ಬೊಬ್ಬೆ ಸುಲಭ, ಅರಿವು ಮೂಡಿಸುವಿಕೆ ಸವಾಲು
ಆಚರಣೆಗೂ ಶೋಷಣೆಗೂ ವ್ಯತ್ಯಾಸವಿಲ್ಲವೇ? ಎಂದು 12.10.2013 ಶನಿವಾರ ಕ.ಪ್ರ.ದಲ್ಲಿ ಚಂದ್ರ ಬಾರ್ಕೂರ ಪ್ರಶ್ನೆಗೆ ಪ್ರಗತಿಪರರು ಉತ್ತರಿಸಬೇಕು. ಕುಂದಾಪುರ ತಾಲೂಕಿನಲ್ಲಿ ಕಾಳಾವಾರ ಅಂತ ಒಂದೂರಿದೆ. ಅಲ್ಲಿಯೂ ಆಚರಣೆಯೊಂದು ನಡೆಯುತ್ತದೆ. ನಲವತ್ತರ ದಶಕದಲ್ಲಿ ನಾನು ಹಿರಿಯರ ಜೊತೆಯಲ್ಲಿ ಅಲ್ಲಿಗೆ ಹೋಗಿದ್ದೆ. ದೇವಸ್ಥಾನದ ಕೆರೆಯಲ್ಲಿ ಮುಳುಗು ಹಾಕಿ ಕಲ್ಲುಮಣ್ಣಿನ ದಾರಿಯಲ್ಲಿ ಉರುಳುತ್ತಾ ದೇವಸ್ಥಾನದವರೆಗೂ ಹೋಗುತ್ತಾರೆ. ನಮ್ಮೂರಿನಲ್ಲಿ ಈ ಸೇವೆಗೆ ಮಂಡಸ್ತಾನ ಎನ್ನುತ್ತಾರೆ. ಅವರ ಸೊಂಟದಲ್ಲಿ ಒಂದು ಪಾಣಿ ಪಂಚೆ ಮುಂಡು ಮಾತ್ರವಿರುತ್ತೆ. ನಮ್ಮಲ್ಲೊಬ್ಬರನ್ನು ಕೇಳಿದೆ ಅವರಿಗೆ ಮೈ-ಕೈ ನೋಯುವುದಿಲ್ಲವೇ? ಎಂದು. ಅವರು ಹೇಳಿದ್ದು: ಇದೇನು ಕೇಳ್ತೀಯಾ ಮಧ್ಯಾಹ್ನ ಉಂಡ ಎಲೆಯ ಮೇಲೆ ಹೀಗೆ ಉರುಳುತ್ತಾರೆ! ಮೊದಲ ದೃಶ್ಯ ಕಂಡೆ, ಎರಡನೇ ದೃಶ್ಯ ನೋಡೋಕೆ ಆಗಲಿಲ್ಲ. ನಮ್ಮೂರಿನಲ್ಲಿ ಒಂದು ಜಾತಿಯ ಮದುಮಕ್ಳನ್ನೂ ಪಲ್ಲಕ್ಕಿಯಲ್ಲಿ ವರನ ಮದುವೆಯಿಂದ ವಧುವಿನ ಮನೆಗೆ, ವಧುವಿನ ಮನೆಯಿಂದ ವರನ ಮನೆಗೆ ಹೊರುತ್ತಾರೆ. ಇದು ಮೆರವಣಿಗೆ ಅಲ್ಲ, ಪದ್ಧತಿ. ಇನ್ನೊಂದು ಜಾತಿಯವರು ತಿಂಗಳು ತುಂಬಿದ ಗರ್ಭಿಣಿಯರನ್ನು ಗಂಡನ ಮನೆಗೆ ಮಂಚದಲ್ಲಿ ಹೊರುತ್ತಾರೆ. ಇದು ಕೂಡ ಪದ್ಧತಿ. ಇಂಥ ಪದ್ಧತಿ ಈಗ ನಿಂತು ಹೋಗಿದೆ. ನಮ್ಮ ಪ್ರಗತಿಪರರಿಗೆ, ಜೀವಿಗಳಿಗೆ ತಾವೇ ಕಿತ್ತು ನಾಟಿ ಮಾಡಬೇಕಂತ ಅವಸರ! ಅವರಲ್ಲಿ ಕೆಲವರು ನನ್ನ ವಯಸ್ಸಿನವರೇ. ನಾನು ಗಮನಿಸಿಕೊಂಡೇ ಬಂದಿದ್ದೇನೆ. ಇವರ ಸಾಧನೆ ಎಂದರೆ ಸರ್ಕಾರಿ ಸವಲತ್ತು ಪಡೆಯುವುದೊಂದೆ. ಮಂಡಸ್ತಾನ ವಿರೋಧಿಸುವುದು ಪ್ರಗತಿಪರ ಹಕ್ಕಾದರೆ ಮಂಡಸ್ತಾನ ಮಾಡುವುದು ಆಚರಿಸುವವರ ಪದ್ಧತಿ, ಹರಕೆ. ನಾನು ಮಾಡುತ್ತಿರುವುದು ಹೊಲಸು ಅಚರಣೆ ಎನ್ನುವುದು ಅರಿವಾದರೆ ಯಾವ ದೊಣ್ಣೆ ನಾಯಕರ ಅಪ್ಪಣೆಯಿಲ್ಲದೇ ಎಲ್ಲಾ ಅನಿಷ್ಟ ಪದ್ಧತಿ ನಿಂತು ಹೋಗುತ್ತೆ. ಇತ್ತೀಚೆಗೆ ಒಬ್ಬರು ಸ್ವಾಮಿಗಳು-ನರಸಿಂಹ ರಾಜವಾಡೆಯವರು- ಪಲ್ಲಕ್ಕಿ ಏರಲಿಲ್ಲ. ಕೊನೆಗುಳಿಯುವ ಪ್ರಶ್ನೆ, ಮಾಧ್ಯಮದಲ್ಲಿ ಮಿಂಚುವ ಬುದ್ಧಿಜೀವಿಗಳು ಕನ್ನಡಿಗರಿಗೆ ನೀಡಿರುವ ಕೊಡುಗೆ ಏನು?
-ಕೋಟ ನರಸಿಂಹ ದೇವಾಡಿಗ, ಬೆಂಗಳೂರು
ತುಷ್ಟೀಕರಣದ ಪರಮಾವಧಿ
ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಮುಸ್ಲಿಂ ಹೆಣ್ಣು ಮಕ್ಕಳ ವಿವಾಹ ಭಾಗ್ಯ (ಶಾದಿ ಭಾಗ್ಯ) ಯೋಜನೆ ಜಾರಿ ಆಗಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ ನೆರವಾಗುವುದು ಸಂತಸದ ವಿಷಯವಾದರೂ ಈ ಯೋಜನೆಯ ತಾರತಮ್ಯದಿಂದ ಕೂಡಿರುವುದು ಬೇಸರದ ಸಂಗತಿ. ಬಡ ಹೆಣ್ಣು ಮಕ್ಕಳು ಸಮಾಜದ ಎಲ್ಲ ವರ್ಗ, ಧರ್ಮದಲ್ಲೂ ಇರುವರೆಂದು ಆಡಳಿತಗಾರರಿಗೆ ತಿಳಿದಿಲ್ಲವೇ. ಅವರಿಗೂ ಈ ಸೌಲಭ್ಯ ಒದಗಿಸದೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಏಕೆ? ಇಂತಹ ಕಲ್ಯಾಣ ಯೋಜನೆಯಲ್ಲೂ ಪಕ್ಷಪಾತ, ರಾಜಕೀಯ ಏಕೆ? ಮುಸ್ಲಿಂ ಬಿಟ್ಟು ಮಿಕ್ಕುಳಿದ ಹೆಮ್ಮಕ್ಕಳು ಏನು ಪಾಪ ಎಸಗಿದ್ದಾರೆ ಸ್ವಾಮಿ? ಅಂದು ಬ್ರಿಟಿಷರು ಮುಸ್ಲಿಂ -ಹಿಂದು ಎಂದು ಭೇದ ತಂದು ಹಾಕಿ ಸ್ವಾರ್ಥ ಮೆರೆದರು. ಇಂದು ಅದರ ಪುನರಾವರ್ತನೆ ಆಗುತ್ತಿದೆ ತಾನೆ!? ಒಂದು ಸಮುದಾಯದ ತುಷ್ಟೀಕರಣದ ಮೇರು ಇದಲ್ಲವೇ? ಈ ಕೂಡಲೇ ಶಾದೀ ಭಾಗ್ಯವನ್ನು ಎಲ್ಲ ಬಡ (ಧರ್ಮಭೇದವಿಲ್ಲದೇ) ಹೆಣ್ಣು ಮಕ್ಕಳಿಗೂ ಕರುಣಿಸಿರಿ. ಒಂದು ಕೋಮಿನವರನ್ನು ಅಸಹಜವಾಗಿ ಅತಿ ಮುದ್ದು ಮಾಡಿ ಅವಿವೇಕತನವನ್ನು ಪ್ರದರ್ಶಿಸಿದಲ್ಲಿ ಅನಾಸ್ಥೆಗೊಳಗಾದ, ಅವಕಾಶ ವಂಚಿತರಾದವರ ಅಸಹನೆ ನಾಡಿನಲ್ಲಿ ವರ್ಗ ಸಂಘರ್ಷಕ್ಕೆ ಪ್ರೇರಕವಾದೀತು.
-ಎನ್.ಡಿ. ಕಾರಂತ್, ಮೈಸೂರು
ಕೇಜ್ರಿವಾಲರಲ್ಲಿಲ್ಲ ನೈಜ ಕಾಳಜಿ
ಅರವಿಂದ ಕೇಜ್ರಿವಾಲ್ ಅವರೊಂದಿಗಿನ ಔಟ್-ಲುಕ್ ಸಂದರ್ಶನ (ಕ.ಪ್ರ. 20/10) ನೀರಸವಾಗಿತ್ತು. ತಾವೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಏಕೈಕ ಧೋರಣೆ ಕ್ರೇಜಿವಾಲ್ ಅವರದು ಎಂಬುದು ಸ್ಪಷ್ಟವಾಗುತ್ತದೆ. ನಿಜವಾದ ಚಳವಳಿಯನ್ನು ಹುಟ್ಟು ಹಾಕಬೇಕೆಂದಿದ್ದರೆ, ಕೇವಲ ಒಂದು ರಾಜ್ಯದ ಗದ್ದುಗೆ ಹಿಡಿದರೆ ಸಾಲದು, ಅದು ದೇಶವ್ಯಾಪಿ ಆಗಿರಬೇಕಿತ್ತು. ಆದರೆ ಅದ್ಯಾವ ಲಕ್ಷಣವೂ ಅವರ ಹೋರಾಟದಲ್ಲಿ ಪ್ರತಿಧ್ವನಿಸುತ್ತಿಲ್ಲ. ತಮ್ಮ ಹಿತ ಸಾಧನೆಗೆ ಕಂಡ ಕಂಡವರನ್ನು ಹೀಯಾಳಿಸುವುದನ್ನು ಬಿಟ್ಟರೆ ಇನ್ನೇನೂ ವಿಶೇಷ ಕಂಡು ಬಂದಿಲ್ಲ. ಸೈದ್ಧಾಂತಿಕ ಭಿನ್ನತೆ ಇರುವ ಕ್ರೇಜಿವಾಲ್, ಅಣ್ಣಾ ಹಜಾರೆಯವರನ್ನು ಹಾಡಿ ಹೊಗಳುತ್ತಿರುವುದು ಬೂಟಾಟಿಕೆಯಂತೆ ಅನಿಸುತ್ತಿದೆ. ಸ್ಪಷ್ಟ ನಿಲುವು, ಧೋರಣೆ, ಸಂಕಲ್ಪಗಳಿಲ್ಲದ ಕ್ರೇಜಿವಾಲ್ ಏನು ಬದಲಾವಣೆ, ಏನು ಸುಧಾರಣೆ ತಂದಾರು ಎಂಬುದು ದೇಶವಾಸಿಗರ ಪ್ರಶ್ನೆ.
-ಶಂಕರನಾರಾಯಣಭಟ್, ಮಾಡಗೇರಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com