ಕನ್ನಡದ ವಿಷಯದಲ್ಲಿ ಸರ್ಕಾರದ ನಿದ್ದೆ
ಸಾಂಪ್ರದಾಯಕವಾದ ಶುಭ ಹಾರೈಕೆ ಹೇಳದೆ ನೇರವಾಗಿ ನಾನು ವಿಷಯಕ್ಕೆ ಬರುತ್ತಿದ್ದೇನೆ. ನಾವು ನಮ್ಮ ಹಿರಿಯರ ಆಶಯದಂತೆ ಕನ್ನಡದ್ದೇ ಆದ ಒಂದು ನಾಡನ್ನ ಪಡೆದು ಸರಿ ...
ಸಾಂಪ್ರದಾಯಕವಾದ ಶುಭ ಹಾರೈಕೆ ಹೇಳದೆ ನೇರವಾಗಿ ನಾನು ವಿಷಯಕ್ಕೆ ಬರುತ್ತಿದ್ದೇನೆ. ನಾವು ನಮ್ಮ ಹಿರಿಯರ ಆಶಯದಂತೆ ಕನ್ನಡದ್ದೇ ಆದ ಒಂದು ನಾಡನ್ನ ಪಡೆದು ಸರಿ ಸುಮಾರು ಐವತ್ತೇಳು ವರ್ಷ ಕಳೆದರೂ ಕನ್ನಡ ನಾಡು ನುಡಿಯ ಅಳಿವು ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲೇಬೇಕಾದ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದೇವೆ. ಕನ್ನಡ ಕಾವಲು ಸಮಿತಿಯ ಕಾಲ ಮುಗಿದು ಇದೀಗ ಕನ್ನಡ ಅಭಿವೃದ್ಧಿಯ ದಿನಗಳು ನಡೆಯುತ್ತಿದ್ದರೂ ಕನ್ನಡ ಮಾತ್ರ ಇದ್ದಲ್ಲಿಯೇ ಇದೆ. ಸರ್ಕಾರಗಳು ಬಂದು ಹೋದರೂ ಕನ್ನಡಕ್ಕೆ ಒಳ್ಳೆಯ ದಿನಗಳು ಬರಲಿಲ್ಲ ಎಂದು ಮನಸ್ಸಿಗೆ ಬೇಸರವಾಗುತ್ತಿದೆ. ಒಂದು ಕಡೆಯಲ್ಲಿ ಕನ್ನಡದ ಮಕ್ಕಳೆಲ್ಲ ಕನ್ನಡ ಮರೆತು ಆಂಗ್ಲ ಭಾಷೆಯ ಕ್ಯಾಟಿ- ಡಾಗಿಗಳ ಬೆನ್ನು ಹತ್ತುತ್ತಿರುವಾಗ ಕನ್ನಡದ್ದೇ ಸರ್ಕಾರ ಕನ್ನಡ ಶಾಲೆ ಮುಚ್ಚುವ ಲಜ್ಜೆ ಗೇಡಿ ಮಾತನ್ನ ಆಡುತ್ತಿದೆ. ಸರ್ಕಾರವೇ ಇಂತಹ ಮಾತನ್ನು ಆಡಿ ಕನ್ನಡ ಭಾಷೆಯ ಅವಹೇಳನ ಮಾಡುತ್ತಿದೆ. ಕೆಲ ಖಾಸಗೀ ವಿದ್ಯಾಸಂಸ್ಥೆಗಳು ಕನ್ನಡ ಕಡೆಗಣಿಸಲು ಎಲ್ಲ ಕಸರತ್ತು ಮಾಡುವಾಗ ಅವರಿಗೆ ಸಂತಸವಾಗುವ ಹಾಗೆ ಸರ್ಕಾರವೇ ಕನ್ನಡ ಶಾಲೆಗಳನ್ನ ಮುಚ್ಚುವ ಮಾತುಗಳನ್ನು ಆಡುವುದು ಎಷ್ಟು ಸರಿ ಹೇಳಿ? ಕನ್ನಡವನ್ನು ಅಭಿಮಾನದಿಂದ ಕಾಣಬೇಕಾದ ಕನ್ನಡಿಗರು ತಮ್ಮ ಭಾಷೆಯನ್ನು ಕನಿಷ್ಠವಾಗಿ ಕಾಣುತ್ತಿರುವಾಗ ತನ್ನ ಅಧಿಕಾರದ ದಂಡವನ್ನು ಬೀಸಿ ಜನರಲ್ಲಿ ಕನ್ನಡಾಭಿಮಾನ ಬೆಳೆಸಬೇಕಾದ ಸರ್ಕಾರ ಕನ್ನಡದ ವಿಷಯದಲ್ಲಿ ಜನರೊಂದಿಗೆ ತಾನೂ ನಿದ್ದೆ ಮಾಡುತ್ತಿರುವುದು ಇಂದು ಕಂಡು ಬರುತ್ತಿದೆ. ಸರ್ಕಾರದ ಮೇಲ್ಮಟ್ಟದ ಅಧಿಕಾರಿಗಳಲ್ಲಿ ಕನ್ನಡ ಪ್ರೇಮ ಜಾಗೃತಗೊಳಿಸುವ ಬಗ್ಗೆ ಈವರೆಗೆ ಯಾವುದೇ ಕೆಲಸ ಆಗದಿರುವುದು, ಬ್ಯಾಂಕುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗದಿರುವುದು, ಅಷ್ಟು ಇಷ್ಟು ಕೆಲಸ ಮಾಡುತ್ತಿದ್ದ ಅಕಾಡೆಮಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದು, ವಿಧಾನಸೌಧದಲ್ಲಿಯ ಎಲ್ಲರೂ ಕನ್ನಡದ ಕೆಲಸ ಅಂದರೆ ಒಂದು ಬಗೆಯ ಅಲರ್ಜಿ ವ್ಯಕ್ತಪಡಿಸುವುದು, ಕನ್ನಡದ ಕೆಲ ಕಲಾವಿದರನ್ನು ಚಿತ್ರ ನಟರನ್ನು ನೋಡಿಕೊಳ್ಳಬೇಕಾದ ರೀತಿಯಲ್ಲಿ ನೋಡಿ ಕೊಳ್ಳದಿರುವುದು, ಇವೆಲ್ಲ ನಾವು ಸರ್ಕಾರದಿಂದ ನಿರೀಕ್ಷಿಸದೇ ಇದ್ದ ವಿಷಯಗಳು. ನುಡಿಯ ಕುರಿತು ಚಿಂತಿಸುವಾಗ ನಾಡು ಕೂಡ ತಾನಾಗಿಯೇ ಮುಂದೆ ಬರುತ್ತದೆ. ಒಂದು ನಾಡು ಉಳಿದರೆ ಅದಕ್ಕೆ ನೆಲೆಯಾಗಿ ನಿಂತ ನುಡಿಯೂ ಉಳಿಯುತ್ತದೆ. ಈ ಕೆಲ ತಿಂಗಳುಗಳಲ್ಲಿ ನಾಡಿನ ಪ್ರಗತಿಯ ರೇಖೆ ಮಸಕುಮಸಕಾಗಿ ಕಾಣುತ್ತಿದೆ ಅಲ್ಲದೆ, ಎಲ್ಲಿಯೂ ಅದು ಎದ್ದು ಕಾಣುತ್ತಿಲ್ಲ ಅನ್ನುವುದು ಸತ್ಯ. ಅನ್ನ ಭಾಗ್ಯದಂತಹಾ ಯೋಜನೆಗಳು ನಮ್ಮ ಸರ್ಕಾರದ ಅಸಾಮರ್ಥ್ಯ ಎತ್ತಿ ತೋರಿಸುತ್ತಿವೆ. ಸರ್ಕಾರವೇ ಜನರಲ್ಲಿಯ ಸಂಶಯ ನಿವಾರಿಸುವಲ್ಲಿ ಏನೂ ಕೆಲಸ ಮಾಡದೆ ಜನರ ಟೀಕೆಗೆ ಗುರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯೋತ್ಸವವನ್ನು ಏನೆಂದು ಆಚರಿಸುವುದು ನೀವೇ ಹೇಳಿ.
- ಡಾ. ನಾ. ಡಿಸೋಜ, ಸಾಗರ
ಓಲೈಕೆಯ ನೀತಿ
ಶಾದಿ ಭಾಗ್ಯ ಅನ್ನುವುದು ಕಾಂಗ್ರೆಸಿನ ಮುಸ್ಲಿಂರ ಮತ ಓಲೈಕೆಯ ಮುಂದುವರೆದ ಭಾಗ ಅನ್ನಬಹುದು. ಬಡ ಹುಡುಗಿಯರು ಮುಸ್ಲಿಮರಲ್ಲಷ್ಟೇ ಇದ್ದಾರೆಯೇ? ಸರ್ಕಾರವೇ ಮುಂದೆ ನಿಂತು ಒಬ್ಬರಿಗೊಂದು ಇನ್ನೊಬ್ಬರಿಗೊಂದು ಅನ್ನುವಂತೆ ಯೋಜನೆ ತಂದರೆ ಈಗಾಗಲೇ ಅದನ್ನೇ ಬಂಡವಾಳವಾಗಿಸಿಕೊಂಡು ಜಗಳ ಹಚ್ಚುವವರಿಗೆ ಇನ್ನೊಂದು ಅಸ್ತ್ರ ಕೊಟ್ಟಂತಲ್ಲವೇ? ಇನ್ನೊಂದೆಡೆ, ಕರ್ನಾಟಕದ ಮುಸ್ಲಿಮರು ಕನ್ನಡಿಗರಲ್ಲವೇ? ಅವರಿಗೆ ಮದುವೆ ಅಂದ್ರೆ ಅರ್ಥ ಆಗಲ್ವಾ? ಹಾಗಿದ್ದ ಮೇಲೆ ಯೋಜನೆಯ ಹೆಸರೇಕೆ ಶಾದಿ ಭಾಗ್ಯ ಅಂತ? ಅದನ್ನ 'ಮದುವೆ ಭಾಗ್ಯ' ಅಂತ ಕರೆದ್ರೆ ಮದುವೆ ಆಗಲ್ವ? ಇಂತಹ ಓಲೈಕೆಯ ರಾಜಕಾರಣದಿಂದ ಮತ ಗಳಿಸಬೇಕು ಅನ್ನುವುದಕ್ಕಿಂತ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿಯಲು ಇರುವ ಕಾರಣಗಳಾದ ಒಳ್ಳೆಯ ಕಲಿಕೆ, ದುಡಿಮೆ ಅವಕಾಶಗಳನ್ನು ಕಲ್ಪಿಸುವತ್ತ ಸರ್ಕಾರದ ಗಮನ ಹೋದರೆ ದುಡಿಯುವ ಜನರು ತಮ್ಮ ಮದುವೆ ತಾವೇ ಮಾಡಿಕೊಳ್ಳುತ್ತಾರೆ.
- ವಸಂತ ಶೆಟ್ಟಿ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com