ಸರ್ಕಾರಿ ನೌಕರನಾದರೇನಂತೆ, ಆತ್ಮಾಭಿಮಾನ ಬೇಡವೆ?
"ಆತ್ಮಾಭಿಮಾನ ಅಥವಾ ಸ್ವಾಭಿಮಾನ ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದು ಇಲ್ಲದ ವ್ಯಕ್ತಿ ಬದುಕಿದ್ದೂ ಸತ್ತಂತೆ. ಸರ್ಕಾರಿ ನೌಕರನಾದರೇನಂತೆ ಆತನಿಗೂ ಸ್ವಾಭಿಮಾನ ಅತಿ ಮುಖ್ಯವಾದುದು. ಆಳರಸರು ಏನು ಅಂದರೂ ಅನ್ನಿಸಿಕೊಂಡು ಇರಲು ಸಾಧ್ಯವೇ?" ಇದು ವಂದೇ ಮಾತರಂ ಖ್ಯಾತಿಯ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಹೇಳಿದ ಮಾತು. 1873ರ ಸಮಯ ಬಹ್ರಾಂಪುರದಲ್ಲಿ ಬಂಕಿಮಚಂದ್ರರು ಡೆಪ್ಯುಟಿ ಮ್ಯಾಜಿಸ್ಟ್ರೇಟರರಾಗಿದ್ದರು. ಅಂದಿನ ಕಾಲದಲ್ಲಿ ಮ್ಯಾಜಿಸ್ಟ್ರೇಟರು ಮೇನೆಯಲ್ಲಿ ಪಯಣಿಸುತ್ತಿದ್ದರು. ಅದು ಸರ್ಕಾರ ನೀಡುತ್ತಿದ್ದ ಸವಲತ್ತುಗಳಲ್ಲಿ ಒಂದು. ಹೀಗೆಯೇ ಒಂದು ದಿನ ತಮ್ಮ ದೈನಂದಿನ ಕೆಲಸ ಮುಗಿಸಿ ಮೇನೆಯಲ್ಲಿ ಒಂದು ಕ್ರಿಕೆಟ್ ಮೈದಾನದ ಮೂಲಕ ಮನೆಗೆ ತೆರಳುತ್ತಿದ್ದರು. ಅಂದು ಆ ಮೈದಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಡೂಫಿನ್ ಮತ್ತವನ ಮಿತ್ರರು ಕ್ರಿಕೆಟ್ ಆಡುತ್ತಿದ್ದರು. ಅದೇ ಸಂದರ್ಭದಲ್ಲಿ ಬಂಕಿಮಚಂದ್ರರ ಮೇನೆ ಬಂದದ್ದನ್ನು ಡೂಫಿನ್‌ಗೆ ಸಹಿಸಲಾಗಲಿಲ್ಲ. ಅದೂ ಭಾರತೀಯ ಅಧಿಕಾರಿಯೊಬ್ಬ ಮೇನೆಯಲ್ಲಿ ಕುಳಿತು ತನ್ನೆದುರಿಗೇ ಹೋಗುವುದೆಂದರೆ! ಅದೊಂದು ಅಪಮಾನವೆಂದು ಭಾವಿಸಿದ. ಮೊದಲೇ ದರ್ಪ ಮತ್ತು ಕ್ರೌರ್ಯಕ್ಕೆ ಹೆಸರಾಗಿದ್ದ ಡೂಫಿನ್ ತನ್ನ ಸೇವಕನೊಬ್ಬನನ್ನು ಕಳುಹಿಸಿ, ಮೇನೆಯಲ್ಲಿ ಕುಳಿತು ಹೋಗುತ್ತಿದ್ದ ಬಂಕಿಂಚಂದ್ರರನ್ನು ಕರೆತರಲು ತಿಳಿಸಿದ. ಸೇನಾಧಿಕಾರಿಯ ಆದೇಶದಂತೆ ಮೇನೆಯಿಂದಿಳಿದು ಬಂದ ಬಂಕಿಮರಿಗೆ ಮಾತನಾಡಲೂ ಅವಕಾಶ ನೀಡದೆ ಡೂಫಿನ್ ಸಾರ್ವಜನಿಕರೆದುರೇ ಅವರ ಕೆನ್ನೆಗೆ ನಾಲ್ಕು ಬಾರಿಸಿದ. ಅದನ್ನು ನೋಡಿ ಅಲ್ಲಿದ್ದವರೆಲ್ಲಾ ಗಾಬರಿಗೊಂಡರು. ಬಂಕಿಮಚಂದ್ರರು ತಮಗೆ ಕಪಾಳ ಮೋಕ್ಷ ಮಾಡಿದ್ದರಿಂದ ಮನನೊಂದು, ಕರ್ನಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದರು. ಈ ಪ್ರಕರಣ ಅಂದಿನ ಕಾಲದ ಪ್ರಮುಖ ಸುದ್ದಿಯಾಗಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಎಲ್ಲರೂ ಬಂಕಿಮಚಂದ್ರರು ಈ ಮೊಕದ್ದಮೆಯಲ್ಲಿ ಸೋಲುತ್ತಾರೆಂದೇ ಭಾವಿಸಿದ್ದರು.
ಅಲ್ಲದೆ ಮೊಕದ್ದಮೆಯನ್ನು ವಾಪಸ್ಸು ಪಡೆಯಲು ಸಲಹೆ ಸಹ ನೀಡಿದ್ದರು. ಏಕೆಂದರೆ ಡೂಫಿನ್ ಸರ್ಕಾರದಲ್ಲಿ ಪ್ರಭಾವೀ ವ್ಯಕ್ತಿಯಾಗಿದ್ದನು. ಆದರೆ ಸ್ವಾಭಿಮಾನದ ಪ್ರತೀಕವಾಗಿದ್ದ ಬಂಕಿಮಚಂದ್ರರು ಯಾವುದೇ ರಾಜಿಗೆ ಸಿದ್ಧರಾಗದೆ ಕರ್ನಲ್ ತಮಗೆ ಬೇಷರತ್ತಾಗಿ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ತುಂಬಿದ ನ್ಯಾಯಾಲಯದಲ್ಲಿ ಬೇರೆ ದಾರಿಕಾಣದೆ, ಡೂಫಿನ್ ಬಂಕಿಮಚಂದ್ರರ ಕ್ಷಮೆ ಕೇಳಿದ. ಈ ಬಗ್ಗೆ ಮಿತ್ರರೊಬ್ಬರು ಕೇಳಿದಾಗ ಅವರು ಮೇಲಿನಂತೆ ಹೇಳಿದ್ದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.