ಸುಪ್ರೀಮ್ ಕೋರ್ಟಿನ ದೊಡ್ಡತನ
ಮಾಹಿತಿ ಹಕ್ಕಿನ ಕಾಯಿದೆಯಂತೆ ಮುಖ್ಯ ಮಾಹಿತಿ ಕಮಿಷನರ್ ಸ್ಥಾನಕ್ಕೆ ಹೈಕೋರ್ಟ್, ಸುಪ್ರೀಮ್ ಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನೇ ನೇಮಿಸಬೇಕೆನ್ನುವ ತನ್ನ ತೀರ್ಪನ್ನು ಸುಪ್ರೀಮ್ ಕೋರ್ಟ್ ಹಿಂದಕ್ಕೆ ಪಡೆದಿದ್ದು, ತಪ್ಪನ್ನು ಒಪ್ಪಿಕೊಂಡು, ದೊಡ್ಡತನವನ್ನು ಪ್ರದರ್ಶಿಸಿದ್ದು ಮೆಚ್ಚುವಂತಹ ಕ್ರಮವೇ.
ಈಗ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರೆನ್ನುವ ತೀರ್ಪನ್ನು ಪುನರ್ ಪರಿಶೀಲಿಸಬೇಕೆನ್ನುವ ಸರ್ಕಾರದ ಅರ್ಜಿಯನ್ನು ಪರಿಶೀಲನೆಗೆ ಸ್ವೀಕರಿಸಿ ಸಂಬಂಧಪಟ್ಟವರಿಗೆಲ್ಲ ನೋಟೀಸು ಜಾರಿ ಮಾಡಲು ಆದೇಶಿಸಿದ್ದೂ ಅಷ್ಟೇ. ಮೊದಲ ತೀರ್ಪು ತಪ್ಪಾಗಿರಬಹುದೇನೋ ಎನ್ನುವ ಸಂಶಯವನ್ನು ಈಗಾಗಲೇ ಅನೇಕರು ವ್ಯಕ್ತಪಡಿಸಿದ್ದಾರೆ.
ಬುಧವಾರ ನೀಡಿದ ತೀರ್ಪಿನಲ್ಲಿ ಸುಪ್ರೀಮ್ ಕೋರ್ಟ್ ಪ್ರಾಸಂಗಿಕವಾಗಿ ಈಗ ಜಾರಿಯಲ್ಲಿರುವ ಜನಪ್ರಾತಿನಿಧಿಕ ಕಾಯಿದೆಯ ಸ್ವರೂಪವೇ ತುಂಬಾ ಅಸ್ಪಷ್ಟವಾಗಿರುವುದನ್ನು ಪ್ರಸ್ತಾಪಿಸಿದೆ. ಮೇಲ್ಮನವಿಗಳಲ್ಲಿ ಅಧೀನ ನ್ಯಾಯಾಲಯಗಳು ನೀಡಿದ್ದ ತೀರ್ಪುಗಳು ತಲೆಕೆಳಗಾಗುವ ಸಂಭವವಿರುವಾಗ, ಒಮ್ಮೆ ಅನರ್ಹತೆಗೆ ಒಳಗಾದ ಚುನಾಯಿತ ಪ್ರತಿನಿಧಿ ಮೇಲ್ಮನವಿಯಲ್ಲಿ ಗೆದ್ದರೆ ಅವರನ್ನು ಅರ್ಹರೆಂದು ಪರಿಗಣಿಸುವುದು ಕಷ್ಟವಾಗುತ್ತದೆ ಎನ್ನುವುದು ಸರ್ಕಾರದ ವಾದ.
ಹಿಂದೆಯೂ ಅನೇಕ ಬಾರಿ ಸಂಸತ್ತು ಶಾಸನ ಸಭೆಗಳು ಅಂಗೀಕರಿಸಿದಂತಹ ಶಾಸನಗಳಲ್ಲಿ ವಿಪರೀತ ದೋಷಗಳು ಕಂಡುಬರುತ್ತಿವೆ ಎಂದು ಸುಪ್ರೀಮ್ ಕೋರ್ಟ್ ಹೇಳಿತ್ತು. ಒಳ್ಳೆಯ ಶಾಸನಗಳನ್ನು ರಚಿಸುವ ಕೌಶಲ ಸರ್ಕಾರಗಳಲ್ಲಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಈ ದೋಷವನ್ನು ನಿವಾರಿಸಬೇಕು.