ನಮ್ಮ ನಾಡಿನಲ್ಲಿಯೇ ಶಾಂತಿನಿಕೇತನ ಕಾಣುತ್ತೇನೆ
ಕಾದಂಬರಿ ಸಾರ್ವಭೌಮರಾದ ಅ.ನ.ಕೃಷ್ಣರಾಯರು ಕನ್ನಡದ ಕಟ್ಟಾಳು. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಶ್ರೀಯುತರು ಮಣಿಪಾಲದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಕನ್ನಡದ ಬಗ್ಗೆ ಎಲ್ಲೇ ಅಪಸ್ವರ ಎದ್ದರೂ ಅದನ್ನು ತೀಕ್ಷ್ಣವಾಗಿ ಪ್ರತಿಭಟಿಸುವ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಅವರು ಕ.ಸಾ.ಪ.ದ ಮುಖವಾಣಿ ಪತ್ರಿಕೆ "ಕನ್ನಡ ನುಡಿ"ಯ ಸಂಪಾದಕರಾಗಿದ್ದಾಗ, ಆರ್.ಆರ್.ದಿವಾಕರ್ರ ಹಿಂದಿ ಭಾಷೆಯ ಪ್ರೀತಿಯನ್ನು ಕಟುವಾಗಿ ಟೀಕಿಸಿ ಒಮ್ಮೆ ಸಂಪಾದಕೀಯವನ್ನು ಬರೆದಿದ್ದರು. ಆ ಬಗ್ಗೆ ದಿವಾಕರ್ ಅನಕೃರವರನ್ನು ಕ್ಷಮೆಯಾಚಿಸಲು ಆಗ್ರಹಿಸಿದಾಗ ತಮ್ಮ ಸಂಪಾದಕ ಹುದ್ದೆಗೇ ರಾಜಿನಾಮೆ ನೀಡಿದ ಮಹಾ ಸ್ವಾಭಿಮಾನಿ. ಇಂತಹುದೇ ಇನ್ನೊಂದು ಘಟನೆ ಅ.ನ.ಕೃಷ್ಣರಾಯರ ಕನ್ನಡ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಶಾಂತಿನಿಕೇತನದಲ್ಲಿ ಕೆಲಕಾಲ ಅ.ನ.ಕೃ ತಂಗಿದ್ದು ರವೀಂದ್ರನಾಥ ಟ್ಯಾಗೋರ್ರವರ ಶಿಷ್ಯರಾಗಿದ್ದರು. ಒಮ್ಮೆ ಶಾಂತಿನಿಕೇತನದಲ್ಲಿ ನಡೆದ ಒಂದು ಸಮಾರಂಭದಲ್ಲಿ ದೇಶದೆಲ್ಲೆಡೆಯಿಂದ ಬಂದಿದ್ದವರಿಗೆ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಹಾಗಾಗಿ ಅಲ್ಲಿಗೆ ಬಂದಿದ್ದ ಶಿಬಿರಾರ್ಥಿಗಳನ್ನುದ್ದೇಶಿಸಿ ಟ್ಯಾಗೋರರು "ಮೊದಲು ನಮ್ಮ ಬೆಂಗಾಲಿ ಸಹೋದರ ಮಾತನಾಡಲಿ" ಎಂದು ಹೇಳಿ ಶಿಷ್ಯನೊಬ್ಬನಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಅದು ಅನಕೃ ಅವರಿಗೆ ಸರಿಕಾಣಲಿಲ್ಲ. ಸಮಾರಂಭವೆಲ್ಲ ಮುಗಿದಮೇಲೆ ಗುರುದೇವರ ಬಳಿ ಹೋದ ಅನಕೃ, "ವಿಶ್ವಕವಿಯಾಗಿ ಎಲ್ಲರನ್ನೂ ಸಮಾನಾಗಿ ಕಾಣಬೇಕಾದ ನೀವು ಬಂಗಾಲಿಗೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದು ತಪ್ಪಲ್ಲವೆ?" ಎಂದು ಪ್ರಶ್ನಿಸಿದರು. ಅದಕ್ಕೆ ಟ್ಯಾಗೋರರು ಎಲ್ಲರಿಗೂ ತಮ್ಮ ಮಾತೃಭಾಷೆ ಬಗ್ಗೆ ಪ್ರೀತಿಯಿರುವುದಿಲ್ಲವೆ? ಎಂದು ಮರು ಪ್ರಶ್ನೆ ಹಾಕಿದರು. ಆ ಉತ್ತರದಿಂದ ಸಮಾಧಾನವಾಗದ ಅ.ನ.ಕೃರವರು ಹಾಗಿದ್ದರೆ "ನಾನು ನಮ್ಮ ನಾಡಿನಲ್ಲಿಯೇ ಶಾಂತಿನಿಕೇತನವನ್ನು ಕಾಣುತ್ತೇನೆ" ಎಂದು ಹೇಳಿದವರೇ ಅಂದೇ ಕರ್ನಾಟಕಕ್ಕೆ ವಾಪಸು ಬಂದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.