ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗುಜರಾತ್‌ನಲ್ಲಿ ಸಿಡಿದ "ಬಾಂಬು"

Mainashree
Updated On : 4 Sept 2013, 10:44 am

ಕಳೆದ ಏಳು ವರ್ಷಗಳಿಂದಲೂ ಗುಜರಾತ್‌ನ ಜೈಲಿನಲ್ಲಿ ನಕಲಿ ಕಾಳಗದ ನೆಪದ ಕೊಲೆಯ ಆರೋಪದ ವಿಚಾರಣಾಧೀನ ಪೊಲೀಸ್ ಅಧಿಕಾರಿ ಡಿ.ಜಿ. ವನ್ಸಾರಾ ಐಪಿಎಸ್ ಸೇವೆಗೇ ರಾಜಿನಾಮೆ ನೀಡಿ, ಮುಖ್ಯಮಂತ್ರಿ ನರೇಂದ್ರ ಮೋದಿ, ಅವರ ಸಲಹೆಗಾರ ಅಮಿತ್ ಷಾ ಹಾಗೂ ಸರ್ಕಾರದ ವಿರುದ್ಧ ಗಂಭೀರವಾದ ಆರೋಪಗಳನ್ನು ಒಳಗೊಂಡ ಪತ್ರವನ್ನು ಮಂಗಳವಾರ ಪ್ರಕಟಿಸಿ ಅಲ್ಲಕಲ್ಲೋಲವನ್ನು ಉಂಟು ಮಾಡಿರುವುದು, ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸುವ ಸಂಭವವಿದೆ.
  ವನ್ಸಾರಾ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ದರ್ಜೆಯ ಹಿರಿಯ ಅಧಿಕಾರಿ. ಅವರಂತೆಯೇ ಇನ್ನೂ ಐದಾರು ಪೊಲೀಸ್ ಅಧಿಕಾರಿಗಳು ನಕಲಿ ಕಾಳಗ ನಡೆಸಿದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಈ ಅಧಿಕಾರಿಗಳನ್ನು ಬಂಧಿಸಿ, ತನಿಖೆ ನಡೆಸಿದ್ದು ಗುಜರಾತ್ ವಿಶೇಷ ಸಿಐಡಿ ದಳವೇ ಎನ್ನುವುದು ಗಮನಾರ್ಹ.
  ಸೊಹ್ರಾಬುದ್ದೀನ್ ಷೇಕ್, ತುಳಸೀರಾಮ್, ಪ್ರಜಾಪತಿ ಅವರ ಹತ್ಯೆಯ ಪ್ರಕರಣದ ಪ್ರಸ್ತಾಪ ಆಗಿದೆ. ವನ್ಸಾರಾ ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿರುವ ವಿಚಾರಗಳು ನಿಜಕ್ಕೂ ಸ್ಫೋಟಕವಾದದ್ದು. ಗುಜರಾತ್‌ನಲ್ಲಿ 2002ರ ಘಟನೆಗಳ ಅನಂತರ ಜೆಹಾದಿ ಹಿಂಸಾಚಾರ ಉಗ್ರವಾದ ಸ್ವರೂಪವನ್ನು ಪಡೆದಾಗ ಭಯೋತ್ಪಾದಕ ಚಟುವಟಿಕೆಗಳ ವಿಚಾರದಲ್ಲಿ "ಶೂನ್ಯ ಸಹನೆಯ ನೀತಿ" ಜಾರಿಯಾಗಿತ್ತು. ಅದು ಅಧಿಕೃತವಾಗಿ, ಉದ್ದೇಶ ಪೂರ್ವಕವಾಗಿ ಕೈಗೊಂಡ ಕ್ರಮ. ಸರ್ಕಾರದ ಉಸ್ತುವಾರಿಯಲ್ಲೇ ನಡೆದ ಕ್ರಮ.
  ಆದ್ದರಿಂದಲೇ ವನ್ಸಾರಾ, ಅಲ್ಲಿ ನಡೆದಿದ್ದು ನಕಲಿ ಕಾಳಗವಲ್ಲ ಸರ್ಕಾರದ ನೀತಿಯ ಜಾರಿ ಎಂದಿರುವುದು. ಇದು ನಿಜಕ್ಕೂ ಕ್ರೂರವಾದ ವ್ಯಂಗ್ಯ. ದೇಶದ ಇತಿಹಾಸದಲ್ಲೇ ಇದುವರೆಗೆ ಕೇಳಿಬರದೇ ಇದ್ದ ಆರೋಪಗಳು ಆ ಪತ್ರದಲ್ಲಿ ಇವೆ.
  ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ಬಂಧಿಸಿ, ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು ಯಾರೂ ಇದುವರೆಗೆ ಊಹಿಸಿರಲೂ ಇಲ್ಲ.
  ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಕಳಿಸಿದರೆ ಸಂಬಂಧಪಟ್ಟ ರಾಜಕಾರಣಿಗಳಿಗೆ ಬರುವ ಲಾಭವಾದರೂ ಏನು? ಆ ಪ್ರಶ್ನೆಗೆ ವನ್ಸಾರಾ ಪತ್ರದಲ್ಲೇ ಉತ್ತರದ ಸೂಚನೆ ಇದೆ. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ತಂತ್ರ ಇದು.
  ರಾಜ್ಯ ಸರ್ಕಾರವೇ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದರೆ ನಕಲಿ ಕಾಳಗದ ಗುಮ್ಮನನ್ನು ಜೀವಂತವಾಗಿ ಇಡುವುದು ಸಾಧ್ಯ. ಅಧಿಕಾರಸ್ಥ ರಾಜಕಾರಣಿಗಳನ್ನು ರಕ್ಷಿಸಲು ಪೊಲೀಸ್ ಅಧಿಕಾರಿಗಳು "ಶಿಕ್ಷೆಯನ್ನು" ಅನುಭವಿಸುವಂತಾಯಿತು ಎನ್ನುವುದು ಹತ್ತು ಪುಟಗಳ ದೀರ್ಘ ಪತ್ರದ ಸಾರಾಂಶ. ಅವರು ನರೇಂದ್ರ ಮೋದಿ ಅವರನ್ನು ದೂಷಿಸಿರುವುದಕ್ಕಿಂತ ಹೆಚ್ಚಾಗಿ ಮಾಜಿ ಮಂತ್ರಿ ಅಮಿತ್ ಷಾ ಅವರನ್ನೇ ದೂಷಿಸಿದ್ದಾರೆ.
  ಇಂತಹ ಪತ್ರ ಬೆಳಕಿಗೆ ಬಂದಾಗ ಎಲ್ಲವೂ ನಿರೀಕ್ಷಿಸಿದಂತೆಯೇ ಆಗಿದೆ. ಗೃಹ ಮಂತ್ರಾಲಯ ವನ್ಸಾರಾ ಅವರ ರಾಜಿನಾಮೆಯನ್ನು ಒಪ್ಪಿಲ್ಲ. ಸಂಸತ್ತಿನಲ್ಲಿ ಕಾಂಗ್ರೆಸ್ - ಬಿಜೆಪಿ ಸದಸ್ಯರ ನಡುವೆ ಬುಧವಾರ ಸಂಘರ್ಷವೇ ನಡೆದಿದೆ.
  ದೇಶದ ನಾನಾ ಭಾಗಗಳಲ್ಲಿ ಪ್ರಕಟವಾಗಿರುವ ಪ್ರತಿಕ್ರಿಯೆಯೂ ಖಾರವಾಗಿಯೇ ಇದೆ, ನಿಜ. ಸದ್ಯಕ್ಕೆ ಜನರ ಮುಂದೆ ಇರುವುದು ವನ್ಸಾರಾ ಪತ್ರದಲ್ಲಿನ ಆರೋಪಗಳು ಮಾತ್ರ. ಆದರೆ ಇಂತಹ ಆರೋಪಗಳು ಬೆಳಕಿಗೆ ಬಂದಾಗ ಕೇಂದ್ರ ಸರ್ಕಾರ ಮೀನ ಮೇಷ ಎಣಿಸದೇ, ಸ್ವತಂತ್ರವಾದ ತನಿಖೆಗೆ ಏರ್ಪಾಟು ಮಾಡಬೇಕು. ತನಿಖೆ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಇದು ಸಾಮಾನ್ಯವಾದ ಪತ್ರ ಅಲ್ಲ. ಬಾಂಬನ್ನೇ ಸಿಡಿಸಿದಂತಹ ಪತ್ರ ಇದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement