ಸಮರ್ಥನೆಗೆ ಅಂಕಿ- ಸಂಖ್ಯೆ ನೀಡಿ
"ಕುರುಬ ಸಮಾಜದವರೆಲ್ಲಾ ಶೈವ ಪಂಥಕ್ಕೆ ಸೇರಿದವರು" ಎಂಬ ಮುಖ್ಯಮಂತ್ರಿಗಳ ಅಧಿಕಾರವಾಣಿಯ ಮತ್ತು ನಿರಾಧಾರವಾದ ಮಾತಿನ ಹಿನ್ನೆಲೆಯಲ್ಲಿ ಅವರಿಗೊಂದು ಸಲಹೆ. ಹೇಗಿದ್ದರೂ ತಾವು ಜಾತಿವಾರು ಗಣನೆ ಆರಂಭಿಸಿರುವುದರಿಂದ ಕುರುಬರಲ್ಲಿ ಎಷ್ಟು ಜನ ಶೈವಪಂಥ, ಎಷ್ಟು ಜನ ವೈಷ್ಣವ ಪಂಥಕ್ಕೆ ಸೇರಿದವರಿದ್ದಾರೆ ಎಂಬ ಗಣನೆಯನ್ನು ಮಾಡಿ ತಮ್ಮ ಹೇಳಿಕೆಯನ್ನು ಸಾರ್ವಜನಿಕವಾಗಿ ಅಂಕಿ ಸಮೇತ ಸಮರ್ಥಿಸಿ. ಇಂದಿನ ರಾಜಕೀಯ ಧುರೀಣರು ರಾಜ್ಯವನ್ನೂ, ದೇಶವನ್ನೂ ಜಾತಿಯ ಆಧಾರದ ಮೇಲೆ ವಿಂಗಡಿಸಿ, ಒಂದು ಪಂಗಡವನ್ನು ಇನ್ನೊಂದು ಪಂಗಡದೊಂದಿಗೆ ದ್ವೇಷ ಬರುವ ಹಾಗೆ ಮಾಡಿ, ನಾಗರೀಕರ ಸಾಮರಸ್ಯವನ್ನು ಹಾಳುಗೆಡವುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಳೆದ ಹತ್ತು ಹಲವು ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕಪ್ಪು ಹಣದಿಂದ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯುತ್ತಿವೆ. ಈಗ ನೇರವಾಗಿ ಸಾರ್ವಜನಿಕ ಹಣವನ್ನು ಹಲವಾರು ಹೊಸ ಯೋಜನೆಗಳಿಗೆ ಬಳಸಿಕೊಂಡು ಮತ ಬ್ಯಾಂಕನ್ನು ಇನ್ನಷ್ಟೂ ಭದ್ರಗೊಳಿಸುತ್ತಿದ್ದೀರಿ. ಇದು ವಿಷಾದಕರ ಮತ್ತು ಕಲಿಗಾಲದ ಮಹಿಮೆ ಎನ್ನಬೇಕು.
- ಕೆ.ವಿ. ಆಚಾರ್ಯ, ವಿಶ್ವೇಶ್ವರಪುರಂ, ಬೆಂಗಳೂರು
ಇದು ಮತ ಪ್ರಚಾರದ ಕೆಲಸ!
ಸಂವಿಧಾನದಲ್ಲಿ ಪ್ರತಿಪಾದಿಸಿದ ಜಾತ್ಯತೀತಗೆ ಬದ್ಧವಾಗಿರಬೇಕಿರುವ ಸರ್ಕಾರವು ಮತಪ್ರಚಾರಕನ ಕೆಲಸ ಮಾಡಬಹುದೇ? ಕರ್ನಾಟಕ ಸರ್ಕಾರದ ಪ್ರಕಾರ ಮಾಡಬಹುದು. ಹೇಗೆ ಎನ್ನುತ್ತೀರಾ? ಮತ್ತಿನ್ನೇನು? ನಮ್ಮ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ರು. 50000 ಪ್ರೋತ್ಸಾಹ ಧನ ನೀಡುತ್ತಿದೆಯೆಂದಾದರೆ ಅದರ ಅರ್ಥ ಇನ್ನೇನು? ಒಂದು ಕಡೆ ವೋಟ್ ಬ್ಯಾಂಕ್ ರಾಜಕಾರಣ, ಇನ್ನೊಂದು ಕಡೆ ಸದ್ದಿಲ್ಲದೇ ಮತ ಪ್ರಚಾರ. ಇಂದು ಬೇರೆಲ್ಲಾ ಮತಪ್ರಚಾರಕರು ಮಾಡುತ್ತಿರುವ ಕೆಲಸವನ್ನು ಸರ್ಕಾರ ತಾನೆ ಕೈಗೆತ್ತಿಕೊಂಡಿದೆ. 'ನೀವು ಮುಸ್ಲಿಮರಾದರೆ ನಿಮ್ಮ ಮದುವೆಗೆ ಸಹಾಯ ಸಿಗುತ್ತದೆ. ಅದೇ ನೀವು ಹಿಂದುವಾಗಿದ್ದರೆ, ಅಥವಾ ಇನ್ನಾವುದೇ ಮತಕ್ಕೆ ಸೇರಿದ್ದರೆ ನಿಮಗೆ ಆ ಸೌಲಭ್ಯವಿಲ್ಲ. ನೀವು ಎಷ್ಟೇ ಬಡವರಾದರೂ, ನಿಮಗೆ ಐವತ್ತು ಸಾವಿರ ರುಪಾಯಿ ಹಣ ಸಿಗಬೇಕಾದರೆ ಮೊದಲು ನೀವು ಮುಸ್ಲಿಂ ಆಗಬೇಕು. ಇದು ಪ್ರಚಾರಕ ಕಾರ್ಯವಲ್ಲದಿದ್ದರೆ ಇನ್ಯಾವುದು ಸ್ವಾಮೀ? ಮತಪ್ರಚಾರ ಮಾತ್ರವಲ್ಲ, ಈ ಸೌಲಭ್ಯ ಸಿಗಬೇಕಾದರೆ ಆ ಮುಸ್ಲಿಂ ಕನ್ಯೆ ಕರ್ನಾಟಕದಲ್ಲಿ ಮೂರು ವರ್ಷ ವಾಸ ಆಗಿರಬೇಕು. ಅಂದರೆ ಕರ್ನಾಟದಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಿಸುವ ಇನ್ನೊಂದು ಹುನ್ನಾರ.. (ಅದರೊಂದಿಗೆ ಸುಳ್ಳು ಪ್ರಮಾಣಪತ್ರ ಮಾಡಿಕೊಡುವ ಅಧಿಕಾರಿಗಳಿಗೆ-ದಲ್ಲಾಳಿಗಳಿಗೆ ಒಂದು ಉತ್ತಮ ಆದಾಯ ಮೂಲ) ಸಂವಿಧಾನವು ಭಾರತೀಯರಿಗೆ ನೀಡಿರುವ 'ಸಮಾನತೆ'ಯನ್ನು ಗಾಳಿಗೆ ತೂರಿರುವ ಕರ್ನಾಟಕ ಸರ್ಕಾರದ ಈ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವವರು ಯಾರೂ ಇಲ್ಲವೇ?
- ಸತ್ಯನಾರಾಯಣ ಭಟ್, ಬೆಂಗಳೂರು
ವೃಥಾ ಹೇಳಿಕೆ
ನಮ್ಮ ಕರ್ನಾಟಕದ ನೂತನ ಸಂಸದೆ ರಮ್ಯಾ ಅವರು ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾಧ್ರಾ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. (ಪುಟ. 2. ಕ.ಪ್ರ. ಅವರು ಹೇಳಿದ್ದು ಕಾಲಂ) ವಾದ್ರಾ ಅವರ ಆರೋಪ ಸಾಬೀತಾಗಲಿಲ್ಲವಂತೆ. ಸಾಬೀತಾದರೆ ಅವರಿಗೆ ಶಿಕ್ಷೆ ನೀಡಲಾಗುತ್ತಿದೆಯೆಂದಿದ್ದು. "ಅಗಸ ಹೊಸದರಲ್ಲಿ ಗೋಣಿ ಚೀಲವನ್ನು ಎತ್ತಿ ಎತ್ತಿ ಒಗೆದ" ಹಾಗಿದೆ.
- ಕುತ್ಪಾಡಿ ಜಯಪ್ರಕಾಶ್ ಹೆಗ್ಡೆ, ತೀರ್ಥಹಳ್ಳಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com