ಸುರಕ್ಷಾ ವ್ಯವಸ್ಥೆಯಲ್ಲಿ ಲೋಪ
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ರಾಜಧಾನಿ ಪಟನಾದಲ್ಲಿ ಭಾನುವಾರ ಏರ್ಪಡಿಸಿದ್ದ 'ಹೂಂಕಾರ' ರ್ಯಾಲಿಯ ಪೂರ್ವದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಾಗೂ ಆರು ನಾಗರಿಕರು ಅದರಲ್ಲಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದು ಅತ್ಯಂತ ಖಂಡನಾರ್ಹವಾದ ಘಟನೆ. ಇದರಿಂದ ದೇಶವೇ ಬೆಚ್ಚಿಬೀಳುವಂತೆ ಆಗಿತ್ತು. ಇದು ಮೂಲಭೂತವಾದಿ ಭಯೋತ್ಪಾದಕರ ಕೃತ್ಯ ಎಂಬುದರಲ್ಲಿ ಸಂಶಯವಿಲ್ಲ. ಈ ಸಂಬಂಧದಲ್ಲಿ ನಡೆದ ಪ್ರಾಥಮಿಕ ತನಿಖೆಗಳಿಂದ ಕಂಡು ಬಂದ ಅಂಶಗಳೂ ಇದನ್ನೇ ಪುಷ್ಟೀಕರಿಸುವಂತೆ ಇವೆ. ಇಂಡಿಯನ್ ಮುಜಾಹಿದೀನ್ಗೆ ಸೇರಿದ ಇಬ್ಬರನ್ನು ಈಗಾಗಲೆ ಬಂಧಿಸಲಾಗಿದೆ.
ಬಿಹಾರವು ಸುರಕ್ಷೆಯ ದೃಷ್ಟಿಯಿಂದ ಸೂಕ್ಷ್ಮವಾದ ಪ್ರದೇಶ. ಅಲ್ಲಿ ನಕ್ಸಲೀಯರ ಹಾವಳಿ ಇದೆ. ನೇಪಾಳದ ಗಡಿಯ ಮೂಲಕ ಉಗ್ರಗಾಮಿಗಳೂ ನುಸುಳಬಹುದು. ಕೆಲವು ತಿಂಗಳ ಹಿಂದೆ ಬೋಧಗಯಾದಲ್ಲಿ ಉಗ್ರಗಾಮಿಗಳು ಸ್ಫೋಟ ನಡೆಸಿದ್ದರು. ಇಂಥ ಹಿನ್ನೆಲೆ ಇರುವ ರಾಜ್ಯದಲ್ಲಿ ಗಣ್ಯ ವ್ಯಕ್ತಿಯೊಬ್ಬರು ನಡೆಸುವ ರ್ಯಾಲಿಗೆ ಸೂಕ್ತವಾದ ರಕ್ಷಣೆಯನ್ನು ಒದಗಿಸುವುದು ಆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದವರ ಕರ್ತವ್ಯ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೆಲವು ತಿಂಗಳ ಹಿಂದೆಯಷ್ಟೇ ಬಿಜೆಪಿ ಸಂಬಂಧವನ್ನು ಕಡಿದುಕೊಂಡವರು. ಈ ರಾಜಕೀಯ ಕಾರಣದಿಂದಲೂ ಅವರು ಮೋದಿಯವರ ರ್ಯಾಲಿ ಸಾಂಗವಾಗಿ ನಡೆಯುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.
ಇದುವರೆಗಿನ ತನಿಖೆಗಳಿಂದ ಮೋದಿಯವರು ರ್ಯಾಲಿ ನಡೆಸಿದ ಸ್ಥಳದಲ್ಲಿ ಹನ್ನೊಂದು ದ್ವಾರಗಳಲ್ಲಿ ಯಾವುದೇ ಲೋಹಶೋಧಕಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ರ್ಯಾಲಿಯಲ್ಲಿಯೇ ಒಂದು ವೇಳೆ ಸ್ಫೋಟ ಸಂಭವಿಸಿದ್ದರೆ ನೂಕುನುಗ್ಗಲಿನಲ್ಲಿ ಸಂಭವಿಸಬಹುದಾಗಿದ್ದ ಸಾವು ನೋವು ನೆನೆದಾಗ ಕಣ್ಣಿಗೆ ಕತ್ತಲೆಯಾಗದಿರದು. ಲಕ್ಷಾಂತರ ಜನರು ಸೇರುವಲ್ಲಿ ಸಾರ್ವಜನಿಕರ ಸುರಕ್ಷತೆಗೆ ಏನು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ನಿತೀಶ್ಕುಮಾರ್ ಅವರಿಗೆ ಯಾರೂ ಪಾಠ ಮಾಡುವ ಅಗತ್ಯವಿರಲಿಲ್ಲ. ತಕ್ಷಣದ ಪ್ರತಿಕ್ರಿಯೆಯಲ್ಲಿ, ತಮ್ಮ ಸರ್ಕಾರಕ್ಕೆ ಮಸಿ ಬಳಿಯಲು ಬಿಜೆಪಿಯವರೇ ನಡೆಸಿದ ಷಡ್ಯಂತ್ರ ಇದು ಎಂಬ ಹೇಳಿಕೆ ಅವರದು. ಅದೇ ರೀತಿ ಬಿಜೆಪಿಯದು ಕೂಡ, ಮೋದಿಯವರ ರ್ಯಾಲಿ ಆಗದಂತೆ ನಿತೀಶ್ ಕುಮಾರ್ ಅವರೇ ಹೀಗೆ ಮಾಡಿದ್ದಾರೆ ಎನ್ನುವ ಆರೋಪ. ಈ ರಾಜಕೀಯ ಕೆಸರೆರಚಾಟದಲ್ಲಿ ವಾಸ್ತವಾಂಶಗಳು ಹಿಂದಕ್ಕೆ ಹೋಗಬಾರದು.
ರಾಜಕೀಯವಾಗಿ ನಿತೀಶ್ ಕುಮಾರ್ ಅವರ ಸ್ಥಾನ ಅತ್ಯಂತ ಸೂಕ್ಷ್ಮವಾದದ್ದು. ಅದೇ ರೀತಿ ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ. ರಾಜಕೀಯ ನಾಯಕರು ತಮ್ಮ ಮುತ್ಸದ್ಧಿತನವನ್ನು ಉಪಯೋಗಿಸಿಕೊಂಡು ಪರಿಸ್ಥಿತಿಯ ಅವಲೋಕನ ಮಾಡಿ ಟೀಕೆಟಿಪ್ಪಣಿಗಳನ್ನು ಮಾಡಬೇಕು.
ಒಂದಂಶವಂತೂ ಸ್ಪಷ್ಟ. ಆರೋಪಿಗಳನ್ನು ಬಂಧಿಸುವಲ್ಲಿ ಬಿಹಾರದ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರನ್ನು ಅಭಿನಂದಿಸಬೇಕು. ಬಿಹಾರದ ಈ ಅನುಭವ ಉಳಿದಕಡೆ ಉಪಯೋಗಕ್ಕೆ ಬರಲಿ ಎಂದು ಹಾರೈಸೋಣ.