ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕನ್ನಡ ಚಿಂತನೆಯ ದಿನ

Mainashree
Updated On : 31 Oct 2013, 11:02 am

ಮತ್ತೊಂದು ಕರ್ನಾಟಕ ರಾಜ್ಯೋತ್ಸವ ಬಂದಿದೆ. ಅದೇ ಅದೇ ಕನ್ನಡ ಪರ ಹೇಳಿಕೆಗಳು, ಘೋಷಣೆಗಳು, ಸಂಕಲ್ಪಗಳು ಕೇಳಿಬರುವ ಹೊತ್ತು ಇದು. 1956ರಿಂದ ಇಲ್ಲಿಯ ವರೆಗಿನ ಕನ್ನಡ ತೇರು ಸಾಗಿಬಂದ ದಾರಿಯನ್ನು ನೆನಪಿಸಿಕೊಂಡಾಗ ಸಾಧಿಸಿರುವುದು ಕಡಿಮೆ ಸಾಧಿಸಬೇಕಿರುವುದು ಅಧಿಕ ಎಂಬ ಭಾವನೆ ಮೂಡದೆ ಇರದು.
ಅಖಂಡ ಕರ್ನಾಟಕದ ಮತ್ತು ಕನ್ನಡ ಭಾಷಿಕರೆಲ್ಲ ಒಂದು ಆಡಳಿತದ ಅಡಿಯಲ್ಲಿ ಸೇರಬೇಕೆಂಬ ಕೂಗು ಕೇಳಿಬಂದದ್ದು ಕಳೆದ ಶತಮಾನದ ಆರಂಭದ ಹೊತ್ತಿಗೇ. ಮುಂಬಯಿ ಕರ್ನಾಟಕದಲ್ಲಿ, ನಿಜಾಮನಿಗೆ ಸೇರಿದ ಕರ್ನಾಟಕದ ಭಾಗಗಳಲ್ಲಿ, ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಕರಾವಳಿ ಕರ್ನಾಟಕದ ಭಾಗದಲ್ಲಿ ಹೆಚ್ಚೂಕಡಿಮೆ ಏಕಕಾಲದಲ್ಲಿ ಏಕೀಕರಣದ ಚಿಂತನೆ ಮೊಳಕೆಯೊಡೆದವು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಅದರ ಮುಖವಾಣಿಯಾದ ವಾಗ್ಭೂಷಣ, ಮೈಸೂರಿನ ಪ್ರಬುದ್ಧ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಅದರ ಮುಖವಾಣಿಯಾದ ಸಾಹಿತ್ಯ ಪರಿಷತ್ಪತ್ರಿಕೆ ಇವೆಲ್ಲ ಕನ್ನಡ ಪರ ಚಳವಳಿಯನ್ನು ಕಟ್ಟುವುದಕ್ಕೆ ನಿರಂತರವಾಗಿ ಕೆಲಸ ಮಾಡಿ ಭದ್ರ ಬುನಾದಿಯನ್ನು ಹಾಕಿದವು.
ದೇಶದ ಸ್ವಾತಂತ್ರ್ಯ ಚಳವಳಿಯ ಜೊತೆಜೊತೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿಯೂ ಸಾಗಿತು. ಭಾರತವನ್ನು ತಾಯಿಯೆಂದೂ ಕರ್ನಾಟಕವನ್ನು ಮಗಳೆಂದೂ ಭಾವಿಸಿ ಕನ್ನಡ ಕವಿಗಳು ಕವಿತೆಗಳನ್ನು ಬರೆದರು. ಘೋಷ ವಾಕ್ಯಗಳನ್ನು ನೀಡಿದರು. ಕನ್ನಡ ಮಾತನಾಡುವವರೆಲ್ಲ ಒಂದು ಆಡಳಿತದ ಅಡಿಯಲ್ಲಿ ಸೇರಿದ ಮೇಲೆ  ದೇವರಾಜ ಅರಸು ಅವರು ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಿದರು. ನಂತರದ ದಿನಗಳಲ್ಲಿ ಕನ್ನಡ ಚಳವಳಿಯ ಕಾವು ತಗ್ಗುತ್ತ ಬಂತು. ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಇದುವರೆಗೂ ಪೂರ್ತಿಯಾಗಿ ಯಶಸ್ವಿಯಾಗಿಲ್ಲ. ಇದಕ್ಕೆ ನೌಕರಶಾಹಿಯ ಅಸಡ್ಡೆಯೂ ಕಾರಣ. ಕನ್ನಡ ಚಳವಳಿಗಳು ಇಂದು ಹೋರಾಡುವುದಕ್ಕೆ ವಿಷಯವೇ ಇಲ್ಲದಂತೆ ಇವೆ. ಕನ್ನಡ ಹೋರಾಟಗಾರರು ಜನತೆಯ ಧ್ವನಿಯಾಗಬೇಕಾಗಿದೆ.
ಕನ್ನಡವನ್ನು ಗಟ್ಟಿಯಾಗಿ ನೆಲೆಯೂರಿಸುವುದಕ್ಕೆ ಸರ್ಕಾರದ ಮಟ್ಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಕನ್ನಡ ಪುಸ್ತಕ ಪ್ರಾಧಿಕಾರವಿದೆ. ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಗಣಕ ಪರಿಷತ್ತು ಹೀಗೆ ವಿವಿಧ ಸಂಸ್ಥೆಗಳಿವೆ. ಇವುಗಳು ಯೋಜನೆ ರೂಪಿಸಿದರೆ ಅನುಷ್ಠಾನಗೊಳಿಸುವುದಕ್ಕೆ ಹಣಕಾಸಿನ ಅಡಚಣೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆದೇಶಗಳನ್ನು ನೀಡುತ್ತದೆ. ಸುತ್ತೋಲೆಗಳನ್ನು ಹೊರಡಿಸುತ್ತದೆ. ಆದರೆ ಅವು ಅನುಷ್ಠಾನವಾಗದಿದ್ದರೆ ಕ್ರಮಕೈಗೊಳ್ಳುವ ಶಾಸನಾತ್ಮಕ ಅಧಿಕಾರ ಅದಕ್ಕಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರ ಆಚೆಗೆ ಗಮನಾರ್ಹವಾದಂಥ ಕೆಲಸ ಮಾಡುತ್ತಿಲ್ಲ. ಯಾವುದೇ ಸಾಂಸ್ಕೃತಿಕ ಹೋರಾಟದ ನೇತೃತ್ವವನ್ನು ಅದು ವಹಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ.
ಕನ್ನಡಕ್ಕೆ ಬಹಳ ಹೋರಾಟ ಮಾಡಿದ ಬಳಿಕ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದಕ್ಕಿತು. ಹೀಗೆ ಹೋರಾಟ ಮಾಡಿ ದಕ್ಕಿಸಿಕೊಂಡ ಸ್ಥಾನಮಾನದಿಂದ ದೊರೆತ ಅನುದಾನವನ್ನು ಬಳಸಿಕೊಳ್ಳುವುದಕ್ಕೆ ಸಮರ್ಪಕವಾದ ಯೋಜನೆಗಳೇ ಇನ್ನೂ ಘೋಷಣೆಯಾಗಬೇಕಾಗಿದೆ. ಕನ್ನಡ ನಾಮಫಲಕ ಕಡ್ಡಾಯ ಮಾಡಿ ಆದೇಶವೇನೋ ಹೊರಡಿಸಲಾಗಿದೆ. ಜಾರಿ ಎಲ್ಲಾಗಿದೆ?
ಕನ್ನಡದಲ್ಲಿ ಇಂದು ಆಗಬೇಕಾಗಿರುವುದು ನಿಘಂಟು ರಚನೆ. ಒಂದು ಭಾಷೆ ಬೆಳೆಯುವುದು ಅದಕ್ಕೆ ಹೊಸಹೊಸ ಪದಗಳ ಸೇರ್ಪಡೆಯಿಂದ. ಇಂಗ್ಲಿಷ್ ಭಾಷೆಗೆ ಪ್ರತಿವರ್ಷ ಸುಮಾರು ಐದು ನೂರು ಪದಗಳು ಸೇರ್ಪಡೆಯಾಗುತ್ತವೆ. ಅವು ನಿಘಂಟುವಿಗೆ ಸೇರ್ಪಡೆಯಾಗುತ್ತ ಹೋಗುತ್ತವೆ. ನಮ್ಮಲ್ಲಿ ಸಾಹಿತ್ಯ ಪರಿಷತ್ತು ಇಂಥ ನಿಘಂಟುವಿನ ರಚನೆಗೆ ಮುಂದಾಗಬೇಕು. ಪ್ರತಿವರ್ಷ ಕನ್ನಡ ನಿಘಂಟುವಿನ ಹೊಸ ಆವೃತ್ತಿ ಹೊರಬರಬೇಕು. ಅದೇ ರೀತಿ ಪ್ರತಿಯೊಂದು ವೃತ್ತಿಗೂ ಅವುಗಳದೇ ಆದ ವಿಶೇಷ ಪದ ಸಂಪತ್ತು ಇರುತ್ತದೆ. ಕಾರಣ ವೃತ್ತಿ ಪದಕೋಶಗಳು ಬರಬೇಕು.
ಕಲಿಕೆಯ ಮಾಧ್ಯಮ ಯಾವುದಾಗಬೇಕು ಎಂಬುದು ಇನ್ನೂ ಗೊಂದಲದ ಗೂಡಾಗಿಯೇ ಇದೆ. ಇಂಗ್ಲಿಷನ್ನು ಯಾವ ವರ್ಗದಲ್ಲಿ ಕಲಿಸಬೇಕು, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಮಟ್ಟಕ್ಕೆ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಮುಟ್ಟುವುದಕ್ಕೆ ಏನು ಮಾಡಬೇಕು ಎಂಬುವುದರ ಬಗ್ಗೆ ಸ್ಪಷ್ಟ ಯೋಜನೆಗಳೇ ಇಲ್ಲ.
ಇದು ಗಡಿನಾಡಿನಲ್ಲಿ ಕನ್ನಡದ ವಾತಾವರಣವನ್ನು ಉಜ್ವಲವಾಗಿ ಇಟ್ಟುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳು ಕಷ್ಟದಲ್ಲಿ ದಿನಗಳನ್ನು ನೂಕುತ್ತಿವೆ. ಸಕಾಲಕ್ಕೆ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿಲ್ಲ. ಗಡಿಯಾಚೆ ಇರುವ ಕನ್ನಡ ಶಾಲೆಗಳಿಗೆ ಸಕಾಲದಲ್ಲಿ ಕನ್ನಡ ಪುಸ್ತಗಳು ಪೂರೈಕೆಯಾಗುತ್ತಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ರಚಿಸಿದೆ. ಅದು ಮಾಡಿದ ಶಿಫಾರ್ಸುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ತರುವುದಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು. ಉತ್ತರದಾಯಿತ್ವವನ್ನು ನಿಗದಿಪಡಿಸಬೇಕು.
ಮುಖ್ಯವಾಗಿ ಆಗಬೇಕಿರುವುದು ಕನ್ನಡದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುವುದು. ಇದು ಕೇವಲ ಸರ್ಕಾರದಿಂದ ಆಗುವಂಥದ್ದಲ್ಲ. ಕನ್ನಡವನ್ನು ಬೆಳೆಸುವುದಕ್ಕೆ ವಿವಿಧ ಸಂಘ ಸಂಸ್ಥೆಗಳು, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿ ಮನಸ್ಸು ಮಾಡಬೇಕು. ಕನ್ನಡ ಪತ್ರಿಕೆ ಓದುವುದು, ಕನ್ನಡ ಪುಸ್ತಕ ಖರೀದಿಸಿ ಓದುವುದು, ಕನ್ನಡದಲ್ಲಿಯೇ ಸಂಭಾಷಣೆಯನ್ನು ನಡೆಸುವುದು, ನೆರೆಹೊರೆಯವರಲ್ಲಿ ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸುವುದು- ಹೀಗೆ ಪುಟ್ಟಪುಟ್ಟ ಕಾರ್ಯಗಳಿಂದ ಕನ್ನಡವನ್ನು ನಾವು ಬೆಳೆಸಬಹುದು.
ಗುಜರಾತಿನಲ್ಲಿ 'ವಾಚೇ ಗುಜರಾತಿ' ಅಂದರೆ ಗುಜರಾತಿ ಓದಿ ಎಂಬ ಆಂದೋಳನವನ್ನು ಅಲ್ಲಿಯ ಸರ್ಕಾರ ಮಾಡಿದೆ. ಭಾಷೆಯನ್ನು ಬೆಳೆಸುವುದಕ್ಕೆ ಇದೊಂದು ಆದರ್ಶ. ಕನ್ನಡ ಓದಿ ಎಂಬ ಆಂದೋಳನವನ್ನು ಕರ್ನಾಟಕದಲ್ಲಿ ಆರಂಭಿಸಬೇಕಾದ ಅಗತ್ಯ ಇಂದಿದೆ. ಒಂದು ಭಾಷೆಯ ಬಗ್ಗೆ ಪ್ರೀತಿ ಎನ್ನುವುದು ಅಂತರಾಳದಲ್ಲಿ ಹುಟ್ಟಬೇಕು. ಬೇರೆಯವರಿಂದ ಬೋಧಿಸಿಕೊಂಡು ಬರುವಂಥದ್ದಲ್ಲ. ಈ ಪ್ರೀತಿ ಹುಟ್ಟುವುದಕ್ಕೆ ಏನು ಮಾಡಬೇಕು ಎಂಬುದನ್ನು ಈ ರಾಜ್ಯೋತ್ಸವದ ಸಂದರ್ಭದಲ್ಲಿ ಗಣ್ಯರೆಲ್ಲ ಚಿಂತಿಸಿ ತಿಂಗಳ ಕೊನೆಯಲ್ಲಿ ಒಂದು ಘೋಷಣಾಪತ್ರವನ್ನು ಹೊರಡಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement