ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

'ಜಾಹಿರಾತು- ಜಾಹೀರಾತು' ಚರ್ಚೆಯನ್ನು ಬೆಂಗಳೂರಿನ ಎಚ್.ಆನಂದರಾಮ ಶಾಸ್ತ್ರೀ ಮುಂದುವರೆಸಿದ್ದಾರೆ....

Rashmi Kasaragodu
Updated On : 2 Sept 2013, 10:54 am

'ಜಾಹಿರಾತು- ಜಾಹೀರಾತು' ಚರ್ಚೆಯನ್ನು ಬೆಂಗಳೂರಿನ ಎಚ್.ಆನಂದರಾಮ ಶಾಸ್ತ್ರೀ ಮುಂದುವರೆಸಿದ್ದಾರೆ.
"ಜಾಹಿರಾತು- ಜಾಹೀರಾತು' ಪದಜಿಜ್ಞಾಸೆಯಲ್ಲಿ ಕೊಕ್ಕಡ ವೆಂಕಟ್ರಮಣ ಭಟ್ಟರ ವಿವರಣೆಯನ್ನು ಈ ಅಂಕಣದಲ್ಲಿ ನಿರೀಕ್ಷಿಸಿದ್ದೆ. ಆ.28ರಂದು ಅವರ ಅನಿಸಿಕೆಯನ್ನು ಪ್ರಕಟಿಸುವ ಮೂಲಕ ತಾವು ನನ್ನ ಕೆಲಸವನ್ನು ಹಗುರವಾಗಿಸಿದ್ದೀರಿ. ಇನ್ನೊಂದಿಷ್ಟು ವಿವರವನ್ನು ಇಲ್ಲಿ ದಾಖಲಿಸಲಿಚ್ಛಿಸುತ್ತೇನೆ. 'ಜಾಹಿರ್‌' ಪದವು ಪರ್ಷಿಯನ್ ಭಾಷಾ ಮೂಲದ್ದಾದರೂ ಪರ್ಷಿಯಾದ ನೆರೆ ರಾಷ್ಟ್ರಗಳಲ್ಲೂ ಬಳಕೆಗೆ ಬಂದು, 'ಜಾಹಿರಾತ್‌' ಎಂಬ ಅರೇಬಿಕ್ ಭಾಷಾ ರೂಪವು ಅರೇಬಿಯನ್ ರಾಷ್ಟ್ರಗಳಲ್ಲೂ ಚಾಲ್ತಿಗೆ ಬಂದಿತು. ಇವೆರಡೂ ಭಾಷೆಗಳ ಪ್ರಭಾವವು ಉರ್ದು ಮತ್ತು ಹಿಂದಿ ಭಾಷೆಗಳ ಮೇಲೆ ಉಂಟಾದುದರಿಂದಾಗಿ ಕೆಲವು ಭಾರತೀಯ ಭಾಷೆಗಳಲ್ಲೂ ಈ ಪದವು ಸ್ಥಾನ ಪಡೆಯಿತು.  ಕ್ರಿ.ಶ 7-8ನೇ ಶತಮಾನಗಳಲ್ಲಿ ಭಾರತಕ್ಕೆ ವಲಸೆ ಬಂದ ಪಾರ್ಸಿಗಳಲ್ಲಿ ಬಹುಜನರು ಮುಂಬೈ ಪ್ರಾಂತ್ಯದಲ್ಲಿ ನೆಲೆನಿಂತ ಪರಿಣಾಮವಾಗಿ 'ಜಾಹಿರಾತ್‌' ಎಂಬ ಪದವು ಮರಾಠಿ ಭಾಷೆಯಲ್ಲಿ ಹೆಚ್ಚಾಗಿ ಬಳಸಲ್ಪಡತೊಡಗಿತು. ಅದುವೇ ಕನ್ನಡದ 'ಜಾಹಿರಾತು' ಆಗಿದ್ದು, ಕ್ರಮೇಣ ಅದು 'ಜಾಹೀರಾತು' ಎಂಬ ಇನ್ನೊಂದು ರೂಪವನ್ನು ಪಡೆದುಕೊಂಡಿತು. ಹೀಗೆ ಹ್ರಸ್ವರೂಪವು ದೀರ್ಘರೂಪವಾದ ಮತ್ತು ದೀರ್ಘರೂಪವು ಹ್ರಸ್ವರೂಪವಾದ ಅನೇಕ ಉದಾಹರಣೆಗಳು ಕನ್ನಡದಲ್ಲಿವೆ. ಶುದ್ಧರೂಪವನ್ನು ತಿಳಿಸುವುದಷ್ಟೇ ನನ್ನ ಪ್ರಯತ್ನವಾಗಿದೆ. 'ಜಾಹೀರಾತು' ಎಂಬ ಶಬ್ದವು ಅಷ್ಟೊಂದು ಸರಿಯಲ್ಲವೇ ಹೊರತು ಸಂಪೂರ್ಣ ತಪ್ಪು ಎಂದು ಹೇಳಲಾಗುವುದಿಲ್ಲ. 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಮಾತ್ರವಲ್ಲ, ಪತ್ರಿಕೆಯ ಬೇರೆ ಪುಟಗಳಲ್ಲಿ(ಇತರೆ ಪತ್ರಿಕೆಗಳಲ್ಲೂ) 'ಜಾಹೀರಾತು' ಎಂಬ ಪದ ಪ್ರಯೋಗವನ್ನು ಗಮನಿಸುತ್ತಿದ್ದೇನೆ. ಈ ಅಂಕಣವು ಶುದ್ಧರೂಪಗಳನ್ನು ಪದಜಿಜ್ಞಾಸುಗಳಿಗೆ ತಿಳಿಸಬಲ್ಲ ಅತ್ಯುತ್ತಮ ಸಾಧನ ಎಂದು ನಂಬಿದ್ದೇನೆ' ಎಂದು ಅವರು ಪತ್ರ ಬರೆದಿದ್ದಾರೆ.
ಮೈಸೂರಿನಿಂದ ಎಚ್.ವೆಂಕಟೇಶ್ ಎಂಬ ಎಂಜಿನಿಯರ್ ಪತ್ರ ಬರೆದಿದ್ದಾರೆ. 'ಕಾಗುಣಿತ, ವ್ಯಾಕರಣ ಹಾಗೂ ವಾಕ್ಯ ರಚನೆಗಳ ತಪ್ಪುಗಳನ್ನು ಈ ಅಂಕಣದಲ್ಲಿ ಪ್ರಕಟಿಸುತ್ತೀರಿ, ಬೇಸರವಿಲ್ಲ. ಆದರೆ ಆ.26ರ ಸಂಚಿಕೆಯ 7ನೇ ಪುಟದಲ್ಲಿ ಪ್ರಕಟವಾದ 'ಬಳ್ಳಾರಿಯಲ್ಲಿ ಬಾಂಗ್ಲಾದೇಶದ ಬಾಲಕಿಯರ ಮಾರಾಟ ಜಾಲ' ಸುದ್ದಿಯಲ್ಲಿ ಮಾಡಿದ ತಪ್ಪನ್ನು ಮಾತ್ರ ದಯವಿಟ್ಟು ಮುಂದುವರೆಸಿ ಸೂಕ್ಷ್ಮ ಮನಸ್ಸಿನ, ತೆಳು ಚರ್ಮದ ನಾಗರಿಕರಿಗೆ(ಗಂಡಸರನ್ನೂ ಸೇರಿಸಿ) ನೋವನ್ನುಂಟುಮಾಡಿದೆ. ಕೇವಲ 20ರಿಂದ 30 ಸಾವಿರಕ್ಕೆ ಮಾರಾಟ ಮಾಡಿರುವುದನ್ನು ತಮ್ಮ ಆತ್ಮೀಯ ಬಾತ್ಮಿದಾರರು ಪತ್ತೆ ಹಚ್ಚಿರುವುದು ಪ್ರಶಂಸನೀಯ. ಅದೆ ಬಾಲಕಿಯರನ್ನು ಅತಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದರೆ ಈ ವರದಿಯೇ ಬಹುಶಃ ಪ್ರಕಟವಾಗುತ್ತಿರಲಿಲ್ಲ ಎಂದೆನಿಸುತ್ತದೆ. ದಯಮಾಡಿ ಈ ತಪ್ಪನ್ನು ತಿದ್ದಿಕೊಂಡು, ಯಾವ ವಯಸ್ಸಿನ ಬಾಲಕಿಯರನ್ನು ಎಷ್ಟು ದುಡ್ಡಿಗೆ ಮಾರಿದರೆ ಅದು ಶಿಕ್ಷಾರ್ಹವಲ್ಲ ಎಂದು ತಿಳಿಸಿ. ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರದ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಲ್ಲಿ ಒಂದು 'ದಿಟ್ಟ' ಹೆಜ್ಜೆಯನ್ನು ಇಟ್ಟಂತಾಗುತ್ತದೆ' ಎಂದಿದ್ದಾರೆ.
ವೆಂಕಟೇಶ್ ಅವರು ಸುದ್ದಿಯನ್ನು ತಮ್ಮ ದೃಷ್ಟಿಯಿಂದಲೇ ವ್ಯಾಖ್ಯಾನಿಸಿದ ಹಾಗಿದೆ. ಅಲ್ಲಿ ಬಾಲಕಿಯರ ಸಂಕಷ್ಟ ಹಾಗೂ ವ್ಯವಸ್ಥೆಯ ತಪ್ಪುಗಳನ್ನು ಹೇಳಲಾಗಿದೆ. ಕೇವಲ 20ರಿಂದ 30 ಸಾವಿರ ಎಂದ ಮಾತ್ರಕ್ಕೆ ನಮ್ಮ ವರದಿಗಾರರು ದರ ನಿರ್ಧರಿಸಿದಂತಾಗುವುದಿಲ್ಲ. ಯಾವುದೆ ಮನುಷ್ಯನ ಮೌಲ್ಯವನ್ನು ಯಾರಿಂದಲೂ ನಿರ್ಧರಿಸಲು ಸಾಧ್ಯವಿಲ್ಲ.


 -ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement