ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಲ್ಲಭಭಾಯಿ ಬಗ್ಗೆ ಒಲ್ಲದ ವಿವಾದ

ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಪ್ರತಿದ್ವಂದ್ವಿಗಳಂತೆ ಪರಸ್ಪರ ಟೀಕೆಗಳಲ್ಲಿ ತೊಡಗಿರುವ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ...

Rashmi Kasaragodu
Updated On : 30 Oct 2013, 10:35 am

ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಪ್ರತಿದ್ವಂದ್ವಿಗಳಂತೆ ಪರಸ್ಪರ ಟೀಕೆಗಳಲ್ಲಿ ತೊಡಗಿರುವ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳವಾರ ಗುಜರಾತದ ಅಹ್ಮದಾಬಾದ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕ ವಸ್ತುಸಂಗ್ರಹಾಲಯ ಉದ್ಘಾಟನೆಯ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. ಸರ್ದಾರ್ ಪಟೇಲರ ಕಾರ್ಯಕ್ರಮವಾಗಿದ್ದ ಕಾರಣ ಸಹಜವಾಗಿಯೇ ಮಾತುಗಳು ಅವರ ಸುತ್ತಲೇ ನಡೆದವು. ಪಟೇಲರು ಅಪರೂಪದ ರಾಜಕಾರಣಿ ಎನ್ನುವುದಕ್ಕಿಂತ ಅಪ್ರತಿಮ ದೇಶಭಕ್ತ ಎಂದು ಹೇಳುವುದೇ ಅವರಿಗೆ ಭೂಷಣವಾಗುವ ವಿಶೇಷಣ.
ಪಟೇಲರು ಗಾಂಧೀಜಿಯವರ ಕಟ್ಟಾ ಅನುಯಾಯಿ. ಭಾರತ ಸ್ವಾತಂತ್ರ್ಯವನ್ನು ಪಡೆದ ಅಂದಿನ ಸನ್ನಿವೇಶದಲ್ಲಿ ನೆಹರು ಪ್ರಧಾನಿಯಾದರು. ಪಟೇಲರು ಪ್ರಧಾನಿಯಾಗಲಿಲ್ಲ ಎನ್ನುವ ಕಾರಣಕ್ಕೆ ಅವರನ್ನೊಬ್ಬ ದುರಂತ ನಾಯಕನೆಂದು ಪರಿಗಣಿಸುವ ವರ್ಗವೊಂದು ಸೃಷ್ಟಿಯಾಗಿದೆ. ಪಟೇಲರಿಗೂ ಪ್ರಧಾನಿಯಾಗುವ ಮನಸ್ಸಿದ್ದರೂ ಗಾಂಧೀಜಿಯ ಇಚ್ಛೆಯಂತೆ ನೆಹರು ಅವರನ್ನು ಒಪ್ಪಿಕೊಂಡರು. ಗೃಹಸಚಿವರಾಗಿ ಅವರು ಮಾಡಿದ ಕೆಲಸವನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ನೆಹರು ಮತ್ತು ಪಟೇಲರು ಭಿನ್ನಾಭಿಪ್ರಾಯಗಳ ನಡುವೆಯೂ  ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು ಮತ್ತು ಪರಸ್ಪರ ಗೌರವವನ್ನು ಹೊಂದಿದ್ದರು.
ಪಟೇಲರು ಪ್ರಧಾನಿಯಾಗಿದ್ದರೆ ಹಾಗೆ ಆಗುತ್ತಿತ್ತು ಹೀಗೆ ಆಗುತ್ತಿತ್ತು ಎನ್ನುವುದೆಲ್ಲ ವ್ಯರ್ಥ ಆಲಾಪವೇ.  ಆರ್ಎಸ್ಎಸ್ನ ಕೋಮುವಾದಿ ನಿಲವಿನಿಂದಾಗಿಯೇ ಗಾಂಧೀಜಿಯವರ ಹತ್ಯೆ ನಡೆಯಿತು ಎಂದು ಪಟೇಲರು ಹೇಳಿದ್ದರು. ಆರ್ಎಸ್ಎಸ್ ಹಿನ್ನೆಲೆಯ ನರೇಂದ್ರ ಮೋದಿ ಇದನ್ನು ಹೇಗೆ ಸ್ವೀಕರಿಸಿದ್ದಾರೋ ಗೊತ್ತಿಲ್ಲ.
ಭಾರತದ ಉಕ್ಕಿನ ಮನುಷ್ಯ ಎಂದು ಹೆಸರಾಗಿರುವ ಪಟೇಲರ ಜಗತ್ತಿನಲ್ಲಿಯೇ ಅತಿ ಎತ್ತರದ ಉಕ್ಕಿನ ಪ್ರತಿಮೆಯನ್ನು ನಿರ್ಮಿಸಲು ಮೋದಿ ಹೊರಟಿದ್ದಾರೆ. ಇದಕ್ಕಾಗಿ ದೇಶದ ಎಲ್ಲ ರೈತರಿಂದ ಕಬ್ಬಿಣದ ಕೃಷಿ ಸಲಕರಣೆಗಳನ್ನು ಸಂಗ್ರಹಿಸಲಾಗುತ್ತಿದೆ. ಪಟೇಲರು ಗುಜರಾತಿನವರು, ನಾನೂ ಗುಜರಾತಿನವನು. ಕಾರಣ ಪಟೇಲರು ತಮ್ಮ ಪಕ್ಷದ ಆಸ್ತಿ ಎನ್ನುವಂಥ ಧೋರಣೆ ಮೋದಿಯವರದಾಗಿದ್ದರೆ ಅದು ಒಪ್ಪುವಂಥದ್ದಲ್ಲ.
ಪ್ರಧಾನಿ ಮನಮೋಹನ ಸಿಂಗ್ ಅವರು ಮೋದಿಯವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಪಟೇಲರು ಕಾಂಗ್ರೆಸ್ಸಿಗರಾಗಿದ್ದರು ಎನ್ನುವುದರ ಜೊತೆಯಲ್ಲಿಯೇ ಅವರು ಜಾತ್ಯತೀತವಾದಿಯಾಗಿದ್ದರು, ಉದಾರವಾದಿಯಾಗಿದ್ದರು. ಜೊತೆಗೆ ಇತರರ ಅಭಿಪ್ರಾಯಗಳನ್ನು ಗೌರವಿಸುವವರಾಗಿದ್ದರು ಎಂದು ಹೇಳಿದ್ದಾರೆ. ಪಟೇಲರನ್ನು 'ಹೈಜಾಕ್' ಮಾಡುವ ಪ್ರಯತ್ನಕ್ಕೆ ಇದೊಂದು ತೀಕ್ಷ್ಣ ಪ್ರತಿಕ್ರಿಯೆಯೇ. ಪಟೇಲರು ಹಾಗಿದ್ದರು ಎಂದು ಒತ್ತಿ ಹೇಳುವ ಮೂಲಕ ನೀವು ಹಾಗಿಲ್ಲ ಎಂದು ಪ್ರಧಾನಿಯು ಮೋದಿಗೆ ಹೇಳಿದಂತಿದೆ.  ಕಾಂಗ್ರೆಸ್ ಪಕ್ಷಕ್ಕೆ ಪಟೇಲರ ಮಹತ್ವ ಗೊತ್ತಾಗಿದ್ದು ಮೋದಿಯವರು ಅವರ ಬಗ್ಗೆ ಮಾತನಾಡಲು ಆರಂಭಿಸಿದ ಮೇಲೆಯೇ ಎಂದು ಹೇಳಬೇಕು. ಅವರ ಜನ್ಮದಿನ ಹಾಗೂ ಪುಣ್ಯತಿಥಿಯ ಸಂದರ್ಭಗಳಲ್ಲಿ ಅವರನ್ನು ನೆನಪಿಸಿಕೊಂಡಿದ್ದು ಅಪರೂಪ. ಅವರಿಗೆ 'ಭಾರತ ರತ್ನ'ವನ್ನು ಅವರ ನಿಧನದ ಎಷ್ಟೋ ವರ್ಷಗಳ ಬಳಿಕ ಪ್ರಕಟಿಸಲಾಯಿತು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.
ಪಟೇಲರ ವ್ಯಕ್ತಿತ್ವ ಪಕ್ಷಗಳ ಪರಿಧಿಯನ್ನು ಮೀರಿದ್ದು. ಎಲ್ಲ ಪಕ್ಷಗಳ ಗೌರವವನ್ನು ಅವರು ಇಂದು ಸಂಪಾದಿಸಿದ್ದಾರೆ ಎಂದರೆ ಅವರು ಅದೆಷ್ಟು ದೊಡ್ಡವರು ಎನ್ನುವುದು ಗೊತ್ತಾಗುತ್ತದೆ. ಅವರು ನಮ್ಮವರು, ನಿಮ್ಮವರಲ್ಲ ಎಂದು ಪಕ್ಷ ರಾಜಕೀಯದ ಕೆಸರಿನಲ್ಲಿ ಪಟೇಲರನ್ನು ಎಳೆಯುವುದೆಂದರೆ ಅವರಿಗೆ ಅಗೌರವ ತೋರಿಸಿದಂತೆಯೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement