ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಲಂಕೇಶ್ ಮತ್ತವರ ನಿಲವು

Vishwanath S
Updated On : 25 Oct 2013, 11:34 am

ಪಿ.ಲಂಕೇಶ್ ನಮ್ಮ ನಾಡು ಕಂಡ ಒಬ್ಬ ಮಹಾನ್ ಲೇಖಕ. ತಮ್ಮ ಪ್ರಾಧ್ಯಾಪಕ ವೃತ್ತಿಗೆ ತಿಲಾಂಜಲಿ ಇಟ್ಟು, "ಲಂಕೇಶ್ ಪತ್ರಿಕೆ"ಯನ್ನು ಪ್ರಾರಂಭಿಸಿದರು. ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ ಎಂಬ ಕಾದಂಬರಿಗಳನ್ನೂ, ಆರು ಕಥಾಸಂಕಲನಗಳನ್ನೂ, ಹಲವಾರು ನಾಟಕಗಳನ್ನೂ ಬರೆದು ಪ್ರಸಿದ್ಧರಾಗಿದ್ದಾರೆ. ಪಲ್ಲವಿ, ಅನುರೂಪ ಚಲನಚಿತ್ರಗಳನ್ನು ತಯಾರಿಸಿದ್ದರು. "ಹುಳಿಮಾವಿನ ಮರ" ಅವರ ಆತ್ಮಕಥೆಯಾಗಿದೆ.
ಇದ್ದುದನ್ನು ಇದ್ದಂತೆಯೇ ಹೇಳುವ ಪರಿಪಾಠ ಇಟ್ಟುಕೊಂಡಿದ್ದ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಲಂಕೇಶ್. ಕೆಲಸದಲ್ಲಿ ಹೊಂದಿಕೊಳ್ಳಲಾರದೆ ರಾಜಿನಾಮೆ ನೀಡಿ ಹೊರಬಂದರು, ಸಿನಿಮಾಕ್ಕೆ ಕೈಹಾಕಿ ಕೈಸುಟ್ಟುಕೊಂಡರು, ಕುದುರೆ ಜೂಜಿನ ಸೆಳೆತದಿಂದ ಸಾಲಗಾರರಾಗಿದ್ದೂ ಇದೆ! ಸೋಜಿಗವೆಂದರೆ ತಮಗೆ ಸಹಾಯಮಾಡಿದವರು ಎದುರು ಬಂದಾಗ, ಅವರೊಡನೆ ಮಾತನಾಡಲು ಲಂಕೇಶರಿಗೆ ತುಂಬಾ ಮುಜುಗರವಾಗುತ್ತಿತ್ತು. ಒಮ್ಮೆ ಯಾವುದೋ ಒಂದು ವಿಚಾರದಲ್ಲಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಅನಂತಕುಮಾರ್ ಲಂಕೇಶರಿಗೆ ಸಹಾಯಮಾಡಿದ್ದರು. ಆದರೂ ತಮ್ಮ ವಾರಪತ್ರಿಕೆಯಲ್ಲಿ ಅನಂತಕುಮಾರ್ ವಿರುದ್ಧ ಬರೆದು ಅವರ ಕೆಲವು ವಿಚಾರಗಳನ್ನು ಖಂಡಿಸಿದ್ದರು. ಲಂಕೇಶ್ ಅನಾರೋಗ್ಯ ಪರಿಸ್ಥಿತಿಯಲ್ಲಿದ್ದಾಗಲೂ ಅನಂತಕುಮಾರ್ ಲಂಕೇಶರಿಗೆ ಸಹಾಯವಾಗುವಂತೆ ನೋಡಿಕೊಂಡಿದ್ದರು. ಅದು ಲಂಕೇಶರ ಆರೋಗ್ಯದ ದೃಷ್ಟಿಯಿಂದ ಅತಿ ದೊಡ್ಡ ಸಹಾಯವಾಗಿಯೂ ಆಗಿತ್ತು.
ಆದರೆ ಲಂಕೇಶರು ಮಾತ್ರ ತಮ್ಮ ಪತ್ರಿಕೆಯಲ್ಲಿ ಮರುವಾರವೇ ಒಂದು ಲೇಖನ ಬರೆದು ಅನಂತಕುಮಾರ್ ಅವರನ್ನು ಉಗ್ರವಾದ ಮಾತುಗಳಲ್ಲಿ ಟೀಕಿಸಿದ್ದರು. ಇದರಿಂದ ಅನಂತಕುಮಾರ್ ಅವರಿಗೆ ಏನನಿಸಬಹುದು ಎಂಬುದನ್ನೂ ಲಂಕೇಶ್ ಯೋಚಿಸಲಿಲ್ಲ. ಈ ಬಗ್ಗೆ ಅವರ ಆತ್ಮೀಯರೇ ಆಕ್ಷೇಪಿಸಿದಾಗ ಲಂಕೇಶ್, "ನನ್ನ ಪತ್ರಿಕೆಯಲ್ಲಿ ಅನಂತಕುಮಾರ್ ವಿರುದ್ಧ ಬರೆದ ಲೇಖನಗಳನ್ನು ಟೀಕೆಗಳು ಎಂದು ಭಾವಿಸುವ ಅಗತ್ಯವಿಲ್ಲ, ಆತ ಬೆಳೆಯುತ್ತಿರುವ ನಾಯಕನಾಗಿರುವುದರಿಂದ ಸದಾ ಎಚ್ಚರದಿಂದಿಡಲು ನಾನು ಹೀಗೆ ಬರೆಯಲೇಬೇಕಾಗುತ್ತದೆ" ಎಂದರು.
ಇನ್ನು, ಅನಂತಕುಮಾರ್ ಸೂಟ್ ಧರಿಸಿದರೆ, ಒಳ್ಳೆಯ ಸಿನಿಮಾ ಹೀರೋ ಆಗಬಹುದಿತ್ತು ಎಂದೂ ಸಹ ಅವರು ಮೆಚ್ಚುಗೆ ಸೂಚಿಸಿದ್ದು ಇದೆ! ಆದರೆ ಇವ್ಯಾವುದನ್ನೂ ಬಹಿರಂಗವಾಗಿ, ಪತ್ರಿಕೆಯ ಮೂಲಕ ಹೇಳದೆ ತಮ್ಮ ಆತ್ಮೀಯರಲ್ಲಿ ಮಾತ್ರ ಹೇಳಿದ್ದರು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments