಜಿಲ್ಲೆಯನ್ನೂ ಜೋಡಿಸಿದ್ದರಿಂದ ಆ ಭಾಗಕ್ಕೂ ಈಗಿನ ನೂತನ ಹಿಂದುಳಿದ ಪ್ರದೇಶದ ಜನರಿಗೆ ಲಭ್ಯವಾಗುವ ಸವಲತ್ತುಗಳು ಲಭ್ಯವಾಗಲಿವೆ. ಇದಕ್ಕೆ ಬಳ್ಳಾರಿಯಿಂದ ದಾವಣಗೆರೆ ಜಿಲ್ಲೆಗೆ ಬಂದ ಹರಪನಹಳ್ಳಿ ತಾಲ್ಲೂಕು ಅಪವಾದ. ನಿಜ. 1956ರಿಂದಲೂ ಈ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಗಮನ ಸಾಲದೆನ್ನುವ ದೂರು ಎಲ್ಲ ಕಡೆ ಇದ್ದರೂ ಕರ್ನಾಟಕದಲ್ಲೇ ಅದು ಗಟ್ಟಿಯಾಗಿ ಕೇಳಿ ಬಂದಿದ್ದು. ಈಗಲೂ ಗುಲ್ಬರ್ಗ, ಸಿಂಧನೂರು, ರಾಯಚೂರು ಸೀಮೆಯಲ್ಲಿ ಕಂಡು ಬಂದಿರುವ ಪ್ರಗತಿ, ನೀರಾವರಿ ಯೋಜನೆಗಳ ಪರಿಣಾಮ ವಿಶೇಷ ನೆರವಿನ ಪರಿಣಾಮವಲ್ಲ.
ಈಗ ಬದಲಾದ ಸಂವಿಧಾನದ ವಿಧಿ-ನಿಯಮಗಳಂತೆ, ಆ ಭಾಗಕ್ಕೆ ರಾಜ್ಯ ಸರ್ಕಾರ ನಿರ್ದಿಷ್ಟವಾದ ಯೋಜನೆಗಳನ್ನು ರೂಪಿಸಬೇಕು. ಅಷ್ಟೇ ಅಲ್ಲ ಅಲ್ಲಿನ ಜನರಿಗೆ ವೃತ್ತಿ ಶಿಕ್ಷಣ ಸಂಸ್ಥೆಗಳು ಹಾಗೂ ನೌಕರಿಯಲ್ಲಿ ಇತರ ನಿಯಮಗಳ ಚೌಕಟ್ಟಿನಲ್ಲೇ ವಿಶೇಷ ಮೀಸಲು ಸೌಲಭ್ಯವನ್ನು ಒದಗಿಸಬೇಕು. ಇನ್ನು ಮುಂದೆ ಈ ಭಾಗದ ಪ್ರಗತಿಯ ಉಸ್ತುವಾರಿಯ ಹೊಣೆಗಾರಿಕೆ, ರಾಜ್ಯಪಾಲರು ಅಧ್ಯಕ್ಷರಾಗಿರುವ ಒಂದು ವಿಶೇಷ ಮಂಡಳಿಯದ್ದು. ಆ ನಿಯಮಾವಳಿಯನ್ನು ರೂಪಿಸಿದ್ದು ರಾಜ್ಯ ಸರ್ಕಾರ. ಅದನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ. ರಾಷ್ಟ್ರಪತಿಯ ಅಂಗೀಕಾರ ಮುಂದ್ರೆ ಬಿದ್ದ ಕೂಡಲೇ ನಿಯಮಾವಳಿಯೂ ಸಂವಿಧಾನದ ಒಂದು ಭಾಗವೇ ಆಗಿ ಬಿಡುತ್ತದೆ. ಈ ವಿಚಾರದಲ್ಲಿ ವಿಳಂಬವಾದರೂ, ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದ್ದಾಗಿದೆ. ಇನ್ನು ಉಳಿದಿರುವುದು ರಾಜ್ಯದ ಕೆಲಸ. ಅದರಲ್ಲಿ ರಾಜ್ಯ ಸರ್ಕಾರ ಹಿಂದೆ ಬೀಳಬಾರದು.