ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತಂಗಿ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಅ. 23ರ ಪತ್ರಿಕೆಯ ಪುಟ 10 ರಲ್ಲಿ 'ಹರಿಕಥಾ ವಿದ್ವಾಂಸ ಭದ್ರಗಿರಿ ಅಚ್ಯುತದಾಸ ನಿಧನ' ಎಂಬ ಸುದ್ದಿ ಪ್ರಕಟವಾಗಿದೆ. ಅದರ ಮೊದಲನೇ ಪ್ಯಾರಾದಲ್ಲಿ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಅಚ್ಯುತದಾಸರು ಮಂಗಳವಾರ ಸಂಜೆ...' ಎಂದಿದೆ.'
'ಎರಡನೇ ಪ್ಯಾರಾದಲ್ಲಿ, '1937ರಲ್ಲಿ ವೆಂಕಟರಮಣ ಪೈ, ರುಕ್ಮಿಣೀ ಬಾಯಿ ದಂಪತಿಯ ಮಗನಾಗಿ ಜನಿಸಿದ...' ಎಂದಿದೆ. ಅದರ ಅರ್ಥ ಅವರಿಗೆ 76 ವರ್ಷ ವಯಸ್ಸು. ಆದರೆ ನೀವು 83ವರ್ಷ ಎಂದು ಬರೆದಿದ್ದೀರಿ. ಯಾವುದು ಸರಿ?'
'ಹಾಗೆಯೇ ಅದೇ ಪತ್ರಿಕೆಯ ಪುಟ 2ರ ಮೇಲ್ಭಾಗದಲ್ಲಿ, 'ಹೇಮಲತಾಗೆ ಡಾಕ್ಟರೇಟ್' ಎಂಬ ಸುದ್ದಿ ಇದೆ. ಅದರ ವಿವರಣೆಯೂ ಸರಿಯಾಗಿದೆ. ಅದೇ ಸುದ್ದಿಯ ಕೆಳಗೇನೇ 'ಮಗಳನ್ನು ಕೊಂದು ಆತ್ಮಹತ್ಯೆಗೆ ವ್ಯಕ್ತಿ ಯತ್ನ' ಎಂಬ ಸುದ್ದಿ ಪ್ರಕಟಿಸಿದ್ದೀರಿ. 8 ನೇ ತರಗತಿ ವಿದ್ಯಾರ್ಥಿನಿ ಹೇಮಲತಾ (13) ಕೊಲೆಯಾದ ಬಾಲಕಿ ಎಂದಿದೆ.'
'ಒಂದು ಸುದ್ದಿ ಓದಿ ಸಂತಸ ಪಡುವಷ್ಟರಲ್ಲಿ, ಅದರ ಕೆಳಗಡಯೇ ದುಃಖದ ಸುದ್ದಿ ಪ್ರಕಟಿಸಿರುತ್ತೀರಿ. ಇದು ಅನೇಕ ಬಾರಿ ಆಗಿದೆ. ಸಂತಸ ತರುವ, ದುಃಖ ಪಡುವ, ಹಾಗೂ ಸಾಮಾನ್ಯ ಸುದ್ದಿಗಳು ಎಂದು ಪ್ರತ್ಯೇಕವಾಗಿ ಪ್ರಕಟಿಸುವುದು ಒಳ್ಳೆಯದಲ್ಲವೇ? ಬಹುಶಃ ಮೇಲಿನ ಎರಡೂ ಸುದ್ದಿಗಳು ನನ್ನ ಹೆಸರಿಗೇ ಸಂಬಂಧಿಸಿದವಾದ್ದರಿಂದ ನನಗೆ ತಳಮಳ ಉಂಟಾಗಿರಬಹುದಾದರೂ, ನನ್ನ ಕೋರಿಕೆಯ ಹಾಗೆ ಪ್ರಕಟಿಸಲು ಅಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.
ಮುಖಪುಟದಲ್ಲಿ ಸಾವಿನ ಸುದ್ದಿಗಳನ್ನು ಪ್ರಕಟಿಸಿದಾಗ, ಮುಖಪುಟದಲ್ಲಿ ಅಂತಹ ಸುದ್ದಿಗಳನ್ನು ಪ್ರಕಟಿಸಿ, ಬೆಳಗ್ಗೆ ಬೆಳಗ್ಗೆ ಮೂಡು ಕೆಡಿಸುತ್ತೀರಿ ಎಂದು ಮೂಗುಮುರಿಯುವ ಓದುಗರೂ ಇದ್ದಾರೆ. ಸುದ್ದಿಗಳನ್ನು ಪುಟಕ್ಕೆ ಅಳವಡಿಸುವಾಗ ಸಂತೋಷದ ಸುದ್ದಿ, ದುಃಖದ ಸುದ್ದಿ, ಸಾಮಾನ್ಯ ಸುದ್ದಿ ಎಂದು ವರ್ಗೀಕರಿಸುವುದಿಲ್ಲ. ಒಬ್ಬರಿಗೆ ಸಂತೋಷದ ಸುದ್ದಿಯಾಗಿದ್ದು, ಇನ್ನೊಬ್ಬರಿಗೆ ಬೇಸರದ ಸುದ್ದಿಯಾಗಿರಬಹುದು. ಪತ್ರಕರ್ತ ಸುದ್ದಿಯನ್ನು ದುಃಖದ, ಸಂತೋಷದ ಸುದ್ದಿ ಎಂಬ ದೃಷ್ಟಿಕೋನದಿಂದ ನೋಡುವುದಿಲ್ಲ. ಸುದ್ದಿಯ ಪ್ರಾಮುಖ್ಯ, ಅದಕ್ಕೆ ನೀಡಬೇಕಾದ ಸ್ಥಳ ಇವುಗಳನ್ನಷ್ಟೇ ಗಮನಿಸುತ್ತಾನೆ.
ಪುಟ ನಿರ್ಮಿಸುವಾಗ ಪ್ರತಿ ಸುದ್ದಿಯನ್ನೂ ಓದಿ, ಅದು ಸಂತೋಷದ್ದಾ, ದುಃಖದ್ದಾ, ಎಷ್ಟು ಜನ ಓದುಗರಿಗೆ ಇದು ದುಃಖ ಉಂಟು ಮಾಡಬಹುದು, ಹೆಚ್ಚಿನ ಓದುಗರಿಗೆ ಸಂತೋಷ ಉಂಟುಮಾಡಬಹುದಾ ಎಂಬುದನ್ನು ಯೋಚನೆ ಮಾಡುತ್ತಾ ಕೂರಲು ಸಾಧ್ಯವಾಗುವುದಿಲ್ಲ. ಆದರೂ ಅಪರಾಧ ಸುದ್ದಿಗಳನ್ನು ಆದಷ್ಟೂ ಪ್ರತ್ಯೇಕವಾಗಿಯೇ ಪ್ರಕಟಿಸಲಾಗುತ್ತದೆ.
-ವಿಶ್ವೇಶ್ವರ ಭಟ್