ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೀಗೊಂದು ಪರ್ಯಾಯ ಮಾರ್ಗ

Mainashree
Updated On : 4 Sept 2013, 10:45 am

ದಿನದಿಂದ ದಿನಕ್ಕೆ ರೂಪಾಯಿಯ ಮೌಲ್ಯ ಡಾಲರ್ ಎದುರು ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವುದು ಹಾಗೂ ದೇಶ ಅನೇಕ ರೀತಿಯ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವುದು ದೇಶದ ಪ್ರತಿಯೊಬ್ಬ ನಾಗರೀಕರು ಆತಂಕಪಡಬೇಕಾದ ಸಂಗತಿಯಾಗಿರುತ್ತದೆ. ಇಂತಹ ಪರಿಸ್ಥಿತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವಂತಹ ಬದಲಾವಣೆಗಳು ವಿಶೇಷವಾಗಿ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳು ಪ್ರಮುಖವಾಗಿ ಕಾರಣವಾಗಿರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನಮ್ಮಂತೆಯೇ ಅನೇಕ ಮುಂದುವರೆದ ರಾಷ್ಟ್ರಗಳು ಅನೇಕ ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿವೆ. ಈ ಹಿನ್ನೆಲೆಯಲ್ಲಿ ಕೇವಲ ಸರ್ಕಾರವನ್ನು ದೂಷಿಸುತ್ತಾ ಸರ್ಕಾರ ನಡೆಸುವವರ ಮೇಲೆ ಬೆರಳು ಮಾಡಿ ತೋರಿಸುತ್ತಾ ನಾಗರೀಕರು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. 1965ರಲ್ಲಿ ಭಾರತ ಮತ್ತು ಚೀನಾ ದೇಶದ ನಡುವೆ ಯುದ್ಧ ಸಂಭವಿಸಿದ ಸಂದರ್ಭದಲ್ಲಿ ಗೋಧಿಯ ಆಮದು ದುಬಾರಿ ಎನಿಸುವ ಕಾರಣಕ್ಕಾಗಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಒಂದು ಹೊತ್ತಿನ ಉಪವಾಸದ ನಿರ್ಧಾರಕ್ಕೆ ಬಂದು ಹೊಸ ಪಂಕ್ತಿಯನ್ನು ಹಾಕಿಕೊಟ್ಟರು. ಅವರಂತೆ ದೇಶದ ಕೋಟಿ ಕೋಟಿ ಜನತೆ ನಡೆದುಕೊಂಡ ಕಾರಣದಿಂದಾಗಿ ಅಂದಿನ ಸಂಕಷ್ಟದಿಂದ ದೇಶ ಪಾರಾಗಿತ್ತು. ಭಾರತ ದೇಶ ಇಂದು ವಿಶೇಷವಾಗಿ ಹೆಚ್ಚಿನ ವಿನಿಮಯವನ್ನು ತೈಲೋತ್ಪನ್ನ ಪದಾರ್ಥಗಳಿಗೆ ವಿನಿಯೋಗಿಸುತ್ತಿರುವುದರಿಂದ ಈ ಸಂಕಷ್ಟ ಎದುರಾಗಲು ಪ್ರಮುಖ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಾಗರೀಕರು ತಮ್ಮ ಪಾಲಿನ ಕರ್ತವ್ಯವನ್ನು ಅರಿತು ಕೆಲವೊಂದು ನಿಬಂಧನೆಗಳಿಗೆ ತಾವೇ ಬದ್ಧರಾಗಬೇಕಾಗುತ್ತದೆ.
ದುಬಾರಿ ವೆಚ್ಚದ ಮದುವೆ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ನಿಯಂತ್ರಿಸಿಕೊಳ್ಳಬೇಕು. ಪ್ರತಿದಿನವೂ ಒಂದು ವಾಹನಕ್ಕೆ ರಜೆ ದಿನವನ್ನಾಗಿ ಘೋಷಿಸಿಕೊಳ್ಳಬೇಕು. ಒಂದು ದಿನ ಕಾರು, ಒಂದು ದಿನ ದ್ವಿಚಕ್ರ ವಾಹನ, ಒಂದು ದಿನ ಬಸ್‌ಗಳು, ಒಂದು ದಿನ ಆಟೋರಿಕ್ಷಾಗಳು ಹೀಗೆ ವಾರದಲ್ಲಿ ಒಂದು ದಿನಗಳ ಕಾಲ ಒಂದೊಂದು ವಾಹನಕ್ಕೆ ರಜೆ ಘೋಷಿಸಿದರೆ ಇದರಿಂದ ಬಳಕೆಯಾಗುತ್ತಿದ್ದ ಡೀಸೆಲ್ ಮತ್ತು ಪೆಟ್ರೋಲ್‌ಗಳ ಆವಶ್ಯಕತೆ ಕಡಿಮೆಯಾಗಿ ಆಮದು ಮಾಡಿಕೊಳ್ಳುವ ಪ್ರಮಾಣವು ಕಡಿಮೆಯಾಗುತ್ತದೆ. ಸರ್ಕಾರವನ್ನು ಚಿನ್ನವನ್ನು ಖರೀದಿಸಬಾರದು ಎಂದು ಪದೇ ಪದೇ ಹೇಳುತ್ತಿದ್ದರೂ ಜನರು ಇನ್ನೂ ಈ ನಿಟ್ಟಿನಲ್ಲಿ ಮನಸ್ಸು ಮಾಡದೇ ಇರುವುದು ಸಹ ಇಂದಿನ ತೊಂದರೆಗಳಿಗೆ ಮತ್ತೊಂದು ಕಾರಣ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಿದರೆ ಮಾತ್ರ ದೇಶದ ಪರಿಸ್ಥಿತಿಯನ್ನು ಸರಿಪಡಿಸುವಲ್ಲಿ ತಮ್ಮ ಪಾಲನ್ನು ನೀಡಬಹುದು. ರಾಜಕೀಯ ನಾಯಕರುಗಳು ಕೇವಲ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಪರ್ಯಾಯವಾದಂತಹ ನೀತಿ ಹೇಗಿರಬೇಕು ಎಂಬುದನ್ನು ತಿಳಿಸುವುದು ಸಹ ಅವರ ಜವಾಬ್ದಾರಿಯಾಗಿರುತ್ತದೆ. ನದಿಯಲ್ಲಿ ಮುಳುಗುತ್ತಿರುವ ಜನರನ್ನು ನೋಡಿ ಬರೀ ಬಾಯಿ ಬಡಿದುಕೊಂಡರೆ ಸಾಲದು. ಅವರನ್ನು ರಕ್ಷಿಸುವ ಪ್ರಯತ್ನಗಳು ಇರಬೇಕು. ಅದೇ ರೀತಿಯಲ್ಲಿ ಬುದ್ಧಿ ಜೀವಿಗಳು ಎನಿಸಿಕೊಂಡವರು ಸಮಸ್ಯೆಗಳನ್ನು ವೈಭವೀಕರಿಸುವುದನ್ನು ಬಿಟ್ಟು ಪರಿಹಾರ ಮಾರ್ಗಗಳನ್ನು ಸೂಚಿಸಬೇಕು. ಚುನಾವಣೆಯ ಅಥವಾ ಓಟಿನ ರಾಜಕಾರಣ ಮಾಡುವ ಕಾಲ ಇದಲ್ಲ.
-ಕೆ.ಎಸ್. ನಾಗರಾಜ್, ಬೆಂಗಳೂರು.
ಆಮದು ತಗ್ಗಲಿ
ಆಮದನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ಕಡಿತಗೊಳಿಸಿ. ಉದಾಹರಣೆಗೆ ತೈಲೋತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಿ, ದೇಶದ ಎಲ್ಲಾ ದರ್ಜೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಕಾರ್ಪೋರೇಟ್ ವಲಯದ ವ್ಯಕ್ತಿಗಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆಯ ಬದಲು ಸಮೂಹ ಸಾರಿಗೆಗೆ ಒತ್ತು ನೀಡಿ ಸಾಮಾನ್ಯ ಜನರಿಗೂ ಮಾದರಿಯಾಗುವಂತೆ ಬಸ್ ಸಾರಿಗೆಗೆ ಪ್ರೇರಣೆಯಾಗುವಂತೆ ಮಾಡಿದಲ್ಲಿ ಇಡೀ ದೇಶದ ತೈಲೋತ್ಪನ್ನಗಳ ಬಳಕೆ ಕಡಿಮೆಯಾಗಿ ಆಮದು ಹರವನ್ನು ತಗ್ಗಿಸಬಹುದು. ಸಾಧ್ಯವಾದಷ್ಟು ದೇಶೀಯ ಉತ್ಪನ್ನಗಳಿಗೆ ತೆರಿಗೆ ಇತ್ಯಾದಿ ಕಡಿಮೆಗೊಳಿಸಿ ಪ್ರೋತ್ಸಾಹಿಸಿ ನಮ್ಮ ಹಣ ನಮ್ಮ ದೇಶದಲ್ಲಿಯೇ ಇರುವಂತೆ ಮಾಡಿರಿ ಹಾಗೂ ಕಚ್ಚಾ ಉತ್ಪನ್ನಗಳ ರಫ್ತಿನ ಬದಲು ತಯಾರೋತ್ಪನ್ನಗಳ ರಫ್ತಿಗೆ ಪ್ರೋತ್ಸಾಹಿಸುವಂತಹ ಯೋಜನೆಗಳನ್ನು ದಯಪಾಲಿಸಿರಿ... ಒಟ್ಟಿನಲ್ಲಿ ಭಾರತದ ರೂಪಾಯಿಯ ಮಾನವನ್ನು ಕಾಪಾಡಿರಿ...
-ಅಮರನಾಥ  ಚೌಧರಿ ಬಿ.ಕೆ. ಸಾಗರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement