ಸುಪ್ರೀಂ ತೀರ್ಪಿನ ಬಿಸಿ
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾಂಗ್ರೆಸ್ ಸದಸ್ಯ ರಶೀದ್ ಮಸೂದ್, ಆರ್ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ಮುಖಂಡ ಜಗದೀಶ್ ಶರ್ಮಾ ಅವರ ಲೋಕಸಭಾ ಸದಸ್ಯತ್ವದ ಅನರ್ಹತೆ ಭಾವಿ ಕಳಂಕಿತ ಸದಸ್ಯರಿಗೆ ಒಂದು ಪಾಠ. ಈಗಾಗಲೇ ಅನೇಕ ಹಗರಣಗಳಲ್ಲಿ ಪಾಲ್ಗೊಂಡು ನ್ಯಾಯಾಲಯದ ಕಟಕಟೆ ಹತ್ತಿ ಮೊಕದ್ದಮೆಯನ್ನು ಎದುರಿಸುತ್ತಿರುವವರಿಗಂತೂ ನಡುಕವುಂಟಾಗಿದೆ. ಅವರು ಈಗ ಏನೂ ಮಾಡಲಾಗದೆ ವಿಲಿವಿಲಿ ಒದ್ದಾಡುವಂತಾಗಿದೆ. ಆದರೆ ಮುಂದೆ ಹಗರಣಕ್ಕೆ ಕೈ ಹಾಕುವವರು ಆ ಕೆಲಸಕ್ಕೆ ತೊಡಗುವ ಮುನ್ನ ಯೋಚನೆ ಮಾಡಬೇಕಾದ ಪರಿಸ್ಥಿತಿಯುಂಟಾಗಿದೆ. ಮರಣ ದಂಡನೆ ಪ್ರಚಲಿತದಲ್ಲಿದ್ದರೂ ಕೊಲೆ ಸುಲಿಗೆಗಳು ನಿಂತಿಲ್ಲ. ಆದರೆ ಮರಣ ದಂಡನೆಯನ್ನೇ ತೆಗೆದು ಹಾಕಿದರೆ ಕೊಲೆ ಸುಲಿಗೆಗಳು ಹೆಚ್ಚಿನ ಪ್ರಮಾಣದಲ್ಲಿ ಶುರುವಾಗುತ್ತವೆ. ಅದೇ ರೀತಿ ಸದಸ್ಯತ್ವದ ಅನರ್ಹತೆಯು ಹಗರಣಗಳನ್ನೇ ನಡೆಯದಂತೆ ವಾತಾವರಣ ಸೃಷ್ಟಿಸದಿರಬಹುದು. ಆದರೆ ಹಗರಣಗಳ ಪ್ರಮಾಣ ಕುಂಠಿತವಾಗುವುದಕ್ಕೆ ಸುಪ್ರೀಂಕೋರ್ಟ್ ತೀರ್ಪು ನಾಂದಿ ಹಾಡಿದೆ ಎಂದು ಭಾವಿಸಿದರೆ ತಪ್ಪಾಗುವುದಿಲ್ಲ.
ಲಾಲು ಪ್ರಸಾದ್ ಬಹಳ ಕಾಲದಿಂದ ರಾಜಕೀಯದಲ್ಲಿದ್ದವರು. ಅವರಿಗೆ ವಿಶ್ರಾಂತಿ ತುಂಬಾ ಅಗತ್ಯವಾಗಿದೆ. ಅದು ಜೈಲಿನಲ್ಲಿ ದೊರಕಿದೆ. ಮತ್ತೊಂದು ಮುಖ್ಯವಾದ ಅಂಶವೆಂದರೆ, ಇನ್ನು ಮುಂದೆ ಆರೋಪಿಗಳ ವಯಸ್ಸನ್ನು ಗಮನವಿಟ್ಟುಕೊಂಡು ಆದಷ್ಟು ಬೇಗ ನ್ಯಾಯಾಲಯಗಳು ತೀರ್ಪನ್ನು ನೀಡಿದರೆ ಬಹಳ ಉತ್ತಮ. ಸುಮಾರು 75 ಅಥವಾ 80 ವರ್ಷ ದಾಟಿದ ರಾಜಕಾರಣಿಗಳು ಹಗರಣಕ್ಕೆ ಕೈ ಹಾಕಿ ತಮ್ಮ ಮುಂದಿನ ಪೀಳಿಗಗೆ ಸಾಕಷ್ಟು ಹಣ ಮಾಡಿಕೊಡುವ ಯೋಚನೆ ಮಾಡಬಹುದು. ಏಕೆಂದರೆ ನ್ಯಾಯಾಲಯದಿಂದ ತೀರ್ಪು ಬರುವ ವೇಳೆಗೆ ತಮ್ಮ ಆಯುಷ್ಯ ಕಳೆದು ಹೋಗುವ ನಂಬಿಕೆ ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ವಯಸ್ಸಾದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದರೂ ಅವರು ಹೆಚ್ಚು ದಿನ ಜೈಲು ವಾಸದಲ್ಲಿರದೆ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದು ತಮ್ಮ ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಿರುವ ಸಮಾಧಾನ ಹೊಂದಬಹುದು. ನ್ಯಾಯಾಲಯಗಳ ತ್ವರಿತ ತೀರ್ಪುಗಳಿಂದ ಇದಕ್ಕೂ ಕಡಿವಾಣ ಬೀಳಬೇಕು.
- ಕೆ.ವಿ. ಸೀತಾರಾಮಯ್ಯ, ಹಾಸನ
ಮಧ್ಯಸ್ತಿಕೆಯ ಅವಶ್ಯಕತೆ ನಮಗಿಲ್ಲ
ಭಾರತ ಮಾತೆಯ ಸಿಂಧೂರ ನಮ್ಮ ಜಮ್ಮು-ಕಾಶ್ಮೀರ ಈ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕದಂತಹ ಬೇರೂಂದು ರಾಷ್ಟ್ರದ ಮಧ್ಯಸ್ತಿಕೆಯ ಅವಶ್ಯಕತೆ ನಮಗಿಲ್ಲ. ಎಂದೆಂದಿಗೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಇತ್ತೀಚೆಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರ ವಿಚಾರವಾಗಿ ಅಮೆರಿಕ ಮಧ್ಯಸ್ತಿಕೆ ವಹಿಸುವ ಕುರಿತು ಮಾತನಾಡಿರುವ ವಿಚಾರದಲ್ಲಿ ಅರ್ಥವೇ ಇಲ್ಲ. ಪಾಕಿಸ್ತಾನ ಕಳೆದ ಎರೆಡು ತಿಂಗಳ ಅವದಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.
ಹೀಗೆ ಮುಂದುವರೆದರೆ 1948,1965,1971,1999ರ ಯುದ್ಧ ಸಮಯದಲ್ಲಿ ಕೊಟ್ಟ ಉತ್ತರವನ್ನು ಪಾಕ್ ಮರೆತಂತೆ ಕಾಣುತ್ತಿದೆ. ಕಾಶ್ಮೀರ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸದೆ, ದ್ವಿಪಕ್ಷೀಯ ಮಾತುಕತೆ ಆಡುವುದು ಒಳ್ಳೆಯದು. ಈ ಕುರಿತು ಭಾರತ ಹಲಾವಾರು ಬಾರಿ ಶಾಂತಿ ಮಾತುಕತಗೆ ಮುಂದಾದರೂ ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ ಇದು ನಮ್ಮ ಸೈನ್ಯದ ದೌರ್ಬಲ್ಯವೆಂದು ತಿಳಿಯುವುದು ಪಾಕಿಸ್ತಾನದ ಮೂರ್ಖತನ. ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನ್ಯಕ್ಕೆ ನಮ್ಮ ಬಲ ಪರಿಚಯಿಸಿದ್ದೇವೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಂಡು, ಮಾತುಕತೆಗೆ ಬರುವುದಷ್ಟೇ ಪಾಕ್ ಮುಂದಿರುವ ಆಯ್ಕೆ.
- ಸುರೇಶ್.ಬಿ .ಶಿಂಡೇನಹಳ್ಳಿ, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com