ತಪ್ಪಾಯ್ತು ತಿದ್ಕೋತೀವಿ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಅ.11ರ ಸಂಪಾದಕೀಯ 'ರಾಷ್ಟ್ರಪತಿ ಚಾಣಾಕ್ಷತೆ ಪ್ರದರ್ಶನ'ದಲ್ಲಿ 3ನೇ ಪ್ಯಾರಾ 4ನೇ ಸಾಲು... 'ರಾಷ್ಟ್ರಪತಿಯ ಕಾರ್ಯಕ್ರಮವನ್ನು ಸಾರದು ಪಡಿಸುವುದು' ಅಂತ ಬರೆದಿದೆ. ಇದು 'ಸಾದರಪಡಿಸುವ' ಅಂತ ಆಗಬೇಕಿತ್ತು. ಕೊನೆಯ ವಾಕ್ಯ 'ಆದರೂ ಬಿಜೆಪಿ ನಾಯಕರು ಈ ವಿಚಾರದಲ್ಲಿ ಬಿಹಾರದ ಮುಖ್ಯಮಂತ್ರಿ ಹಾಗೂ ನರೇಂದ್ರ ಮೋದಿ ಅವರ ವಿರೋಧಿ ಎಂದೇ ಹೆಸರು ಪಡೆದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ಚಕಮಕಿ ನಡೆದಿತ್ತು.' ಈ ವಾಕ್ಯದ ಅರ್ಥವೇ ಆಗಲಿಲ್ಲ. ಇಲ್ಲಿ ನಿತೀಶ್ ಕುಮಾರ್ ಕೇವಲ ನರೇಂದ್ರಮೋದಿಯವರ ವಿರೋಧಿಯಾಗಿರದೆ ತನ್ನ ವಿರೋಧಿಯೂ ಹೌದೆ? ಎಂಬೆಲ್ಲ ಸಂಶಯ ಮೂಡುತ್ತದಲ್ಲವೇ?'
'ಪುಟ 5ರ 'ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ' ಶೀರ್ಷಿಕೆ. ಲೋಕಾರ್ಪಣೆ ಎಂಬುದನ್ನು ಬಹಳ ಹಗುರವಾಗಿ ಪರಿಗಣಿಸಿ ಎಲ್ಲಿ ಬೇಕಾದರಲ್ಲಿ ಪ್ರಯೋಗಿಸಬಹುದೇ? ಸಮ್ಮೇಳನದ ಲಾಂಛನವನ್ನು ಲೋಕಾರ್ಪಣೆ ಮಾಡಿದರು ಎಂತಿದೆ. ಸಣ್ಣ-ಪುಟ್ಟ ತೂಗು ಸೇತುವೆ ಇರಲಿ, ವಾಚನಾಲಯವಿರಲಿ, ಕೊಠಡಿ ಇರಲಿ, ಕೆತ್ತನೆಯ ಮೂರ್ತಿಯಿರಲಿ, ಯಾರೊಬ್ಬರಿಂದ ಲೋಕಾರ್ಪಣೆಯಾಯಿತು ಎಂದು ಸಹಜವಾಗಿ ಹೇಳಿ ಬಿಡುತ್ತೇವೆ. ಈ ಶಬ್ದ ಆಯ್ಕೆ ಹಗುರವಾಗಿ ತೆಗೆದುಕೊಳ್ಳುವಂತಹುದೇ?'
'4ನೇ ಪ್ಯಾರಾ 'ಸಮ್ಮೇಳನಕ್ಕೆ ಅಂದಾಜು ವೆಚ್ಚ 2.5 ಕೋಟಿ ರೂಪಾಯಿ, ಅದರಲ್ಲಿ ಬಜೆಟ್ನಲ್ಲಿ 1 ಕೋಟಿ ಮೀಸಲಿಡಲಾಗಿದೆ, ಉಳಿದ 1.5 ಕೋಟಿ ಸರ್ಕಾರದಿಂದ ಒದಗಿಸುವಂತೆ ಕೋರಲಾಗಿದೆ ಅಂತ ಬರೆದಿದೆ. ಇಲ್ಲಿ ಬಜೆಟ್ನಲ್ಲಿ ನಿಗದಿಪಡಿಸಿದ ಮೊತ್ತ ಯಾರೊಬ್ಬರ ಕಿಸೆಯಿಂದ ಕೊಡುವಂತಹುದೇ. ಹಾಗೂ ಇಲ್ಲಿಗೆ 2.5 ಕೋಟಿ ಪೂರ್ತಿಯಾದರೂ, ಉಳಿದ 50 ಲಕ್ಷ ರೂಪಾಯಿಗಳನ್ನು ಇತರ ಮೂಲಗಳಿಂದ ಕ್ರೋಢಿಕರಿಸಲಾಗುವುದು ಅಂತಿದೆ. ಇದರರ್ಥ ಸಮ್ಮೇಳನದ ಅಂದಾಜು ವೆಚ್ಚ 3 ಕೋಟಿ ಅಂದಂತಾಯಿತಲ್ಲವೇ? ಅಥವಾ ಹೆಚ್ಚಿನ 50 ಲಕ್ಷ ರೂಪಾಯಿ 'ಅಲಾಯ್ದಾ' ಖಾತೆಗೆ ಜಮಾ ಆಗತಕ್ಕಂತದ್ದೇ?'
'ಪುಟ 3 - ಉ.ಕ. (ಸುದ್ದಿ ಸಂಕ್ಷೇಪ) 'ದೇವಸ್ಥಾನ ಸಹಯೋಗದಲ್ಲಿ ಯಲ್ಲಾಪುರ ನಗರದ ಮಾತೆಯರಿಗಾಗಿ ಮಾತೃ ಮಂಡಳಿಯು ಮೋದಕ ತಯಾರಿಕೆ ಮತ್ತು ಸಂಪ್ರದಾಯದ ಹಾಡುಗಳ ಗಾಯನ ಸ್ಪರ್ಧೆಗಳು ಜರುಗಿದವು ಅಂತಿದೆ. ಸ್ಪರ್ಧೆಗಳನ್ನು ಏರ್ಪಡಿಸಿತ್ತು ಅಂತ ಆಗಬೇಕಿತ್ತಲ್ಲವೇ?'
"ಪ್ರವೇಶ ಪರೀಕ್ಷೆಗೆ ಅರ್ಜಿ' ವರದಿಯಲ್ಲಿ 6ನೇ ತರಗತಿಗೆ ಸಂಬಂಧ ಪಟ್ಟ ಅರ್ಜಿಯ ಪ್ರಸ್ತಾಪವಿದೆ. ಆದರೆ ಅದರೊಟ್ಟಿಗಿನ ಚಿತ್ರವನ್ನು ನೋಡಿದರೆ ಯಾವುದೇ ಕಾಲೇಜು ಹಂತದ ಪರೀಕ್ಷೆ ನಡೆಯುತ್ತಿದೆ ಅಂತ ಅನಿಸುತ್ತಿಲ್ಲವೇ?'
'ಪುಟ 2ರಲ್ಲಿ 'ಉತ್ತರಕನ್ನಡ ಬೈಪಾಸ್ ನಿರ್ಮಿಸಿ ಊರು ಉಳಿಸಿ' ಶೀರ್ಷಿಕೆ 3ನೇ ಪ್ಯಾರಾ ಸಾಮಾನ್ಯವಾಗಿ ಮಠಾಧೀಶರನ್ನೋ, ಗುರುವರ್ಯರನ್ನೋ ಶ್ರೀ ಶ್ರೀ ಶ್ರೀ ಅಂತೆಲ್ಲ ಸಂಬೋಧಿಸುವುದನ್ನು ಕೇಳಿದ್ದೇವೆ. ಆದರೆ ಡಾಕ್ಟರ್ ಆದವರನ್ನು ಡಾ. ಡಾ. ಎಂ.ವಿ. ಕರ್ಕಿ ಅಂತ ಬರೆದದ್ದು ತುಸು ಗೊಂದಲಕ್ಕೀಡು ಮಾಡಿಕೊಟ್ಟಿತು. 8ನೇ ಸಾಲು 'ಸರ್ವೇ ಎಂಬ ಪದ ಬಳಕೆಯಾಗಿದೆ. ಇದು ಸರ್ವೆ ಆಗಬೇಕಿತ್ತಲ್ಲ. 4ನೇ ಪ್ಯಾರಾ 'ರಾ.ಹೆ. ಪ್ರಾಧಿಕಾರಿ' ಅಂತ ಇದೆ. ಇದು ಪ್ರಾಧಿಕಾರ ಆಗಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರ ಭಟ್