ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

'ಸರ್ಕಾರದ ತಪ್ಪೊಪ್ಪಿಗೆ'

Vishwanath S
Updated On : 15 Oct 2013, 10:36 am

ಬಡವರು, ಕಡು ಬಡವರಿಗೆ ಸರ್ಕಾರ (ಅಂದರೆ ಸಮಾಜ) ಒದಗಿಸುವ ಅಗ್ಗದ ಧಾನ್ಯದಲ್ಲಿ ಕನಿಷ್ಠ ಪಕ್ಷ ಪ್ರತಿಶತ ಮೂವತ್ತರಷ್ಟು ದುರ್ಬಳಕೆಯಾಗುತ್ತಿದೆ ಎನ್ನುವ ಪ್ರಚಾರದಲ್ಲಿರುವ ಮಾತನ್ನು ಕೇಂದ್ರ ಆಹಾರ ಮಂತ್ರಿ ಕೆ.ವಿ. ಥಾಮಸ್ ಅವರೇ ಒಪ್ಪಿಕೊಂಡಿದ್ದಾರೆ.
ಅನೇಕ ಸಮಾಜ ಸೇವಾ ಸಂಸ್ಥೆಗಳು, ದೇಶದ ನಾನಾ ಕಡೆಗಳಲ್ಲಿ ನಡೆಸಿದ ಸಮೀಕ್ಷೆಗಳಿಂದ ಹೊರಬಿದ್ದಿರುವ ಅಂಶವಿದು. ದೇಶದಲ್ಲಿ ಇನ್ನೂ ಸಾರ್ವತ್ರಿಕವಾಗಿ ಆಹಾರ ಭದ್ರತೆಯ ಕಾಯಿದೆ ಜಾರಿಗೆ ಬಂದಿಲ್ಲ. ಆದರೆ ಕೆಲವು ರಾಜ್ಯಗಳು ಅದರ ಕೆಲವು ಅಂಶಗಳನ್ನು ಸ್ವತಂತ್ರವಾಗಿ ಜಾರಿಗೆ ತಂದಿವೆ. ಹಿಂದಿನ ವ್ಯವಸ್ಥೆಯ ಚೌಕಟ್ಟಿನಲ್ಲೇ, ಅದೇ ಭ್ರಷ್ಟ ವ್ಯವಸ್ಥೆಯಲ್ಲೇ ಹೊಸ ಜಗತ್ತಿನ ಅತಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದರೆ, ಆಗಬಹುದಾದ ಅನ್ಯಾಯ - ಅನಾಹುತಗಳ ವರದಿಗಳು ಈಗಾಗಲೇ ಪ್ರಕಟವಾಗಿದೆ.
ಸೋಮವಾರ "ಹೆಡ್‌ಲೈನ್ಸ್ ಟುಡೇ" ಟಿ.ವಿ. ವಾಹಿನಿಯಲ್ಲಿ ರೇಷನ್ ಅಕ್ಕಿ ಆಹಾರ ನಿಗಮದ ಉಗ್ರಾಣಗಳಿಂದ "ಪಿಡಿಎಸ್‌" ಮುದ್ರೆ ಇರುವ ಐವತ್ತು ಕೇಜಿಯ ಅಕ್ಕಿ - ಗೋಧಿ ಚೀಲಗಳು ಲಾರಿಗಳ ಮೂಲಕ ಹಿಟ್ಟಿನ ಗಿರಣಿಗಳನ್ನು ಸೇರುತ್ತಿರುವ ವ್ಯವಹಾರದ ಪ್ರತ್ಯಕ್ಷ ದರ್ಶನದ ವರದಿಯಾಗಿತ್ತು.
ಆ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿಲ್ಲ, ಅಲ್ಲಿ - ಇಲ್ಲಿ ಕ್ಷೀಣವಾಗಿ "ಹಂಚಿಕೆ ರಾಜ್ಯಗಳ ಹೊಣೆ" ಎಂದಿರುವುದು ಉಂಟು. ಕೆಲವು ಕಡೆಗಳಲ್ಲಿ ಈ ದಂಧೆಯಲ್ಲಿ ನಿರತರಾದವರ ದೈನಂದಿನ ಆದಾಯ ಎರಡು ಲಕ್ಷ ರುಪಾಯಿಗಳೆಂದು ವರದಿ. ಬಡವರಿಗೆ ಅಗ್ಗದ ಧಾನ್ಯದ ಪೂರೈಕೆ ಈಗ ರಾಷ್ಟ್ರೀಯ ನೀತಿ. ಅದನ್ನು ಪ್ರಶ್ನಿಸುವಂತಿಲ್ಲ. ಆದರೆ ಆ ರಾಷ್ಟ್ರೀಯ ನೀತಿಯ ಗರ್ಭದ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದತ್ತ ಸರ್ಕಾರ ಗಮನಹರಿಸಬೇಕಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement