ರಾಣಿವಾಸದಲ್ಲಿ ಕತ್ತೆಗೂ ಸ್ಥಾನವಿದೆಯೆಂದು ತಿಳಿದಿರಲಿಲ್ಲ
ನಮ್ಮ ನಾಡಿನಲ್ಲಿ ಎಂತೆಂಥ ಮಹಾಪುರುಷರಿದ್ದರು ಎಂಬುದಕ್ಕೆ ಒಂದು ನಿದರ್ಶನ ಇಲ್ಲಿದೆ. ಮೈಸೂರಿನಲ್ಲಿ ಹಿಂದೆ ಭೀಮರಾಯರೆಂಬ ಪ್ರಸಿದ್ಧ ಆಯುರ್ವೇದ ಪಂಡಿತರಿದ್ದರು. ಅವರ ಖ್ಯಾತಿ ಎಲ್ಲಡೆ ಹರಡಿತ್ತು. ರೋಗಿಯ ನಾಡಿಯನ್ನು ನೇರವಾಗಿ ಹಿಡಿಯದೆಯೆ ನಾಡಿಗೆ ಕಟ್ಟಿದ್ದ ದಾರದ ಮೂಲಕವೇ ರೋಗಿಯನ್ನು ಪರೀಕ್ಷಿಸಿ ರೋಗ ಲಕ್ಷಣ ಕಂಡುಹಿಡಿಯುವ ಚಾಣಾಕ್ಷತೆ ಅವರಿಗೆ ಸಿದ್ಧಿಸಿತ್ತು. ಒಂದು ಸಾರಿ ಮುಮ್ಮಡಿ ಕೃಷ್ಣರಾಜ ಒಡೆಯರ ರಾಣಿವಾಸದ ಒಬ್ಬಾಕೆ ತುಂಬಾ ಖಾಯಿಲೆಯಿಂದಾಗಿ ಹಾಸಿಗೆ ಹಿಡಿದಿದ್ದಳು. ರಾಜವೈದ್ಯರು ಮತ್ತು ಇತರ ವೈದ್ಯರು ನೀಡಿದ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ದೊರೆಗಳು ಈ ಬಗ್ಗೆ ಚಿಂತಾಕ್ರಾಂತರಾಗಿದ್ದನ್ನು ನೋಡಿ, ಪಂಡಿತ ಭೀಮರಾಯರನ್ನು ಕರೆಸಿ ಚಿಕಿತ್ಸೆ ಕೊಡಿಸಲು ಸಲಹೆ ನೀಡಲಾಯಿತು. ಅದರಂತೆ ಭೀಮರಾಯರಿಗೆ ಕರೆಹೋಯಿತು. ಅರಮನೆಗೆ ಬರಲು ತಮಗೆ ಅಭ್ಯಂತರವೇನೂ ಇಲ್ಲವೆಂದೂ, ಆದರೆ ತಮ್ಮ ನಮಸ್ಕಾರ ಶ್ರೀಹರಿಗೆ ಮಾತ್ರ ಮೀಸಲಾಗಿರುವುದರಿಂದ ಸೊಂಟ ಬಗ್ಗಿಸಿ ರಾಜರಿಗೆ ನಮಸ್ಕರಿಸುವುದನ್ನು ತಾವು ಇಷ್ಟಪಡುವುದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದರು. ಇದರಿಂದ ದೊರೆಗಳಿಗೆ ಅಸಮಾಧಾನವೇನೂ ಆಗಲಿಲ್ಲ. ಅವರಿಷ್ಟ ಬಂದಂತೆ ಮಾಡಬಹುದೆಂದು ತಿಳಿಸಿ, ರಾಜನ ಆಸನದ ಪಕ್ಕದಲ್ಲಿ ದೇವರ ಪಟವನ್ನಿಡಿಸಿ ಅದಕ್ಕೆ ನಮಸ್ಕರಿಸುವಂತೆ ಮಾಡಲಾಯಿತು. ಭೀಮರಾಯರ ಪಾಂಡಿತ್ಯ ಪ್ರತಿಭೆಯನ್ನು ಒರೆಹಚ್ಚಿನೋಡುವ ಸದಾವಕಾಶ ದೊರೆಯಿತೆಂದು ಕೆಲವರು ಯೋಚಿಸಿದರು. ರಾಣಿವಾಸದವರನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಲು ಅನುಮತಿಯಿಲ್ಲದುದರಿಂದ ರೋಗಿಯ ನಾಡಿಗೆ ದಾರಕಟ್ಟಿ ಪರೀಕ್ಷಿಸಲು ವಿನಂತಿಸಲಾಯಿತು. ಅದರಂತೆ ದಾರವನ್ನು ಹಿಡಿದು ಪರೀಕ್ಷಿಸಿದ ಪಂಡಿತರು, "ರಾಣಿವಾಸದಲ್ಲಿ ಕತ್ತೆಗೂ ಸ್ಥಾನವಿದೆಯೆಂದು ನಾವು ಭಾವಿಸಿರಲಿಲ್ಲ" ಎಂದರು! ಏಕೆಂದರೆ ಅವರನ್ನು ಪರೀಕ್ಷಿಸಲು ಕತ್ತೆಯ ಕಾಲಿಗೆ ದಾರಕಟ್ಟಿ ಇನ್ನೊಂದು ತುದಿಯನ್ನು ಅವರ ಕೈಗೆ ಕೊಡಲಾಗಿತ್ತು! ನಂತರ ಮಹಾರಾಜರು ಪಂಡಿತರಿಗೆ ಘೋಷಾ ನಿಯಮಪಾಲನೆಯಿಲ್ಲವೆಂದೂ ನೇರವಾಗಿ ಪರೀಕ್ಷಿಸಿ ಔಷಧಿ ನೀಡಬೇಕೆಂದೂ ಕೇಳಿಕೊಂಡರು. ಔಷಧಿ ಸೇವನೆಯಿಂದ ಖಾಯಿಲೆಗುಣಪಡಿಸಬೇಕೋ ಅಥವಾ ಊಟೋಪಚಾರಗಳಿಂದ ಗುಣಪಡಿಸಬೇಕೋ ಎಂಬ ಮಾತಿಗೆ ಊಟೋಪಚಾರಗಳಿಂದಲೇ ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದರು. ಅದರಂತೆ ಪ್ರತಿದಿನ ರುಚಿರುಚಿಯಾದ ಅಡಿಗೆ ಮಾಡಿಸಿ ಅದಕ್ಕೆ ತಾವೇ ಖುದ್ದಾಗಿ ಒಂದು ಚಿಟಿಕೆ ಭಸ್ಮವನ್ನು ಹಾಕಿ ರೋಗಿಗೆ ನೀಡಿದರು. ತಿಂಗಳೊಳಗಾಗಿ ರೋಗಿ ಸಂಪೂರ್ಣ ಗುಣಮುಖಳಾದ್ದರಿಂದ ಮಹಾರಾಜರಿಗೆ ತುಂಬಾ ಸಂತೋಷವಾಯಿತು. ಪಂಡಿತ ಭೀಮರಾಯರಿಗೆ ಮಹಾರಾಜರು ಯೋಗ್ಯ ಸನ್ಮಾನ ಮಾಡಿ ಅವರ ಚಿಕಿತ್ಸಾ ಕ್ರಮವನ್ನು ಬಾಯಿತುಂಬಾ ಹೊಗಳಿದರು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲೇನಿದೆ ಎಂದು ಮೂಗುಮುರಿಯುವ ಜನಕ್ಕೆ ಭೀಮರಾಯರು ತಕ್ಕ ಉತ್ತರ ನೀಡಿದ್ದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.