ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ದಂಡಿಯಾತ್ರೆಗೆ ಗೋವಿಂದ ಪೈ ಊರುಗೋಲು

ಕಾಕಾ ಕಾಲೇಲ್ಕರ್‌ರವರು ಗಾಂಧೀಜಿಯವರ ಕಟ್ಟಾ ಅನುಯಾಯಿಗಳಾಗಿದ್ದರು. ಸಾಬರಮತಿ ಆಶ್ರಮದ ಸದಸ್ಯರಾಗಿದ್ದ ಕಾಲೇಲ್ಕರ್‌ರ ...

Rashmi Kasaragodu
Updated On : 3 Sept 2013, 12:13 pm

ಕಾಕಾ ಕಾಲೇಲ್ಕರ್‌ರವರು ಗಾಂಧೀಜಿಯವರ ಕಟ್ಟಾ ಅನುಯಾಯಿಗಳಾಗಿದ್ದರು. ಸಾಬರಮತಿ ಆಶ್ರಮದ ಸದಸ್ಯರಾಗಿದ್ದ ಕಾಲೇಲ್ಕರ್‌ರ ಪೂರ್ಣ ಹೆಸರು ದತ್ತಾತ್ರೇಯ ಬಾಲಕೃಷ್ಣ ಕಾಲೇಲ್ಕರ್ ಎಂದು. ಉಗ್ರ ರಾಷ್ಟ್ರೀಯವಾದಿಗಳಾಗಿದ್ದ ಕಾಲೇಲ್ಕರ್ ಕಾಲಕಾಲ ರಾಷ್ಟ್ರಮತ್ ಎಂಬ ಮರಾಠಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದರು. ನಂತರ ಬರೋಡದ ಗಂಗಾಧರ್ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮತ್ತು ಸ್ವಾತಂತ್ರ್ಯ ಪ್ರೇಮವನ್ನು ಬೆಳೆಸಿದರು. ಬ್ರಿಟಿಷ್ ಸರ್ಕಾರ ಇದನ್ನು ಮನಗಂಡು ಆ ಶಾಲೆಯನ್ನು ಮುಚ್ಚಿಸಿತು. ನಂತರ ಗಾಂಧೀಜಿಯವರ ಒಡಗೂಡಿ ಅನೇಕ ಚಳವಳಿಗಳಲ್ಲಿ ಭಾಗವಹಿಸಿದರು. ಸರ್ವೋದಯ ಪತ್ರಿಕೆಯ ಸಂಪಾದಕರಾಗಿ ಸಹ ಕೆಲಕಾಲ ಸೇವೆ ಸಲ್ಲಿಸಿದರು. ಅಹಮದಾಬಾದಿನ ಗುಜರಾತ್ ವಿದ್ಯಾಪೀಠ ಸ್ಥಾಪನೆಗೆ ಕಾರಣರಾದರಲ್ಲದೆ ಅದರ ಕುಲಪತಿಗಳೂ ಆಗಿದ್ದರು. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡಲು ಭಾರತದಾದ್ಯಂತ ಹೆಚ್ಚಿನ ಭಾಗವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ಜನಜಾಗೃತಿ ಉಂಟುಮಾಡಿದರು. ಉತ್ತಮ ಬರಹಗಾರರೂ ಆಗಿದ್ದ ಕಾಲೇಲ್ಕರ್ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯಾನಂತರ 12 ವರ್ಷ ರಾಜ್ಯಸಭಾ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದರು. ತಮ್ಮ ಸೇವೆಗಾಗಿ ಪದ್ಮ ವಿಭೂಷಣ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
ರಾಷ್ಟ್ರಭಾಷಾ ಪ್ರಚಾರದ ನಿಮಿತ್ತ ಹೊರಟಿದ್ದ ಕಾಲೇಲ್ಕರ್ ಬೆಂಗಳೂರಿಗೂ ಒಮ್ಮೆ ಆಗಮಿಸಿದ್ದರು. ಆಗ ಅವರು ತಮ್ಮ ಗೆಳೆಯ ಎಂ.ಗೋವಿಂದ ಪೈ ಅವರನ್ನು ಭೇಟಿಯಾಗಲು ಮಂಜೇಶ್ವರಕ್ಕೂ ಬಂದರು. ಪೈಗಳಿಂದ ಸತ್ಕಾರ ಸ್ವೀಕರಿಸಿ ಹೊರಡುವಾಗ ಪೈಗಳು ತಮ್ಮ ಬಳಿ ಇದ್ದ, ಅವರು ಹಿರಿಯರು ಉಪಯೋಗಿಸುತ್ತಿದ್ದ ಅಮೂಲ್ಯವಾದ ಒಂದು ಹಳೆ ಬೆತ್ತವನ್ನು ಕಾಲೇಲ್ಕರ್ ಅವರಿಗೆ ಉಡುಗೊರೆಯಾಗಿ ನೀಡಿದರು. ಮಹಾತ್ಮ ಗಾಂಧಿಯವರು 1930ರಲ್ಲಿ ದಂಡಿಯಾತ್ರೆಗೆ ಹೊರಟಾಗ ಕಾಲೇಲ್ಕರ್ ಅವರು ಅದೇ ಬೆತ್ತವನ್ನು ಗಾಂಧೀಜಿಯವರಿಗೆ ನೀಡಿದರು. ಅದು ಯಾತ್ರೆಯ ಉದ್ದಕ್ಕೂ ಗಾಂಧೀಜಿಯವರ ಸಂಗಾತಿಯಾಗಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿ ಚಾರಿತ್ರಿಕ ಮಹತ್ವ ಗಳಿಸಿತು. ಮಹಾತ್ಮ ಗಾಂಧಿಯವರು ಉಪಯೋಗಿಸಿದ ವಸ್ತು ಸಂಗ್ರಹಾಲಯದಲ್ಲಿ ದಂಡೀ ಯಾತ್ರೆಯ ಸ್ಮಾರಕವಾದ ಈ ಪವಿತ್ರವಾದ ಬೆತ್ತವನ್ನೂ ಇಡಲಾಗಿದೆ. ವಿಶ್ವ, ಗಾಂಧೀಜಿಯವರನ್ನು ಸ್ಮರಿಸುವಷ್ಟು ಕಾಲವೂ ಗೋವಿಂದಪೈಗಳು ನೀಡಿದ ಗಾಂಧೀಜಿಯವರ ಊರುಗೋಲಾಗಿದ್ದ ಈ ಬೆತ್ತವೂ ಸಹ ಸದಾ ಸ್ಮರಣೆಯಲ್ಲಿ ಉಳಿಯುತ್ತದೆ ಎಂಬುದು ಅಭಿಮಾನದ ವಿಷಯ. ಅಂದಹಾಗೆ ಕಾಕಾ ಕಾಲೇಲ್ಕರ್ ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದವರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments