ಸ್ವಯಂ ದೃಢೀಕರಣ ಸಾಕು
ಐಐಟಿಗಳಲ್ಲಿ, ಐಐಎಂಗಳಲ್ಲಿ ಅಥವಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ತಮ್ಮ ದಾಖಲಾತಿ ನಕಲು ಪ್ರತಿಗಳಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕಷ್ಟದಿಂದ ಮುಕ್ತಿ ಪಡೆದಿದ್ದಾರೆ. ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ದಾಖಲೆಗಳ ನಕಲು ಪ್ರತಿಗಳಿಗೆ ತಾವೇ ದೃಢೀಕರಣ ಮಾಡಿದರೆ ಸಾಕು. ಈ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ತನ್ನ ಅಧೀನದಲ್ಲಿ ಬರುವ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಇದೊಂದು ಸ್ವಾಗತಾರ್ಹವಾದ ಕ್ರಮವಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶದ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ತೋರಿಸಿದರೆ ಸಾಕು. ಈ ರೀತಿ ಮಾಡಿದರೆ ಹೇಗೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಮತ್ತು ಪಿಂಚಣಿ ಸಚಿವಾಲಯವು ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಗೆ ತನ್ನ ಪ್ರಸ್ತಾವನೆಯನ್ನು ಕಳುಹಿಸಿತ್ತು. ಸಕಾರಾತ್ಮಕ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ಸೂಚನೆ ಹೊರಬಿದ್ದಿದೆ.
ಇದೊಂದು ನಾಗರಿಕಸ್ನೇಹಿ ಕ್ರಮವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ವಿದ್ಯಾರ್ಥಿಗಳ ಹಣವೂ ಉಳಿಯುತ್ತದೆ. ಪತ್ರಾಂಕಿತ ಅಧಿಕಾರಿಗಳ ಮರ್ಜಿ ಕಾಯ್ದುಕೊಂಡು ಅವರ ಸಹಿ ಪಡೆದುಕೊಳ್ಳುವುದೇ ದೊಡ್ಡ ಸಾಹಸ ಎನ್ನುವಂತೆ ಆಗಿತ್ತು. ಅವರಂತೂ ಸುಲಭದಲ್ಲಿ ಸಹಿ ಮಾಡುತ್ತಿರಲಿಲ್ಲ. ಒಬ್ಬರ ಕಡೆ ಹೋದರೆ ಅವರು ಇನ್ನೊಬ್ಬರ ಕಡೆ ಬೆರಳು ತೋರಿಸಿ ಸಾಗಹಾಕಲು ನೋಡುತ್ತಿದ್ದರು. ಪತ್ರಾಂಕಿತ ಅಧಿಕಾರಿಗಳೆಂದರೆ ಏನೋ ವಿಶೇಷ ಎಂಬ ಆವರಣ ಬೆಳೆದುಬಿಟ್ಟಿತ್ತು.
ಈ ಉಪಕ್ರಮವನ್ನು ರಾಜ್ಯ ಸರ್ಕಾರವೂ ಅಳವಡಿಸಿಕೊಳ್ಳಬೇಕು. ಸಿಇಟಿಗೆ ಹಾಜರಾಗುವಾಗ ವಿದ್ಯಾರ್ಥಿಗಳು ಇಂಥ ದೃಢೀಕರಣ ಪಡೆದುಕೊಳ್ಳುವ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದರಿಂದ ಅವರಿಗೆ ಮುಕ್ತಿಕೊಡಿಸಬೇಕು. ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳೂ ಇದನ್ನು ಅಳವಡಿಸಿಕೊಳ್ಳುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿರುವುದು ಸ್ವಾಗತಾರ್ಹವಾಗಿದೆ.