ಇತರ ಪ್ರಯಾಣಿಕರಿಗೆ ಸೆಖೆಯಾಗುವುದಿಲ್ಲವೇ?
ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಭಾರತ ಕಂಡ ನಿಷ್ಠಾವಂತ ರಾಜಕಾರಣಿ. ಸಂಘಟನೆ, ಆಡಳಿತ ಅಷ್ಟೇ ಏಕೆ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಸರಳತೆ ಮತ್ತು ಪ್ರಾಮಾಣಿಕತೆಯನ್ನು ತೋರಿದಂತಹ ಧೀಮಂತ ವ್ಯಕ್ತಿಯಾಗಿದ್ದರು. ಅವರು ಗೃಹ ಮಂತ್ರಿಯಾಗಿದ್ದಾಗ, ಸ್ವಂತ ಗೃಹವಿಲ್ಲದ ಗೃಹಮಂತ್ರಿ ಎಂದು ತಮ್ಮನ್ನು ತಾವೇ ಲೇವಡಿ ಮಾಡಿಕೊಂಡಿದ್ದೂ ಇದೆ. ಸಂಸತ್ ಸದಸ್ಯರಾಗಿದ್ದಾಗಲೂ ಮನೆಯಿಂದ ನಡದೇ ಸಂಸದ್ ಭವನಕ್ಕೆ ಹೋಗುತ್ತಿದ್ದರು. ಏಕೆಂದರೆ ಅವರ ಬಳಿ ಸ್ವಂತ ವಾಹನವಾಗಲೀ, ಬಾಡಿಗೆ ವಾಹನದಲ್ಲಿ ಹೋಗಲು ಬೇಕಾದ ಆರ್ಥಿಕ ಸೌಲಭ್ಯಗಳಾಗಲೀ ಇರಲಿಲ್ಲ. ಅವರ ಪತ್ನಿ ಲಲಿತಾ ಶಾಸ್ತ್ರಿಯವರು ತಮ್ಮ ಪತಿಯ ಬಗ್ಗೆ ಬರೆದಿರುವ "ಮೇರೆ ಪತಿ ಮೇರೆ ದೇವತಾ" ಪುಸ್ತಕದಲ್ಲಿ ನಮೂದಿಸಿರುವ ಒಂದು ಘಟನೆ ಅವರ ಸರಳತೆಗೆ ಸಾಕ್ಷಿಯಾಗಿದೆ. 1952ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ರೈಲ್ವೆ ಸಚಿವರಾಗಿದ್ದರು. ರೈಲ್ವೆ ಸಚಿವರಾಗಿದ್ದುದರಿಂದ ಅವರಿಗೆ ಹೋಗಿಬರಲು ಸೆಲೂನ್ ಅಥವಾ ಹವಾನಿಯಂತ್ರಿತ ಬೋಗಿಯನ್ನು ಒದಗಿಸಲಾಗುತ್ತಿತ್ತು. ಸರಳ ಜೀವಿಗಳಾದ ಶಾಸ್ತ್ರಿಯವರು ಅದನ್ನುಪಯೋಗಿಸಲು ನಿರಾಕರಿಸುತ್ತಿದ್ದುದರಿಂದ ಅವರಿಗೆ ಮೊದಲ ದರ್ಜೆಯ ಬೋಗಿಯಲ್ಲಿ ಪಯಣಿಸಲು ಏರ್ಪಾಟು ಮಾಡಲಾಗುತ್ತಿತ್ತು. ಎಲ್ಲೇ ಹೋದರೂ ಅದೇ ಬೋಗಿಯನ್ನು ಜೋಡಿಸುತ್ತಿದ್ದರು, ಕಾರಣ ಅದರಲ್ಲಿ ಸ್ನಾನಕ್ಕೆ ಒಳ್ಳೆಯ ಬಚ್ಚಲನ್ನು ಜೋಡಿಸಲಾಗಿತ್ತು. ಕಡು ಬೇಸಿಗೆಯ ಒಂದುದಿನ, ಶಾಸ್ತ್ರಿಯವರು ತಮ್ಮ ಪತ್ನಿಯ ಜೊತೆ ರೈಲಿನಲ್ಲಿ ಪಯಣಿಸುತ್ತಿದ್ದರು. ಹೊರಗಡೆ ತುಂಬಾ ಸೆಕೆಯಿದ್ದರೂ ಬೋಗಿಯ ಒಳಗಡೆ, ತಣ್ಣಗಿತ್ತು. ಇದೇನು ಹೀಗೆ ಎಂದು ತಮ್ಮ ಆಪ್ತ ಕಾರ್ಯದರ್ಶಿ ಕೈಲಾಶ್ ಬಾಬುರನ್ನು ಕೇಳಿದರು. ಈ ಬೋಗಿಯಲ್ಲಿ ಕೂಲರ್ ಅಳವಡಿಸಲಾಗಿದೆ ಎಂದು ಆತ ಹೇಳಿದ. ಅದನ್ನು ಕೇಳಿ ಶಾಸ್ತ್ರಿಯವರಿಗೆ ಒಂದೆಡೆ ಅಚ್ಚರಿ, ಇನ್ನೊಂದೆಡೆ, ತಮ್ಮನ್ನು ಕೇಳದೆಯೇ ಕೂಲರ್ ಅಳವಡಿಸಿದ್ದಾರಲ್ಲಾ ಎಂಬ ಅಸಮಾಧಾನ. ಆಗ ಅವರು ಹೇಳಿದರು, "ರೈಲಿನಲ್ಲಿ ಪಯಣಿಸುತ್ತಿರುವ ಇತರ ಪ್ರಯಾಣಿಕರಿಗೆ ಸೆಖೆಯಾಗುವುದಿಲ್ಲವೆ? ಸಾಮಾನ್ಯ ಜನರಿಗಿಲ್ಲದ ಸೌಲಭ್ಯ ನನಗೆ ಬೇಕಾಗಿಲ್ಲ" ಎಂದು. ಇಷ್ಟು ಹೇಳಿ ಮುಂದಿನ ಸ್ಟೇಷನ್ನಿನಲ್ಲಿ ಕೂಲರ್ ತೆಗೆಸಿಬಿಡಲು ಆದೇಶಿಸಿದರು. ಮುಂದೆ ಮಥುರಾದಲ್ಲಿ ರೈಲು ನಿಂತಾಗ ಬೋಗಿಯಲ್ಲಿದ್ದ ಕೂಲರ್ರನ್ನು ತೆಗಿಸಿದ ನಂತರವಷ್ಟೇ ತಮ್ಮ ಪ್ರಯಾಣವನ್ನು ಮುಂದುವರೆಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.