ಹಿಂದು ರಾಜ್ಯ ಬ್ರಿಟಿಷ್ ರಾಜ್ಯಕ್ಕಿಂತಲೂ ಮೇಲು
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಸಹಸ್ರಾರು ರಾಷ್ಟ್ರಭಕ್ತರಲ್ಲಿ ಅಷ್ಫಾಕ್ ಉಲ್ಲಾಖಾನ್ ಸಹ ಒಬ್ಬ. ಅವನು ರಾಮ್ಪ್ರಸಾದ್ ಬಿಸ್ಮಿಲ್ಲ ಜನಿಸಿದ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಒಂದು ನಿಷ್ಟಾವಂತ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮತ್ತು ರಾಮ್ಪ್ರಸಾದನನ್ನು ತನ್ನ ಗುರುವಾಗಿಸ್ವೀಕರಿಸಿದ. ಕಟ್ಟಾ ಆರ್ಯ ಸಮಾಜಿಯಾಗಿದ್ದ ರಾಮ್ಪ್ರಸಾದ್ ಬಿಸ್ಮಿಲ್ಲಾರ ಮಿತ್ರನಾಗಿ, ಶಿಷ್ಯನಾಗಿ ಅಷ್ಫಾಕ್ ರಾಷ್ಟ್ರೀಯ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದ. ಅವರೊಡನೆ ಒಂದೇ ತಟ್ಟೆಯಲ್ಲಿ ಊಟಮಾಡುತ್ತಿದ್ದ, ಒಂದೇ ಚಾಪೆಯ ಮೇಲೆ ಮಲಗುತ್ತಿದ್ದ. ಅವರಿಬ್ಬರೂ ಒಂದೇ ದೇಶಪ್ರೇಮದ ಉಸಿರಾಡುತ್ತಿದ್ದರು. ಇದು ಅನೇಕ ಮುಸ್ಲಿಂ ಸಂಪ್ರದಾಯವಾದಿಗಳಿಗೆ ಇಷ್ಟವಾಗುತ್ತಿರಲಿಲ್ಲ. ಹಾಗೆಯೇ ಹಿಂದೂ ಸಂಪ್ರದಾಯವಾದಿಗಳು ಅಷ್ಫಾಕನ ಜೊತೆ ಕಟ್ಟಾ ಹಿಂದೂವಾದಿ ಬಿಸ್ಮಿಲ್ಲಾನ ಒಡನಾಟವನ್ನು ವಿರೋಧಿಸುತ್ತಿದ್ದರು. ಅದ್ಯಾವುದೂ ಇವರ ಸ್ನೇಹ ಬಾಂಧವ್ಯವನ್ನು ಬಾಧಿಸುತ್ತಿರಲಿಲ್ಲ. ಒಮ್ಮೆ 1925 ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಗುರುಶಿಷ್ಯರಿಬ್ಬರೂ ಭಾಗವಹಿಸಿ ಯಶಸ್ವಿ ಕಾರ್ಯಾಚರಣೆ ಮಾಡಿದರು. ಇಂತಹ ದರೋಡೆಗೆ ಅಷ್ಫಾಕ್ ವಿರೋಧಿಯಾಗಿದ್ದರೂ ತನ್ನ ಗುರುವಿನ ಕರೆಗೆ ಓಗೊಡಲೇಬೇಕಾಗಿತ್ತು. ಪೊಲೀಸರು ಬಿಸ್ಮಿಲ್ಲಾರನ್ನು ಬಂಧಿಸಿದರೂ ಅಷ್ಫಾಕ್ ಭೂಗತನಾಗಿ ದೆಹಲಿ ತಲುಪಿದ. ಅಲ್ಲಿ ತಮ್ಮ ಊರಿನವನೇ ಸ್ವಜಾತಿಯ ಒಬ್ಬ ಯುವಕ ಸಿಕ್ಕು ಅವನನ್ನು ಮನೆಗೆ ಕರೆದೊಯ್ದು ಉಪಚರಿಸಿದ. ಆದರೆ ಅವನು ಬಹುಮಾನದ ಆಸೆಗೆ ಬಲಿಬಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಪೊಲೀಸರು ಅಷ್ಫಾಕ್ನನ್ನು ಬಂಧಿಸಿದರು. ಅವನನ್ನು ಮಾಫೀ ಸಾಕ್ಷಿಯನ್ನಾಗಿ ಮಾಡಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡಿದರೂ ಅದಕ್ಕಾತ ಒಪ್ಪಲಿಲ್ಲ. ಅದಕ್ಕಾಗಿಯೇ ಒಬ್ಬ ಮುಸ್ಲಿಂ ಉಚ್ಚ ಅಧಿಕಾರಿಯನ್ನು ನೇಮಿಸಲಾಯಿತು. ಆ ಅಧಿಕಾರಿ ಅಷ್ಫಾಕ್ನ ಮನಪರಿವರ್ತನೆಗೆ ತುಂಬಾ ಪ್ರಯತ್ನಿಸಿದ. ಕಾಂಗ್ರೆಸ್ ಮಾಡುತ್ತಿರುವ ಚಳವಳಿ ಹಿಂದೂ ಸಾಮ್ರಾಜ್ಯ ಸ್ಥಾಪನೆಗಾಗಿ ಮಾಡುತ್ತಿರುವ ಪ್ರಯತ್ನವಾದ್ದರಿಂದ ಮುಸ್ಲಿಂ ಆದ ಅಷ್ಫಾಕ್ ಅದಕ್ಕೆ ಬೆಂಬಲನೀಡಬಾರದೆಂದು ಮನವೊಲಿಸಲು ನೋಡಿದ. ಕೊನೆಗೆ ಎಲ್ಲಾ ಕೇಳಿ ಅಷ್ಫಾಕ್ ಹೇಳಿದ- 'ನೀನು ಹೇಳುವ ಹಿಂದು ಸಾಮ್ರಾಜ್ಯ ಬ್ರಿಟಿಷ್ ರಾಜ್ಯಕ್ಕಿಂತಲೂ ಎಷ್ಟೋ ಮೇಲು. ಆದ್ದರಿಂದ ನಾನು ರಾಷ್ಟ್ರೀಯ ಹೋರಾಟಕ್ಕೆ ಮಾತ್ರ ಬೆಂಬಲ ನೀಡುತ್ತೇನೆ'
ಕೊನೆಗೆ ಮರಣ ದಂಡನೆ ಶಿಕ್ಷೆಗೆ ಗುರಿಯಾದ ಅಷ್ಫಾಕ್ ಡಿಸೆಂಬರ್ 19, 1927 ರಲ್ಲಿ ಗಲ್ಲಿಗೇರಿಸಲ್ಪಟ್ಟ. ಅಚ್ಚರಿಯೆಂದರೆ ಅದೇ ದಿನ ಅವನ ಗುರು ರಾಮಪ್ರಸಾದ್ ಬಿಸ್ಮಿಲ್ಲಾ ಸಹ ಗೋಂಡಾ ಜೈಲಿನಲ್ಲಿ ನೇಣಿಗೆ ಕೊರಳೊಡ್ಡಿದ್ದ!
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.