ಭಾಯಿ ಪರಮಾನಂದರ ಮಾನವೀಯತೆ
ಭಾಯಿ ಪರಮಾನಂದರು ಪಂಜಾಬ್ನಲ್ಲಿ ಜನಿಸಿದ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರರು. ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದಾಗ ಕೆಲ ಸಮಯ ಗಾಂಧೀಜಿಯವರ ಅತಿಥಿಯಾಗಿ ಅವರಲ್ಲಿ ಉಳಿದಿದ್ದರು. ಗಯಾನಾದಲ್ಲಿ ಆರ್ಯಸಮಾಜದ ಚಟುವಟಿಕೆಗಳನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾದರು. ಗದ್ದರ್ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿದ್ದ ಪರಮಾನಂದ್ ಭಾರತದ ಸ್ವಾತಂತ್ರ್ಯ ಚಳವಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಪೇಶಾವರದಲ್ಲಿ ದಂಗೆ ಎಬ್ಬಿಸಿದ ಅಪಾದನೆಯ ಮೇಲೆ ಪರಮಾನಂದ್ ಅವರನ್ನು ಬಂಧಿಸಿ ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕಳುಹಿಸಲಾಯಿತು. ಅಲ್ಲಿ ರಾಜಕೀಯ ಖೈದಿಗಳಿಗೆ ನೀಡುತ್ತಿದ್ದ ಹಿಂಸೆಯನ್ನು ಪ್ರತಿಭಟಿಸಿ ಎರಡು ತಿಂಗಳ ಕಾಲ ಉಪವಾಸ ಮಾಡಿದರು. ಅಲ್ಲಿಂದ ಬಿಡುಗಡೆಯಾದ ಮೇಲೆ ಪುನಃ ಚಳವಳಿಯಲ್ಲಿ ಪಾಲ್ಗೊಂಡು ಭಾರತ ವಿಭಜನೆಯನ್ನು ವಿರೋಧಿಸಿದರು. ಗಾಂಧೀಜಿಯವರನ್ನು ಭೇಟಿಯಾಗಿ ಹಿಂದುಗಳು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಹೋರಾಡಿದರೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು. ಒಮ್ಮೆ ಭಾಯಿ ಪರಮಾನಂದರು ಅನಾರೋಗ್ಯ ಪೀಡಿತರಾಗಿ, ಜೀವನ್ಮರಣ ಪರಿಸ್ಥಿತಿಯಲ್ಲಿದ್ದಾಗ ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.
ಇದನ್ನು ತಿಳಿದ ಬರೋಡಾದ ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್ ಒಂದು ವರ್ಷದ ಮಟ್ಟಿಗೆ ಒಬ್ಬ ಸೇವಕನನ್ನು ಗೊತ್ತು ಮಾಡಿ ಅವರ ಚಿಕಿತ್ಸೆಗೆ ತಗಲುವ ವೆಚ್ಚವನ್ನೂ ಕಳುಹಿಸಿಕೊಟ್ಟರು. ಖಾಯಿಲೆಯಿಂದ ನರಳುತ್ತಿದ್ದರೂ ಮಹಾರಾಜರ ಕೊಡುಗೆಯನ್ನು ಹಿಂದಿರುಗಿಸುತ್ತಾ, "ಜ್ಯೋತಿಬಾ ಫುಲೆಯವರು ಪಾರ್ಶ್ವವಾಯು ಪೀಡಿತರಾಗಿ ಮಲಗಿರುವುದರಿಂದ ಆ ಸವಲತ್ತಿನ ಹೆಚ್ಚು ಅವಶ್ಯಕತೆ ಅವರಿಗಿದೆ. ಅವರಿಗೆ ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡು ಪತ್ರ ಬರೆದರು. ಪತ್ರ ಓದಿದ ಮಹಾರಾಜರ ಕಣ್ಣಾಲಿಗಳು ತುಂಬಿ ಬಂದವು. ಏಕೆಂದರೆ ಪರಮಾನಂದರಿಗೂ, ಜ್ಯೋತಿಬಾ ಫುಲೆಯವರಿಗೂ ಸೈದ್ಧಾಂತಿಕವಾಗಿ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಆದರೂ ತಮ್ಮ ವೈಚಾರಿಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಭಾಯಿ ಪರಮಾನಂದರು ನಡೆದುಕೊಂಡ ರೀತಿ ಅವರ ಬಗ್ಗೆ ಗೌರವಾದರಗಳು ಹೆಚ್ಚುವಂತೆ ಮಾಡಿದ್ದವು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.